ಗುರುವಾರ ಸಚಿವ ಸಂಪುಟ ವಿಸ್ತರಣೆ?
ಬೆಂಗಳೂರು : ರಾಜ್ಯದ ಸಚಿವ ಸಂಪುಟ ವಿಸ್ತರಣೆ ಗುರುವಾರ ನಡೆಯುವ ಸಾಧ್ಯತೆಗಳಿದ್ದು, ನೂತನ ಸಚಿವರ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಸಿದ್ಧತೆ ಆರಂಭವಾಗಿದೆ.
ನೂತನ ಸಚಿವರ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲು ಲೋಕಭವನದ ಅಧಿಕಾರಿಗಳಿಗೆ, ಸರಕಾರದ ಹಿರಿಯ ಅಧಿಕಾರಿಗಳು ಮೌಖಿಕ ಸೂಚನೆ ನೀಡಿದ್ದಾರೆ ಎಂದು ಹೇಳಲಾಗಿದೆ.
ದಿಲ್ಲಿಯಲ್ಲಿ ಮಂಗಳವಾರ ತಡರಾತ್ರಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಅವರು, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರೊಂದಿಗೆ ಸಮಾಲೋಚನೆ ನಡೆಸಿದರು. ಈ ವೇಳೆ ಸಂಭವನೀಯ ಸಚಿವರ ಪಟ್ಟಿಯನ್ನು ಅವರಿಗೆ ನೀಡಿದ್ದಾರೆ ಎನ್ನಲಾಗಿದೆ.
ಸಂಸತ್ ಕಲಾಪದ ಹಿನ್ನೆಲೆ ಯಲ್ಲಿ ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಮತ್ತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಭೇಟಿ ರಾಜ್ಯದ ನಾಯಕರಿಗೆ ಸಾಧ್ಯವಾಗಿಲ್ಲ.
ಜು.29ರಂದು ಬೆಳಗ್ಗೆ ಈ ಎಲ್ಲ ನಾಯಕರು ಒಟ್ಟಿಗೆ ಕೂತು ಚರ್ಚಿಸಿ ಸಿಎಂ ಡಿ.ಕೆ.ಶಿವಕುಮಾರ್ ನೇತೃತ್ವದ ಸಂಪುಟದಲ್ಲಿ ಖಾಲಿಯಿರುವ ಎಲ್ಲ 20 ಸ್ಥಾನಗಳಿಗೆ ನೂತನ ಸಚಿವರ ಆಯ್ಕೆ ಪಟ್ಟಿಯನ್ನು ಅಂತಿಮಗೊಳಿಸುವ ನಿರೀಕ್ಷೆ ಇದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಜು.30ರ ಗುರುವಾರ ಸಂಜೆ 5:45ರ ಸುಮಾರಿಗೆ ನೂತನ ಸಚಿವರ ಪ್ರಮಾಣ ವಚನ ಸ್ವೀಕಾರ ಸಮಾರಂಭ ಲೋಕಭವನದಲ್ಲಿ ನಡೆಯಲಿದೆ ಎಂದು ವಿಶ್ವಾಸನೀಯ ಮೂಲಗಳು ತಿಳಿಸಿವೆ.