ಪೊಲೀಸ್ ಇಲಾಖೆಯ ವಿವಿಧ ವೃಂದದ ನೇಮಕಾತಿಗಳಿಂದ 157 ಅಭ್ಯರ್ಥಿಗಳು ಡಿಬಾರ್

Update: 2026-07-29 01:38 IST

ಸಾಂದರ್ಭಿಕ ಚಿತ್ರ


ಬೆಂಗಳೂರು : ಪೊಲೀಸ್ ಇಲಾಖೆಯ ವಿವಿಧ ವೃಂದದ ಹುದ್ದೆಗಳ ನೇಮಕಾತಿಗಳಲ್ಲಿ ಅನ್ಯಮಾರ್ಗದಿಂದ ಆಯ್ಕೆಗೆ ಯತ್ನಿಸಿದ್ದ 157 ಅಭ್ಯರ್ಥಿಗಳನ್ನು ಪೊಲೀಸ್ ಇಲಾಖೆ ಡಿಬಾರ್ ಮಾಡಿದೆ.

ಈ ಕುರಿತು ಡೈರೆಕ್ಟರ್ ಜನರಲ್ ಆಫ್ ಪೊಲೀಸ್ ನೇಮಕಾತಿ ಕಚೇರಿಯು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯ ನಿರ್ವಾಹಕ ನಿರ್ದೇಶಕರಿಗೆ ಪತ್ರ ಬರೆದಿದ್ದು, ಹಿಂದಿನ ಸಾಲಿನ ವಿವಿಧ ವೃಂದದ ನೇರ-ನೇಮಕಾತಿಗಳಲ್ಲಿ ಕೆಲವು ಅಭ್ಯರ್ಥಿಗಳ ಅನ್ಯಮಾರ್ಗದಿಂದ ಆಯ್ಕೆಗೆ ಯತ್ನಿಸಿದ್ದು, ಅಂತವರನ್ನು ಪೊಲೀಸ್ ಇಲಾಖೆಯ ಎಲ್ಲಾ ವೃಂದದ ನೇರ-ನೇಮಕಾತಿಗಳಿಗೆ ಭಾಗವಹಿಸುವುದಕ್ಕೆ ವರ್ಷವಾರು ವಿವಿಧ ದಿನಾಂಕಗಳನ್ವಯ ಆದೇಶಗಳನ್ನು ಹೊರಡಿಸಿ ಶಾಶ್ವತವಾಗಿ ನಿಷೇಧಿಸಲಾಗಿದೆ ತಿಳಿಸಿದೆ.

ಅನ್ಯಮಾರ್ಗದಿಂದ ಆಯ್ಕೆಗಾಗಿ ಯತ್ನಿಸಿರುವ ಅಭ್ಯರ್ಥಿಗಳ ವಿರುದ್ಧ ದಾಖಲಾದ ಕ್ರಿಮಿನಲ್ ಪ್ರಕರಣಗಳಿಗೆ ಸಿಐಡಿ ಘಟಕದಿಂದ ತನಿಖೆಯನ್ನು ಕೈಗೊಂಡಿದ್ದು, ಸದರಿ ತನಿಖಾ ತಂಡದಿಂದ 157 ಸಂಖ್ಯೆಗಳಲ್ಲಿ (ಅಭ್ಯರ್ಥಿಗಳು, ನಕಲಿ ಅಭ್ಯರ್ಥಿಗಳು ಮತ್ತು ಮಧ್ಯವರ್ತಿಗಳು) ವಿವರಗಳನ್ನು ಒದಗಿಸಿರುತ್ತಾರೆ. ಅಂತಹ ಅಭ್ಯರ್ಥಿಗಳು ಪ್ರಸ್ತುತ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವತಿಯಿಂದ ನಡೆಸಲಾಗುತ್ತಿರುವಪೊಲೀಸ್ ಇಲಾಖೆಯ ವಿವಿಧ ವೃಂದದ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದಲ್ಲಿ ಅವರನ್ನು ಪರಿಗಣಿಸದೇ ಮುಂದಿನ ಹಂತದ ಲಿಖಿತ ಪರೀಕ್ಷೆಗೆ ಕರೆ ಪತ್ರವನ್ನು ನೀಡದೇ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದೆ.

ಡಿಬಾರ್ ಮಾಡಲಾದ ಹುದ್ದೆಯ ವಿವರ: ಪೊಲೀಸ್ ಕಾನ್‍ಸ್ಟೇಬಲ್(ಸಿವಿಲ್) 127 ಅಭ್ಯರ್ಥಿಗಳು, ಸಶಸ್ತ್ರ ಪೊಲೀಸ್ ಕಾನ್‍ಸ್ಟೇಬಲ್(ಸಿಎಆರ್-ಡಿಎಆರ್) 14 ಅಭ್ಯರ್ಥಿಗಳು, ವಿಶೇಷ ಮೀಸಲು ಪೊಲೀಸ್ ಕಾನ್‍ಸ್ಟೇಬಲ್ (ಕೆಎಸ್‍ಆರ್‍ಪಿ) 22 ಅಭ್ಯರ್ಥಿಗಳು, ಪೊಲೀಸ್ ಸಬ್‍ಇನ್‍ಸ್ಪೆಕ್ಟರ್(ಸಿವಿಲ್) 22 ಅಭ್ಯರ್ಥಿಗಳನ್ನು ಡಿಬಾರ್ ಮಾಡಲಾಗಿದೆ.

 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News