ಬೆಂಗಳೂರಿನಲ್ಲಿ ವೃದ್ಧ ದಂಪತಿ ಆತ್ಮಹತ್ಯೆ
ಬೆಂಗಳೂರು : ತಂಪು ಪಾನೀಯದಲ್ಲಿ ಬೆರೆಸಿದ ವಿಷ ಸೇವಿಸಿ ವೃದ್ಧ ದಂಪತಿ ಆತಹತ್ಯೆ ಮಾಡಿಕೊಂಡಿರುವ ಘಟನೆ ಬಸವೇಶ್ವರನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಮಂಜುನಾಥನಗರದ ನಿವಾಸಿ ಈಶ್ವರ್ ಆಚಾರಿ (73) ಮತ್ತು ಗೌರಿ (60) ಆತಹತ್ಯೆ ಮಾಡಿಕೊಂಡಿರುವ ವೃದ್ಧ ದಂಪತಿ ಎಂದು ತಿಳಿದು ಬಂದಿದೆ.
ಈ ಹಿಂದೆ ಈಶ್ವರ್ ಆಚಾರಿ ಚಿನ್ನ-ಬೆಳ್ಳಿ ಕೆಲಸ ಮಾಡಿಕೊಂಡಿದ್ದರು. ಆದರೆ 10 ವರ್ಷಗಳಿಂದ ಯಾವುದೇ ಕೆಲಸ ಮಾಡುತ್ತಿರಲಿಲ್ಲ. ಮಂಜುನಾಥನಗರದ ಬಾಡಿಗೆ ಮನೆಯಲ್ಲಿ ದಂಪತಿ ವಾಸವಾಗಿದ್ದರು. ದಂಪತಿಗಳಿಬ್ಬರು ಬಿಪಿ, ಶುಗರ್‍ನಿಂದ ಬಳಲುತ್ತಿದ್ದರು. ದಿನದಿಂದ ದಿನಕ್ಕೆ ಅನಾರೋಗ್ಯ ಉಲ್ಬಣಗೊಳ್ಳುತ್ತಿತ್ತು. ಇದೇ ಕಾರಣಕ್ಕೆ ಬೇಸತ್ತು ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ತಿಳಿದುಬಂದಿದೆ.
ದಂಪತಿಗಳಿಗೆ ಇಬ್ಬರು ಹೆಣ್ಣು ಮಕ್ಕಳಿದ್ದು, ಇಬ್ಬರಿಗೂ ಮದುವೆಯಾಗಿದೆ. ಅವರು ಬೇರೆ ಕಡೆ ನೆಲೆಸಿದ್ದು, ಆಗಾಗ್ಗೆ ಅಪ್ಪ-ಅಮ್ಮ ನನ್ನು ಮಾತನಾಡಿಸಲು ಬರುತ್ತಿದ್ದರು. ದಂಪತಿಗಳ ಕಷ್ಟ-ಸುಖವನ್ನು ಹೆಣ್ಣು ಮಕ್ಕಳೇ ನೋಡಿಕೊಳ್ಳುತ್ತಿದ್ದರು. ಆದರೆ ಗುರುವಾರ ಬೆಳಗ್ಗೆ ಎಂದಿನಂತೆ ಮಗಳು ಕರೆ ಮಾಡಿದಾಗ ಕರೆ ಸ್ವೀಕರಿಸಲಿಲ್ಲ. ಹಲವು ಭಾರಿ ಕರೆ ಮಾಡಿದರೂ ಸ್ವೀಕರಿಸದಿದ್ದಾಗ ಗಾಬರಿಗೊಂಡು ಮಗಳು ಮನೆ ಬಳಿ ಹೋಗಿ ನೋಡಿದಾಗ ಅಪ್ಪ- ಅಮ್ಮ ಆತಹತ್ಯೆ ಮಾಡಿಕೊಂಡಿರುರುವುದು ಕಂಡು ಬಂದಿದೆ.
ಸುದ್ದಿ ತಿಳಿದು ಬಸವೇಶ್ವರ ನಗರ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ, ಇಬ್ಬರ ಮೃತದೇಹಗಳನ್ನು ಆಸ್ಪತ್ರೆಗೆ ರವಾನಿಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ ಎಂದು ತಿಳಿದು ಬಂದಿದೆ.