ಎಸ್‌ಐಆರ್ ಪ್ರಕ್ರಿಯೆಯಲ್ಲಿನ ಗೊಂದಲಗಳಿಗೆ ಚುನಾವಣಾ ಆಯೋಗ ಸ್ಪಷ್ಟತೆ ನೀಡುತ್ತಿಲ್ಲ; ಹೈಕೋರ್ಟ್‌ನಲ್ಲಿ ಅರ್ಜಿದಾರರ ವಾದ
ಬೆಂಗಳೂರು : ಎಸ್ಐಆರ್ ಕರಡು ಮತದಾರರ ಪಟ್ಟಿ ಪ್ರಕಟವಾದ ಬಳಿಕ ಎದುರಾಗುವ 'ತಾರ್ಕಿಕ ವ್ಯತ್ಯಾಸಗಳ' (ಲಾಜಿಕಲ್ ಡಿಸ್ಕ್ರಿಪೆನ್ಸಿ) ನಿರ್ವಹಣೆ ಹಾಗೂ ಗೈರು, ಸ್ಥಳಾಂತರ, ಮರಣ, ನಕಲಿ, ಇತರ (ಎ.ಎಸ್.ಡಿ.ಡಿ.ಒ) ಎಂದು ಗುರುತಿಸಲಾಗುವ ಮತದಾರರಿಗೆ ನೋಟಿಸ್ ನೀಡುವ ವಿಚಾರದಲ್ಲಿ ಚುನಾವಣಾ ಆಯೋಗ ಸ್ಪಷ್ಟತೆ ನೀಡುತ್ತಿಲ್ಲ ಎಂದು ಸಾಹಿತಿ ದೇವನೂರು ಮಹದೇವ, ಇತಿಹಾಸ ತಜ್ಞ ರಾಮಚಂದ್ರ ಗುಹಾ ಪರ ವಕೀಲರು ಹೈಕೋರ್ಟ್‌ಗೆ ತಿಳಿಸಿದರು.
ರಾಜ್ಯದಲ್ಲಿ ನಡೆಯುತ್ತಿರುವ 'ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ' (ಎಸ್ಐಆರ್) ಅವಧಿಯನ್ನು ಒಂದರಿಂದ ಮೂರು ತಿಂಗಳವರೆಗೆ ವಿಸ್ತರಿಸುವಂತೆ ಕೋರಿ ಸಾಹಿತಿ ದೇವನೂರು ಮಹದೇವ, ಇತಿಹಾಸ ತಜ್ಞ ರಾಮಚಂದ್ರ ಗುಹಾ, ನಿವೃತ್ತ ಮೇಜರ್ ಜನರಲ್ ಎಸ್.ಜಿ. ವಂಬಟ್ಕೆರೆ, ಲೇಖಕಿ ಸಬೀಹಾ ಭೂಮಿಗೌಡ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಹಾಗೂ ನ್ಯಾಯಮೂರ್ತಿ ಕೆ.ಎಸ್. ಹೇಮಲೇಖಾ ಅವರಿದ್ದ ವಿಭಾಗೀಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು.
ಅರ್ಜಿದಾರರ ಪರ ಹಿರಿಯ ವಕೀಲ ವಿಕ್ರಮ್ ಹುಯಿಲಗೋಳ ವಾದ ಮಂಡಿಸಿ, ಎಸ್ಐಆರ್‌ನ ಕಾನೂನು ಮಾನ್ಯತೆಯನ್ನು ನಾವು ಪ್ರಶ್ನಿಸುತ್ತಿಲ್ಲ. ಈಗಾಗಲೇ ಸುಪ್ರೀಂಕೋರ್ಟ್ ಸ್ಪಷ್ಟಪಡಿಸಿದೆ. ಆದರೆ, ತಾರ್ಕಿಕ ವ್ಯತ್ಯಾಸಗಳ ಬಗ್ಗೆ ಒಂದಷ್ಟು ಗೊಂದಲಗಳಿವೆ, ಎ.ಎಸ್.ಡಿ.ಡಿ.ಒ ಅಡಿ ಗುರುತಿಲಾಗುವ ಮತದಾರರಿಗೆ ನೋಟಿಸ್ ಬರುವುದಿಲ್ಲ ಎಂದು ಹೇಳಲಾಗುತ್ತಿದೆ. ಅಂತವರ ಸಂಖ್ಯೆ ರಾಜ್ಯದಲ್ಲಿ 80 ಲಕ್ಷ ಆಗಬಹುದು ಎಂದು ಅಂದಾಜಿಸಲಾಗಿದೆ. ರಾಜ್ಯ ಸರ್ಕಾರ ಚುನಾವಣಾ ಆಯೋಗಕ್ಕೆ ಒಂದಿಷ್ಟು ಪ್ರಶ್ನೆಗಳನ್ನು ಕೇಳಿದೆ. ಈವರೆಗೆ ಉತ್ತರ ಬಂದಿಲ್ಲ ಎಂದರು.
ಇದರ ಬಗ್ಗೆ ಸುಪ್ರೀಂಕೋರ್ಟ್‌ನ ನಿರ್ದಿಷ್ಟ ಮಾರ್ಗಸೂಚಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಅರ್ಜಿದಾರರ ವಕೀಲರಿಗೆ ಸೂಚಿಸಿದ ನ್ಯಾಯಪೀಠ ವಿಚಾರಣೆಯನ್ನು ಮಂಗಳವಾರಕ್ಕೆ (ಜುಲೈ 28) ಮುಂದೂಡಿತು.