‘ಮುಸ್ಲಿಮರ ಬಗ್ಗೆ ಅವಹೇಳನಕಾರಿ ಹೇಳಿಕೆ ಆರೋಪ’ | ಸಿ.ಟಿ.ರವಿ ವಿರುದ್ಧ ಡಿಜಿಪಿಗೆ ಎಪಿಸಿಆರ್ ದೂರು

Update: 2026-07-27 22:31 IST

ಸಿ.ಟಿ.ರವಿ

ಬೆಂಗಳೂರು : ನೀಟ್ ಪರೀಕ್ಷೆ ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆಯ ವಿರುದ್ಧ ಬಿಜೆಪಿ ವತಿಯಿಂದ ಚಿಕ್ಕಮಗಳೂರಿನಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾತನಾಡುವ ಭರದಲ್ಲಿ ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಅವರು ‘ಎದೆ ಸೀಳಿದರೆ ಮೂರು ಅಕ್ಷರ ಇಲ್ಲದ ಮುಲ್ಲಾಗಳಿಗೂ ನೀಟ್ ಪರೀಕ್ಷೆಗೂ ಏನು ಸಂಬಂಧ’ ಎಂದು ಒಂದು ಸಮುದಾಯವನ್ನು ಗುರಿಯಾಗಿಸಿ ಅವಹೇಳನಕಾರಿ ಹಾಗೂ ಆಕ್ಷೇಪಾರ್ಹ ಹೇಳಿಕೆ ನೀಡಿರುವುದನ್ನು ಅಸೋಸಿಯೇಷನ್ ಫಾರ್ ಪ್ರೊ ಟೆಕ್ಷನ್ ಆಫ್ ಸಿವಿಲ್ ರೈಟ್ಸ್ (ಎಪಿಸಿಆರ್)-ಕರ್ನಾಟಕದ ರಾಜ್ಯಾಧ್ಯಕ್ಷ ಸುಧೀರ್ ಕುಮಾರ್ ಮುರೊಳ್ಳಿ ತೀವ್ರವಾಗಿ ಖಂಡಿಸಿದ್ದಾರೆ.

ಜನಪ್ರತಿನಿಧಿಯೊಬ್ಬರು ಒಂದು ಧಾರ್ಮಿಕ ಸಮುದಾಯದ ಶಿಕ್ಷಣ ಮಟ್ಟವನ್ನು ಹೀಯಾಳಿಸಿ ಮಾತನಾಡುವುದು ಸಂವಿಧಾನದ 14, 15, 19 ಮತ್ತು 21ನೇ ವಿಧಿಗೆ ವಿರುದ್ಧವಾಗಿದೆ. ಇದು ವಿದ್ಯಾರ್ಥಿ-ಯುವಜನ ಹೋರಾಟದ ಮಹತ್ವವನ್ನು ಸಂಕುಚಿತಗೊಳಿಸುವ ಹಾಗೂ ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಜನಸಾಮಾನ್ಯರಲ್ಲಿ ಕೋಮು ದ್ವೇಷ ಬಿತ್ತುವ ಹೀನ ರಾಜಕೀಯವಾಗಿದೆ ಎಂದು ಅವರು ವೀಶ್ಲೇಷಿಸಿದ್ದಾರೆ.

ಪೊಲೀಸ್ ಮಹಾನಿರ್ದೇಶಕರಿಗೆ ನೀಡಿದ ದೂರಿನಲ್ಲಿ ದ್ವೇಷ ಭಾಷಣ ಮಾಡಿದ ಸಿ.ಟಿ.ರವಿ ಅವರು ತಕ್ಷಣ ಬೇಷರತ್ ಕ್ಷಮೆಯಾಚಿಸಬೇಕು ಮತ್ತು ಹೇಳಿಕೆಯನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿರುವ ಎಪಿಸಿಆರ್, ನೀಟ್ ಪರೀಕ್ಷೆ ಅವ್ಯವಹಾರದ ಬಗ್ಗೆ ವಿದ್ಯಾರ್ಥಿಗಳ ನ್ಯಾಯಯುತ ಹೋರಾಟವನ್ನು ರಾಜಕೀಯ ಮತ್ತು ಧಾರ್ಮಿಕ ಬಣ್ಣ ನೀಡುವುದನ್ನು ನಿಲ್ಲಿಸಬೇಕು ಹಾಗೂ ಹೋರಾಟದ ಆಶಯವನ್ನು ಅರಿತು, ದೇಶದ ಶೈಕ್ಷಣಿಕ ವ್ಯವಸ್ಥೆಯಲ್ಲಿನ ದೋಷವನ್ನು ನಿವಾರಿಸಿ, ಶೈಕ್ಷಣಿಕ ಬದಲಾವಣೆಗಾಗಿ ಶ್ರಮಿಸಬೇಕು ಎಂದು ಒತ್ತಾಯಿಸಿದೆ.

ನೀಟ್ ಪರೀಕ್ಷೆಯಲ್ಲಿನ ಅವ್ಯವಹಾರದ ವಿರುದ್ಧ ದೇಶಾದ್ಯಂತ ಎಲ್ಲ ಜಾತಿ, ಧರ್ಮದ ಲಕ್ಷಾಂತರ ಬಡ ವಿದ್ಯಾರ್ಥಿಗಳು ಹೋರಾಡುತ್ತಿದ್ದಾರೆ. ವಿದ್ಯಾರ್ಥಿ-ಯುವಜನರ ಹೋರಾಟವನ್ನು ಒಂದು ಸಮುದಾಯಕ್ಕೆ ಜೋಡಿಸಿ ಕೀಳುಮಟ್ಟದ ಟೀಕೆ ಮಾಡುವುದು ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯಕ್ಕೆ ಮಾಡುವ ದ್ರೋಹವಾಗಿದೆ. ಹಾಗೂ ವಿದ್ಯಾರ್ಥಿಗಳ ಪ್ರಾಮಾಣಿಕ ಹೋರಾಟಕ್ಕೆ ಮಾಡಿದ ಅವಮಾನವಾಗಿದೆ ಎಂದು ಅವರು ದೂರಿದ್ದಾರೆ.

ಕರ್ನಾಟಕದ ಮುಸ್ಲಿಮ್ ಸಮುದಾಯವು ಸ್ವಾತಂತ್ರ್ಯ ಹೋರಾಟದಿಂದ ಕರ್ನಾಟಕ ಏಕೀಕರಣ ಹೋರಾಟದಲ್ಲಿ ಈ ನೆಲಕ್ಕಾಗಿ ತ್ಯಾಗ, ಬಲಿದಾನ ಸಮರ್ಪಿಸಿದ ಕೆಚ್ಚೆದೆಯ ಕನ್ನಡಿಗರಾಗಿದ್ದಾರೆ. ನೂರಾರು ವೈದ್ಯರು, ಎಂಜಿನಿಯರ್‍ಗಳು, ವಿಜ್ಞಾನಿಗಳು, ಐಎಎಸ್-ಐಪಿಎಸ್ ಅಧಿಕಾರಿಗಳು, ಗಡಿಕಾಯುವ ಸೈನಿಕರು ಹಾಗೂ ರಾಜಕೀಯ, ಸಾಹಿತ್ಯ, ಸಮಾಜ ಸೇವೆಗಳ ಮೂಲಕ ದೇಶಸೇವೆ ಮಾಡುತ್ತಿದ್ದಾರೆ. ‘ಮೂರು ಅಕ್ಷರ ಬಾರದು’ ಎಂಬ ಹೇಳಿಕೆ ಸುಳ್ಳು, ದ್ವೇಷಪೂರಿತ ಮತ್ತು ಸಮುದಾಯದ ಘನತೆಗೆ ಧಕ್ಕೆ ತರುವಂತಿದೆ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ದೇಶದ ಪ್ರತಿಯೊಬ್ಬ ಪ್ರಜೆಗೂ ಶಿಕ್ಷಣದ ಹಕ್ಕಿದೆ. ಹೋರಾಟ ಮಾಡುವ ಹಕ್ಕಿದೆ. ಅದನ್ನು ಧರ್ಮದ ಹೆಸರಿನಲ್ಲಿ ವಿಭಜಿಸುವುದು ಸಂವಿಧಾನಕ್ಕೆ ಬಗೆದ ದ್ರೋಹ. ಎಪಿಸಿಆರ್ ಕರ್ನಾಟಕ ರಾಜ್ಯದ ಎಲ್ಲ ಪ್ರಜ್ಞಾವಂತ ನಾಗರಿಕರ ಜೊತೆ ನಿಂತು ಇಂತಹ ದ್ವೇಷ ಭಾಷಣದ ವಿರುದ್ಧ ಕಾನೂನು ಮತ್ತು ಪ್ರಜಾಸತ್ತಾತ್ಮಕ ಹೋರಾಟ ಮುಂದುವರಿಸಲಿದೆ ಎಂದು ಎಪಿಸಿಆರ್ ರಾಜ್ಯ ಸಂಯೋಜಕ ಮುಹಮ್ಮದ್ ಪೀರ್ ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News