ಬೆಂಗಳೂರಿನಲ್ಲಿ ಐವರು ಡ್ರಗ್‌ ಪೆಡ್ಲರ್‌ ಗಳ ಬಂಧನ

Update: 2026-07-23 20:15 IST


ಬೆಂಗಳೂರು : ಗಾಂಜಾ, ಎಂಡಿಎಂಎ ಸೇರಿ ನಿಷೇಧಿತ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ಐವರು ಡ್ರಗ್‌ ಪೆಡ್ಲರ್‌ಗಳನ್ನು ಬೆಂಗಳೂರು ನಗರ ಪೊಲೀಸರು ಬಂಧಿಸಿದ್ದು, 4 ಲಕ್ಷ ರೂ. ಮೌಲ್ಯದ ಮಾದಕ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.

ಬೆಂಗಳೂರಿನ ಆವಲಹಳ್ಳಿ, ವಿ.ವಿ.ಪುರಂ, ಇಂದಿರಾನಗರ ಹಾಗೂ ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಿಷೇಧಿತ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿರುವುದಾಗಿ ದೂರುಗಳು ಬಂದಿದ್ದವು. ನಿಖರ ಮಾಹಿತಿಯನ್ನಾಧಾರಿಸಿ ಎನ್‍ಡಿಪಿಎಸ್ ಕಾಯ್ದೆಯಡಿ ಪ್ರಕರಣಗಳನ್ನು ದಾಖಲಿಸಿಕೊಂಡ ಪೊಲೀಸರು, ವಿವಿಧ ಸ್ಥಳಗಳ ಮೇಲೆ ದಾಳಿ ಮಾಡಿ, ಹೊರ ರಾಜ್ಯದ ಮೂವರು ಹಾಗೂ ಇಬ್ಬರು ಸ್ಥಳಿಯ ವ್ಯಕ್ತಿಗಳೂ ಸೇರಿದಂತೆ ಒಟ್ಟು ಐವರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.

ಆವಲಹಳ್ಳಿ ಪೊಲೀಸರು 3 ಕೆ.ಜಿ. ಗಾಂಜಾ, ವಿ.ವಿ.ಪುರಂ ಪೊಲೀಸರು 943 ಗ್ರಾಂ ಗಾಂಜಾ, 1 ದ್ವಿಚಕ್ರ ವಾಹನ, ಇಂದಿರಾನಗರ ಪೊಲೀಸರು 15 ಗ್ರಾಂ ಎಂಡಿಎಂಎ, 1 ಮೊಬೈಲ್, ಕಮರ್ಷಿಯಲ್ ಸ್ಟ್ರೀಟ್ ಪೊಲೀಸರು 918 ಗ್ರಾಂ ಗಾಂಜಾವನ್ನು ಜಪ್ತಿ ಮಾಡಿದ್ದಾರೆ.

ಹೆಚ್ಚಿನ ಹಣ ಗಳಿಸುವ ಉದ್ದೇಶದಿಂದ ಹೊರ ರಾಜ್ಯದ ಹಾಗೂ ರಾಜ್ಯದ ಅಪರಿಚಿತ ವ್ಯಕ್ತಿಗಳಿಂದ ನಿಷೇಧಿತ ಮಾದಕ ವಸ್ತುಗಳನ್ನು ಕಡಿಮೆ ಬೆಲೆಗೆ ಖರೀದಿಸಿಕೊಂಡು ಬಂದು ಸಾರ್ವಜನಿಕರಿಗೆ, ಕಾಲೇಜು ವಿದ್ಯಾರ್ಥಿಗಳಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿರುವುದಾಗಿ ಬಂಧಿತ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News