ಪ್ರಶ್ನೆ ಪತ್ರಿಕೆ ಸೋರಿಕೆ ಬಗ್ಗೆ ಸಂಸತ್ತಿನಲ್ಲಿ ಚರ್ಚೆಯಾಗಲಿ : ಸಿಎಂ ಡಿ.ಕೆ.ಶಿವಕುಮಾರ್
ಬೆಂಗಳೂರು : ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಸಂಬಂಧ ಒಬ್ಬ ವ್ಯಕ್ತಿ ರಾಜೀನಾಮೆ ಕೊಡುವುದರಿಂದ ಏನಾಗಲಿದೆ ಎಂದು ಕೇಂದ್ರ ಸರಕಾರವನ್ನು, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಪ್ರಶ್ನೆ ಮಾಡಿದ್ದಾರೆ.
ಗುರುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ವಿರುದ್ಧ ಪ್ರಧಾನಿ ಮೋದಿ ಈಗ ಮಾತನಾಡುವ ಬದಲು ಪ್ರಾರಂಭದಲ್ಲೇ ಮಾತನಾಡಬೇಕಿತ್ತು. ಇನ್ನೊಂದೆಡೆ ದೇಶದ ಯುವ ಜನತೆಯ ಭವಿಷ್ಯ ಹಾಳಾಗುತ್ತಿದೆ ಎನ್ನುವ ವೈಫಲ್ಯವನ್ನು ಬಿಜೆಪಿಯವರು ಒಪ್ಪಿಕೊಳ್ಳಬೇಕು. ಒಬ್ಬ ವ್ಯಕ್ತಿ ರಾಜೀನಾಮೆ ಕೊಡುವುದರಿಂದ ಈ ಕೇಂದ್ರ ಸರಕಾರಕ್ಕೆ ಏನಾಗಲಿದೆ?. ಪ್ರಶ್ನೆ ಪತ್ರಿಕೆಗಳು ಸೋರಿಕೆಯಾದಾಗ ಇಂತಹ ಘಟನೆ ಬಗ್ಗೆ ಯಾರಾದರೂ ಜವಾಬ್ದಾರಿ ಹೊರಬೇಕಲ್ಲವೇ? ಇದಕ್ಕೆ ಯಾರು ಹೊಣೆ? ಎಂದು ಕೇಳಿದರು.
ಪ್ರಶ್ನೆ ಪತ್ರಿಕೆ ಸೋರಿಕೆ ಬಗ್ಗೆ ಸಂಸತ್ತಿನಲ್ಲಿ ಚರ್ಚೆಯಾಗಲಿ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲವೂ ಚರ್ಚೆಯಾಗಬೇಕು. ಟೀಕೆ ಮಾಡಿದಾಗ ನಾವು ಹಾಗೂ ನೀವು ಇಬ್ಬರೂ ಒಪ್ಪಿ ತಿದ್ದಿಕೊಳ್ಳಬೇಕು. ನಾವು ಯುವಕರ ಭವಿಷ್ಯದ ಬಗ್ಗೆ ಆಲೋಚನೆ ಮಾಡುತ್ತಿದ್ದೇವೆ. ಈಗಾಗಲೇ ಸುಮಾರು 100ಕ್ಕೂ ಹೆಚ್ಚು ಪರೀಕ್ಷೆಗಳ ಪ್ರಶ್ನೆ ಪತ್ರಿಕೆಗಳು ಸೋರಿಕೆಯಾಗಿವೆ.ಆದರೆ, ಇದು ರಾಜಕೀಯ ಪಕ್ಷಗಳ ವಿಚಾರವಲ್ಲ, ದೇಶದ ಭವಿಷ್ಯದ ವಿಚಾರ. ಪಾರದರ್ಶಕ, ಶಕ್ತಿಯುತ, ಉತ್ತಮ ಗುಣಮಟ್ಟದ ಶಿಕ್ಷಣ ದೊರೆಯುವಂತೆ ಮಾಡುವುದು ನಮ್ಮೆಲ್ಲರ ಜವಾಬ್ದಾರಿ. ಯಾವುದೇ ಪರೀಕ್ಷೆಗಳು ನಡೆದರು ಅವು ಪಾರದರ್ಶಕವಾಗಿರಬೇಕು ಎಂದು ಅವರು ಹೇಳಿದರು.
ಇಡೀ ಪ್ರಪಂಚ ಭಾರತದ ಯುವ ಜನತೆಯ ಭವಿಷ್ಯದ ಬಗ್ಗೆ ಆಲೋಚನೆ ಮಾಡುತ್ತಿದೆ. ನಮ್ಮ ದೇಶ ಪ್ರತಿಭಾವಂತರ ದೇಶ. ಇಡೀ ಪ್ರಪಂಚದಲ್ಲಿಯೇ ನಮ್ಮಲ್ಲಿ ಇರುವಷ್ಟು ಪ್ರತಿಭೆಗಳು ಎಲ್ಲಿಯೂ ಇಲ್ಲ ಎಂದು ಅನೇಕರು ಒಪ್ಪಿಕೊಂಡಿದ್ದಾರೆ. ನಮ್ಮನ್ನು ಇಡೀ ಪ್ರಪಂಚವೇ ನೋಡುತ್ತಿರುವ ಹೊತ್ತಿನಲ್ಲಿ ನಮ್ಮ ಶಿಕ್ಷಣದ ಗುಣಮಟ್ಟವನ್ನು ನಾವು ಕಾಪಾಡಬೇಕಿದೆ ಎಂದ ಅವರು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಭಟನೆ ಮಾಡುವುದು ಪ್ರತಿಪಕ್ಷಗಳ, ಎಲ್ಲರ, ಯುಜನತೆಯ ಹಕ್ಕು. ಇಂತಹ ಸಂದರ್ಭದಲ್ಲಿ ಅವರ ಮೇಲೆ ಲಾಠಿಚಾರ್ಜ್ ಮಾಡಲಾಗಿದೆ, ತೊಂದರೆ ನೀಡಲಾಗಿದೆ. ಸುದ್ದಿ ಮಾಧ್ಯಮಗಳ ಮೇಲೆ ನಿರ್ಬಂಧ ಹೇರಿ, ಧಮ್ಕಿ ಹಾಕಿ ಪ್ರಸಾರ ಆಗದಂತೆ ನೋಡಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.