ಕೃಷ್ಣಾ ಮೇಲ್ದಂಡೆ ಯೋಜನೆ; ಮುಂಗಾರು ಹಂಗಾಮಿನ ಬೆಳೆಗಳಿಗೆ ನೀರು ಬಿಡುಗಡೆ

Update: 2026-07-29 01:02 IST

ಬೆಂಗಳೂರು : ರಾಜ್ಯದ ಜೀವನಾಡಿ ಕೃಷ್ಣಾ ಮೇಲ್ದಂಡೆ ಯೋಜನೆ (ಕೃಷ್ಣಾ ಭಾಗ್ಯ ಜಲ ನಿಗಮ) ವ್ಯಾಪ್ತಿಯ ಅಚ್ಚುಕಟ್ಟು ಪ್ರದೇಶದ ರೈತರಿಗೆ ಜಲಸಂಪನ್ಮೂಲ ಸಚಿವ ರಾಮಲಿಂಗಾರೆಡ್ಡಿ ಅವರು ಸಿಹಿ ಸುದ್ದಿಯನ್ನು ನೀಡಿದ್ದಾರೆ.

ಜೂನ್ ಮತ್ತು ಜುಲೈ ತಿಂಗಳುಗಳಲ್ಲಿ ವಾಡಿಕೆ ಮಳೆ ಬಾರದೇ ಹಿನ್ನಡೆಯಾಗಿದ್ದ ಮುಂಗಾರು ಹಂಗಾಮಿನ ಬಿತ್ತನೆ ಕಾರ್ಯಕ್ಕೆ ನೆರವಾಗಲು, ಆಲಮಟ್ಟಿ ಮತ್ತು ನಾರಾಯಣಪುರ ಜಲಾಶಯಗಳಿಂದ ಜು.28ರಿಂದ ಕಾಲುವೆಗಳಿಗೆ ನೀರು ಹರಿಸಲು ತೀರ್ಮಾನಿಸಲಾಗಿದೆ.

2026-27ನೇ ಸಾಲಿನ ಮುಂಗಾರು ಹಂಗಾಮಿಗೆ ಒಟ್ಟು 65 ಟಿಎಂಸಿ ಹಾಗೂ 2027ರ ಜೂನ್ ಅಂತ್ಯದವರೆಗೆ ಕುಡಿಯುವ ನೀರು ಸೇರಿದಂತೆ ಇತರ ಅವಶ್ಯ ಬಳಕೆಗಾಗಿ 58 ಟಿಎಂಸಿ ಸೇರಿದಂತೆ ಒಟ್ಟು 124 ಟಿಎಂಸಿ ನೀರಿನ ಅವಶ್ಯಕತೆ ಇದೆ ಎಂದು ಅಂದಾಜಿಸಲಾಗಿದೆ.

ಆಲಮಟ್ಟಿ ಜಲಾಶಯಕ್ಕೆ ಜು.6ರಿಂದ ಒಳಹರಿವು ಪ್ರಾರಂಭವಾಗಿದ್ದು, ಜಲಾಶಯಕ್ಕೆ ಒಳಹರಿವು ಇರುವವರೆಗೆ ಕಾಲುವೆ ಜಾಲಗಳಿಗೆ ಸತತವಾಗಿ ನೀರು ಪೂರೈಸಲಾಗುವುದು. ಮುಂಬರುವ ದಿನಗಳಲ್ಲಿ ಜಲಾಶಯಕ್ಕೆ ಒಳಹರಿವು ಕಡಿಮೆಯಾದಲ್ಲಿ, ಲಭ್ಯವಿರುವ ನೀರನ್ನು ಆಧರಿಸಿ ಈ ಹಿಂದೆ ಅನುಸರಿಸಿದ ‘14 ದಿನ ಚಾಲು ಹಾಗೂ 10 ದಿನ ಬಂದ್’ ಪದ್ಧತಿಯನ್ನು ಅಳವಡಿಸಿಕೊಂಡು ನೀರು ಹರಿಸಲು ತೀರ್ಮಾನಿಸಲಾಗಿದೆ. 2026ರ ನವೆಂಬರ್‌ನಲ್ಲಿ ಜಲಾಶಯಗಳ ನೀರಿನ ಸಂಗ್ರಹಣೆಯನ್ನು ಪರಿಶೀಲಿಸಿ, ಹಿಂಗಾರು-ಹಂಗಾಮಿನ ನೀರಾವರಿ ಸಲಹಾ ಸಮಿತಿ ಸಭೆಯನ್ನು ಕರೆಯಲಾಗುವುದು. ಅಚ್ಚುಕಟ್ಟು ಪ್ರದೇಶದ ರೈತ ಬಾಂಧವರು ಮುಂಗಾರು ಹಂಗಾಮಿನಲ್ಲಿ ಲಘು ನೀರಾವರಿ ಬೆಳೆಗಳನ್ನು ಮಾತ್ರ ಬೆಳೆಯುವಂತೆ ಹಾಗೂ ನೀರು ಪೋಲಾಗದಂತೆ ಮಿತವಾಗಿ ಬಳಸಲು ಜಲಸಂಪನ್ಮೂಲ ಸಚಿವ ರಾಮಲಿಂಗಾ ರೆಡ್ಡಿ ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News