ನಾಗರಿಕ ಸೇವೆಯು ಸಮಾಜಮುಖಿ ಬದಲಾವಣೆಗೆ ಅವಕಾಶ : ನೂತನ ಪ್ರಶಿಕ್ಷಣಾರ್ಥಿಗಳಿಗೆ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ಕರೆ
ಬೆಂಗಳೂರು : ‘ಕಾಯಕವೇ ಕೈಲಾಸ' ಎಂಬ ನಾಲ್ನುಡಿಯಂತೆ ಸಮಾಜಕ್ಕೆ ಸೇವೆ ಸಲ್ಲಿಸುವುದು ನಮ್ಮ ಸಂಸ್ಕೃತಿಯ ಅವಿಭಾಜ್ಯ ಅಂಗ. ಸಮಾಜವು ಪ್ರತಿಯೊಬ್ಬರ ಬೆಳವಣಿಗೆಗೆ ಪರೋಕ್ಷವಾಗಿ ಕೊಡುಗೆ ನೀಡಿರುವುದರಿಂದ, ದೊರೆತ ಈ ಅವಕಾಶವನ್ನು ನಿಸ್ವಾರ್ಥ ಸೇವೆಗೆ ಬಳಸಿಕೊಂಡು ಜನರ ಬದುಕಿನಲ್ಲಿ ಅರ್ಥಪೂರ್ಣ ಬದಲಾವಣೆ ತರಬೇಕು ಎಂದು ಸರಕಾರದ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್, ಯುಪಿಎಸ್‍ಸಿ ಪ್ರಶಿಕ್ಷಣಾರ್ಥಿಗಳಿಗೆ ಕಿವಿಮಾತು ಹೇಳಿದ್ದಾರೆ.
ಬುಧವಾರ ಭಾರತೀಯ ನಾಗರಿಕ ಸೇವೆಗೆ (ಯುಪಿಎಸ್ಸಿ) ಕರ್ನಾಟಕದಿಂದ 2025ನೇ ಸಾಲಿನಲ್ಲಿ ಆಯ್ಕೆಯಾದ 16 ಪ್ರಶಿಕ್ಷಣಾರ್ಥಿಗಳಿಗೆ ಮಾರ್ಗದರ್ಶನ ನೀಡಿದ ಅವರು, ಉನ್ನತ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುವಾಗ ಜನರ ಸಮಸ್ಯೆಗಳನ್ನು ಆಲಿಸಿ, ಅವುಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ದೃಷ್ಟಿಕೋನವನ್ನು ಬೆಳೆಸಿಕೊಳ್ಳಬೇಕು. ಸಮಸ್ಯೆಗಳ ಮೂಲ ಕಾರಣಗಳನ್ನು ಸಮಗ್ರವಾಗಿ ವಿಶ್ಲೇಷಿಸಿ, ಅವುಗಳನ್ನು ಪರಿಣಾಮಕಾರಿಯಾಗಿ ಪರಿಹರಿಸುವ ಆಡಳಿತಾತ್ಮಕ ಸಾಮಥ್ರ್ಯವನ್ನು ರೂಢಿಸಿಕೊಳ್ಳುವುದು ನಾಗರಿಕ ಸೇವೆಯ ಮುಖ್ಯ ಜವಾಬ್ದಾರಿ ಎಂದರು.
ಭಾಷೆ-ಸಂಸ್ಕೃತಿಯ ಅರಿವು: ಕರ್ನಾಟಕ ರಾಜ್ಯದಲ್ಲಿ ಉತ್ತಮ ಆಡಳಿತ ಸಂಸ್ಕೃತಿ ಇರುವುದರಿಂದ, ಕರ್ನಾಟಕವು ವಿವಿಧ ಕ್ಷೇತ್ರಗಳಲ್ಲಿ ದೇಶದ ಮುಂಚೂಣಿ ರಾಜ್ಯವಾಗಿ ಗುರುತಿಸಿಕೊಂಡಿದೆ. ನೂತನ ಅಧಿಕಾರಿಗಳಿಗೆ ಮೊದಲ ನೇಮಕಾತಿಯೇ ಮಹತ್ವದ ಹಂತವಾಗಿದ್ದು, ಯಾವ ರಾಜ್ಯದಲ್ಲಿ ಸೇವೆ ಸಲ್ಲಿಸುವ ಅವಕಾಶ ದೊರಕುತ್ತದೆಯೋ ಅಲ್ಲಿನ ಭಾಷೆ, ಸಂಸ್ಕೃತಿ ಹಾಗೂ ಜನಜೀವನವನ್ನು ಅರ್ಥಮಾಡಿಕೊಂಡು ಜನರೊಂದಿಗೆ ಬೆರೆತು ಕಾರ್ಯನಿರ್ವಹಿಸಿದರೆ ಉತ್ತಮ ಆಡಳಿತ ನೀಡಲು ಸಾಧ್ಯವಾಗುತ್ತದೆ ಎಂದು ಅವರು ತಿಳಿಸಿದರು.
ವಿಶೇಷ ಸಾಧನೆ: ಈ ಪೈಕಿ ಪ್ರಪ್ರಥಮ ಭಾರಿಗೆ ಕಲ್ಯಾಣ ಕರ್ನಾಟಕ ಭಾಗದ ಮಹತ್ವಾಕಾಂಕ್ಷಿ ಜಿಲ್ಲೆಯಾದ ಯಾದಗಿರಿಯಿಂದ ನಾಲ್ವರು ಅಭ್ಯರ್ಥಿಗಳು ಭಾರತೀಯ ನಾಗರಿಕ ಸೇವೆಗೆ ಆಯ್ಕೆಯಾಗಿರುವುದು ವಿಶೇಷ ಸಾಧನೆ. ಅವರಲ್ಲಿ ನಿವೇದಿತಾ ಸಿ. ಭಾವಿಮಾನಿ ಅವರು ಪ್ರಥಮ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವುದು ಜಿಲ್ಲೆಯ ಹೆಮ್ಮೆಯ ಸಂಗತಿಯಾಗಿದೆ ಎಂದು ಡಾ.ಶಾಲಿನಿ ರಜನೀಶ್ ಅಭಿನಂದಿಸಿದರು.
ಇದೇ ರೀತಿ ಕೋಲಾರ ಜಿಲ್ಲೆಯಿಂದಲೂ ನಾಲ್ವರು ಅಭ್ಯರ್ಥಿಗಳು ಆಯ್ಕೆಯಾಗಿರುವುದು ಜಿಲ್ಲೆಯ ಪ್ರತಿಭೆ ಮತ್ತು ಸಾಧನೆಯನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದರು. ನಾಗರಿಕ ಸೇವೆಗೆ ಆಯ್ಕೆಯಾದ ಪ್ರಶಿಕ್ಷಣಾರ್ಥಿಗಳು ತಾವು ಕಾರ್ಯನಿರ್ವಹಿಸುವ ಜಿಲ್ಲೆಗಳಲ್ಲಿ ಸಮಾಜಮುಖಿ ಆದರ್ಶಗಳನ್ನು, ಪ್ರಾಮಾಣಿಕತೆ ಹಾಗೂ ಧೈರ್ಯವನ್ನು ಅಳವಡಿಸಿಕೊಂಡು ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆ ತರಲು ಶ್ರಮಿಸಬೇಕು ಎಂದು ಅವರು ಹೇಳಿದರು.
ಸಂದರ್ಶನದ ವೇಳೆಯಲ್ಲಿ ಪ್ರಶಿಕ್ಷಣಾರ್ಥಿಗಳು ಸಹ ಕನ್ನಡದ ಹಿರಿಮೆ-ಗರಿಮೆಯ ಕುರಿತು ಸಂಕ್ಷಿಪ್ತವಾಗಿ ಮಾತನಾಡಿ, ನಾಗರಿಕ ಸೇವೆಯ ಆಕಾಂಕ್ಷಿಗಳಿಗೆ ಅಗತ್ಯವಾದ ಮಾರ್ಗದರ್ಶನ ಹಾಗೂ ತಮ್ಮ ಅನುಭವಗಳನ್ನು ಹಂಚಿಕೊಂಡರು. ಈ ವೇಳೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಕಾರ್ಯದರ್ಶಿ ಕೆ.ಜಿ.ಜಗದೀಶ್ ಹಾಗೂ ಜಂಟಿ ಕಾರ್ಯದರ್ಶಿ ಅಕ್ಷಯ ಶ್ರೀಧರ್ ಉಪಸ್ಥಿತರಿದ್ದರು.