×
Ad

‘ಒಂದು ದೇಶ-ಒಂದು ಚುನಾವಣೆ’ | ಎಲ್ಲರಿಗೂ ಪ್ರಜಾಪ್ರಭುತ್ವದ ಹಬ್ಬದಲ್ಲಿ ಪಾಲ್ಗೊಳ್ಳಲು ಸಾಧ್ಯ: ಪಿ.ಪಿ.ಚೌಧರಿ

Update: 2026-05-19 00:25 IST

ಬೆಂಗಳೂರು : ‘ಒಂದು ದೇಶ-ಒಂದು ಚುನಾವಣೆ’ ಅಡಿಯಲ್ಲಿ ಒಂದೇ ಬಾರಿಗೆ ಹಲವು ಹಂತಗಳಲ್ಲಿ ಚುನಾವಣೆಯನ್ನು ನಡೆಸಿದರೆ ಎಲ್ಲರಿಗೂ ಪ್ರಜಾಪ್ರಭುತ್ವದ ಈ ಹಬ್ಬದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಲಿದೆ ಎಂದು ಸಂವಿಧಾನ (129ನೆ ತಿದ್ದುಪಡಿ) ಮಸೂದೆ-2024 ಮತ್ತು ಕೇಂದ್ರಾಡಳಿತ ಪ್ರದೇಶಗಳ ಕಾನೂನು (ತಿದ್ದುಪಡಿ) ಮಸೂದೆ-2024 ಕುರಿತ ಜಂಟಿ ಸಂಸದೀಯ ಅಧ್ಯಯನ ಸಮಿತಿಯ ಅಧ್ಯಕ್ಷ ಪಿ.ಪಿ.ಚೌಧರಿ ತಿಳಿಸಿದ್ದಾರೆ.

ಸೋಮವಾರ ನಗರದ ಖಾಸಗಿ ಹೊಟೇಲ್‍ನಲ್ಲಿ ‘ಒಂದು ರಾಷ್ಟ್ರ ಒಂದು ಚುನಾವಣೆ' ಕುರಿತು ಪದ್ಮ ಪ್ರಶಸ್ತಿ ಪುರಸ್ಕೃತರು ಹಾಗೂ ಮಾಧ್ಯಮ ಪ್ರತಿನಿಧಿಗಳೊಂದಿಗೆ ಸಂವಾದ ನಡೆಸಿ, ಅಭಿಪ್ರಾಯ ಸಂಗ್ರಹಿಸಿದ ಬಳಿಕ ಅವರು ಮಾತನಾಡಿದರು.

ದೇಶದಲ್ಲಿ ಒಂದು ವರ್ಷಕ್ಕೆ 5-6 ರಾಜ್ಯಗಳ ವಿಧಾನಸಭೆ ಚುನಾವಣೆಗಳು ನಡೆಯುತ್ತವೆ. ಇದರಿಂದ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ವಿವಿಧ ವಲಯಗಳ ಜನರ ಮೇಲೆ ಪರಿಣಾಮ ಬೀರುತ್ತಿದೆ. ಒಂದು ರಾಜ್ಯದಲ್ಲಿ ಚುನಾವಣೆ ನಡೆದಾಗ, ಇತರ ರಾಜ್ಯಗಳ ಮೇಲೂ ಅದರ ಪರಿಣಾಮ ಉಂಟಾಗುತ್ತದೆ ಎಂದು ಚೌಧರಿ ತಿಳಿಸಿದರು.

ಈ ಹಿನ್ನೆಲೆಯಲ್ಲಿ ಒಂದು ರಾಷ್ಟ್ರ-ಒಂದು ಚುನಾವಣೆ ಜಾರಿಯಾದಾಗ, ಶಿಕ್ಷಕರು, ಆರಕ್ಷಕರು, ಇತರ ಚುನಾವಣಾ ಸಿಬ್ಬಂದಿಯ ಹೊರೆ ಕಡಿಮೆಯಾಗುತ್ತದೆ. ಕಾರ್ಮಿಕರು, ವಲಸಿಗರು ಸೇರಿದಂತೆ ದೇಶಾದ್ಯಂತ ಎಲ್ಲರಿಗೂ ಮತದಾನದ ಅವಕಾಶ ದೊರೆಯಬೇಕು ಎನ್ನುವುದು ಈ ಸಮಿತಿಯ ಉದ್ದೇಶ ಎಂದು ಅವರು ಹೇಳಿದರು.

ಚುನಾವಣೆ ಸುರಕ್ಷಿತವಾಗಿ ನಡೆಯುವುದಕ್ಕೆ ಚುನಾವಣಾ ಆಯೋಗ, ಗೃಹ ಸಚಿವಾಲಯ, ಇವಿಎಂ ಯಂತ್ರಗಳ ಸಿದ್ಧತೆ, ಅಂಚೆ ಮತಗಳು ಹೀಗೆ ವಿವಿಧ ರೀತಿಯ ಸಹಯೋಗ ಅವಶ್ಯಕ. ಸಮಿತಿಯ ಪ್ರಸ್ತಾವನೆಗಳು ಎಲ್ಲರಿಗೂ ತೃಪ್ತಿಕರವಾದಾಗ ಒಂದು ರಾಷ್ಟ್ರ ಒಂದು ಚುನಾವಣೆ ಅನುಷ್ಠಾನವೂ ಸುಲಭವಾಗುತ್ತದೆ. ಇದರಿಂದ ಚುನಾವಣೆಯ ವೆಚ್ಚವನ್ನೂ ದೊಡ್ಡ ಪ್ರಮಾಣದಲ್ಲಿ ತಗ್ಗಿಸಬಹುದು ಎಂದು ಚೌಧರಿ ತಿಳಿಸಿದರು.

ಭಾರತವು ವಿವಿಧತೆಯಲ್ಲಿ ಏಕತೆ ಹೊಂದಿರುವಂತೆ ರಾಜಕೀಯ ಚಿತ್ರಣವೂ ಹಲವು ವೈವಿಧ್ಯತೆಗಳನ್ನು ಹೊಂದಿದೆ. ವಿವಿಧ ಪ್ರದೇಶಗಳಿಂದ ಪ್ರತಿನಿಧಿಸುವ ಜನಪ್ರತಿನಿಧಿಗಳು ತಮ್ಮ ಸಂಸ್ಕೃ ತಿ, ಪರಂಪರೆಯನ್ನು ಎತ್ತಿ ಹಿಡಿಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ ಎಂದು ಅವರು ಹೇಳಿದರು.

ಇದಕ್ಕೂ ಮುನ್ನಾ ದಿನ ಜಂಟಿ ಸದನ ಸಮಿತಿಯು ಕರ್ನಾಟಕ ಸರಕಾರದ ಮುಖ್ಯ ಕಾರ್ಯದರ್ಶಿ ಹಾಗೂ ಪೊಲೀಸ್ ಇಲಾಖೆ ಮುಖ್ಯಸ್ಥರು, ಹಣಕಾಸು ಇಲಾಖೆ, ಗೃಹ, ಶಿಕ್ಷಣ, ಪ್ರವಾಸೋದ್ಯಮ, ಕೃಷಿ ಇಲಾಖೆ, ಕೈಗಾರಿಕೆ, ಆರೋಗ್ಯ, ಕಾರ್ಮಿಕ ಇಲಾಖೆ ಅಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆಗಳ ಅಭಿಪ್ರಾಯಗಳನ್ನು ಸಂಗ್ರಹಿಸಿತು. ಎಚ್‍ಎಎಲ್, ಬಿಇಎಲ್, ಬಿಇಎಂಎಲ್, ಬಿಎಚ್‍ಇಎಲ್, ಕೆಐಒಸಿಎಲ್, ಕೆಎಪಿಎಲ್, ಐಟಿಐ ಲಿಮಿಟೆಡ್, ಐಐಎಂ, ನ್ಯಾಷನಲ್ ಸ್ಕೂಲ್ ಪ್ರತಿನಿಧಿಗಳಿಂದಲೂ ಅಭಿಪ್ರಾಯಗಳನ್ನು ಸಂಗ್ರಹಿಸಿತು. ದೇಶದಲ್ಲಿ ಏಕಕಾಲದಲ್ಲಿ ಚುನಾವಣೆ ನಡೆಸುವುದರಿಂದ ಆಗುವ ಸಾಧಕ-ಬಾಧಕಗಳ ಕುರಿತು ಸಮಿತಿಯು ಮಾಹಿತಿ ಸಂಗ್ರಹಿಸಿತು.

 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News