×
Ad

Bengaluru | ದಾಖಲೆ ಇಲ್ಲದೆ ಬಚ್ಚಿಟ್ಟಿದ್ದ 2.98 ಕೋಟಿ ರೂ. ಹಣ ವಶ

Update: 2026-06-27 21:21 IST

ಬೆಂಗಳೂರು : ನಗರದ ಕುರುಬರಹಳ್ಳಿಯ ಶೆಡ್ ಒಂದರಲ್ಲಿ ಅಧಿಕೃತ ದಾಖಲೆ ಇಲ್ಲದೆ ಬಚ್ಚಿಟ್ಟಿದ್ದ 2.98 ಕೋಟಿ ರೂ.ಗಳನ್ನು ಮಹಾಲಕ್ಷ್ಮೀ ಲೇಔಟ್ ಪೊಲೀಸರು ದಾಳಿ ನಡೆಸಿ ವಶಪಡಿಸಿಕೊಂಡಿರುವ ಮಾಹಿತಿ ತಡವಾಗಿ ಬೆಳಕಿಗೆ ಬಂದಿದೆ.

ಜೂ.2ರಂದು ಮಹಾಲಕ್ಷ್ಮೀ ಲೇಔಟ್ ಪೊಲೀಸ್ ಠಾಣೆಯ ಪಿಎಸ್‍ಐ ರಾಕೇಶ್ ಮತ್ತು ಸಿಬ್ಬಂದಿ ಎಂದಿನಂತೆ ಗಸ್ತು ತಿರುಗುತ್ತಿದ್ದರು. ಈ ವೇಳೆ ಕುರುಬರಹಳ್ಳಿಯ 11ನೇ ಕ್ರಾಸ್‍ನಲ್ಲಿರುವ ‘ಶೇಷಾದ್ರಿ ಇಂಡಸ್ಟ್ರೀಸ್’ ಹೆಸರಿನ ಶೆಡ್‍ನಲ್ಲಿ ಭಾರಿ ಪ್ರಮಾಣದ ನಗದು ಹಣ ಅಕ್ರಮವಾಗಿ ಇಡಲಾಗಿದೆ ಎಂಬ ಖಚಿತ ಮಾಹಿತಿ ಪೊಲೀಸರಿಗೆ ಲಭ್ಯವಾಗಿತ್ತು. ತಕ್ಷಣವೇ ಪೊಲೀಸರ ತಂಡವು ಶೆಡ್‍ಗೆ ತೆರಳಿ ತಪಾಸಣೆ ನಡೆಸಿ, ನಾಲ್ಕು ದೊಡ್ಡ ಚೀಲಗಳಲ್ಲಿ ತುಂಬಿಟ್ಟಿದ್ದ ಹಣ ವಶಕ್ಕೆ ಪಡೆದಿದೆ.

ತಕ್ಷಣವೇ ಪೊಲೀಸರು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿ, ನ್ಯಾಯಾಲಯದ ಅನುಮತಿ ಪಡೆದ ಬಳಿಕ ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಅಧಿಕೃತ ಎಫ್‍ಐಆರ್ ದಾಖಲಿಸಿ, ನಾಗರಾಜ್ ಹಾಗೂ ವೆಂಕಟೇಶ್ ನನ್ನು ವಶಕ್ಕೆ ಪಡೆದಿದ್ದಾರೆ.

ಸದ್ಯ ಬಂಧಿತರಿಬ್ಬರೂ ನ್ಯಾಯಾಲಯದಿಂದ ಜಾಮೀನು ಪಡೆದು ಹೊರಬಂದಿದ್ದಾರೆ. ಆದರೆ, ಹಣಕ್ಕೆ ಸಂಬಂಧಿಸಿದಂತೆ ಯಾವುದೇ ಪೂರಕ ದಾಖಲೆಗಳು ಇಲ್ಲದ ಕಾರಣ ಮಹಾಲಕ್ಷ್ಮಿ ಲೇಔಟ್ ಪೊಲೀಸರು ಹಾಗೂ ಐಟಿ ಇಲಾಖೆಯ ಅಧಿಕಾರಿಗಳು ಈ ಭಾರಿ ಮೊತ್ತದ ಅಸಲಿ ಮೂಲವನ್ನು ಪತ್ತೆ ಹಚ್ಚಲು ತನಿಖೆಯನ್ನು ತೀವ್ರಗೊಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News