ಕಾವೇರಿ ನೀರಿನ ಕುರಿತ CWRC ಆದೇಶ ಅವೈಜ್ಞಾನಿಕ; ಯಾವುದೇ ಕಾರಣಕ್ಕೂ ಒಂದು ಹನಿ ನೀರೂ ಬಿಡಬಾರದು : ನಾರಾಯಣಗೌಡ
ಬೆಂಗಳೂರು : ಕಾವೇರಿ ನೀರು ನಿಯಂತ್ರಣ ಸಮಿತಿ ಮುಂದಿನ 15 ದಿನಗಳ ಕಾಲ ಪ್ರತಿದಿನ 3,500 ಕ್ಯೂಸೆಕ್ ನೀರನ್ನು ತಮಿಳುನಾಡಿಗೆ ಹರಿಸಬೇಕೆಂದು ನೀಡಿರುವ ನಿರ್ದೇಶನವು ಸಂಪೂರ್ಣ ಅವೈಜ್ಞಾನಿಕ, ವಾಸ್ತವ ಸ್ಥಿತಿಯನ್ನು ನಿರ್ಲಕ್ಷಿಸಿದ್ದು, ಕರ್ನಾಟಕದ ಹಿತಾಸಕ್ತಿಗೆ ವಿರುದ್ಧವಾದ ಆದೇಶವಾಗಿದೆ ಎಂದು ಕರವೇ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಂಗಳವಾರ ಈ ಸಂಬಂಧ ಪ್ರಕಟಣೆ ನೀಡಿರುವ ಅವರು, ಕಾವೇರಿ ಜಲಾನಯನ ಪ್ರದೇಶದಲ್ಲಿ ತೀವ್ರ ಮಳೆ ಕೊರತೆ ಉಂಟಾಗಿದೆ. ಕೆಆರ್‍ಎಸ್, ಕಬಿನಿ ಸೇರಿ ಪ್ರಮುಖ ಜಲಾಶಯಗಳಲ್ಲಿ ನೀರಿನ ಸಂಗ್ರಹ ಕಳವಳಕಾರಿ ಮಟ್ಟದಲ್ಲಿದೆ. ಈಗಿರುವ ನೀರು ಜನರ ಕುಡಿಯುವ ನೀರಿನ ಅಗತ್ಯವನ್ನೇ ಪೂರೈಸಲು ಸಾಕಾಗದ ಸ್ಥಿತಿ ಇದೆ. ಇಂತಹ ಸಂದರ್ಭದಲ್ಲಿ 4.5 ಟಿಎಂಸಿಗೂ ಹೆಚ್ಚು ನೀರನ್ನು ತಮಿಳುನಾಡಿಗೆ ಹರಿಸುವಂತೆ ಆದೇಶಿಸುವುದು ವಾಸ್ತವ ಸ್ಥಿತಿಗೆ ಕಣ್ಣು ಮುಚ್ಚಿಕೊಂಡು ತೆಗೆದುಕೊಂಡ ನಿರ್ಧಾರವಾಗಿದೆ ಎಂದು ಟೀಕಿಸಿದ್ದಾರೆ.
ಕುಡಿಯುವ ನೀರು ಪ್ರತಿಯೊಬ್ಬ ನಾಗರಿಕನ ಮೂಲಭೂತ ಹಕ್ಕು. ಅದರ ಜೊತೆಗೆ ರಾಜ್ಯದ ರೈತರ ಬೆಳೆ ಹಾಗೂ ಜೀವನೋಪಾಯವನ್ನು ರಕ್ಷಿಸುವುದು ರಾಜ್ಯ ಸರಕಾರದ ಮೊದಲ ಜವಾಬ್ದಾರಿ. ರಾಜ್ಯದ ಜನರ ಅಗತ್ಯಗಳನ್ನು ಕಡೆಗಣಿಸಿ ನೀರು ಹರಿಸುವುದು ನ್ಯಾಯಸಮ್ಮತವಲ್ಲ. ಆದುದರಿಂದ ರಾಜ್ಯ ಸರಕಾರ ಯಾವುದೇ ಕಾರಣಕ್ಕೂ ಈ ಆದೇಶವನ್ನು ಪಾಲಿಸಬಾರದು. ಒಂದು ಹನಿ ನೀರನ್ನೂ ತಮಿಳುನಾಡಿಗೆ ಬಿಡುಗಡೆ ಮಾಡಬಾರದು ಎಂದು ಅವರು ಆಗ್ರಹಿಸಿದ್ದಾರೆ.
ಸರಕಾರ ತಕ್ಷಣವೇ ಈ ಆದೇಶವನ್ನು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಮುಂದೆ ಪ್ರಶ್ನಿಸಿ, ಕರ್ನಾಟಕದ ವಾಸ್ತವ ಜಲಸ್ಥಿತಿಯನ್ನು ಸಮಗ್ರವಾಗಿ ಮಂಡಿಸಬೇಕು. ಅಗತ್ಯವಿದ್ದರೆ ಮುಂದಿನ ಕಾನೂನುಬದ್ಧ ಕ್ರಮಗಳನ್ನು ಕೈಗೊಂಡು ರಾಜ್ಯದ ಹಕ್ಕು ಮತ್ತು ಜನರ ಹಿತಾಸಕ್ತಿಯನ್ನು ರಕ್ಷಿಸಬೇಕು.
ಒಂದು ವೇಳೆ ಈ ಅವೈಜ್ಞಾನಿಕ ಆದೇಶವನ್ನು ಅನುಸರಿಸಿ ಸರಕಾರ ನೀರು ಬಿಡುಗಡೆ ಮಾಡಿದರೆ, ಅದರ ವಿರುದ್ಧ ರಾಜ್ಯಾದ್ಯಂತ, ವಿಶೇಷವಾಗಿ ಕಾವೇರಿ ಕೊಳ್ಳದ ಪ್ರದೇಶಗಳಲ್ಲಿ ತೀವ್ರ ಜನಾಕ್ರೋಶ ವ್ಯಕ್ತವಾಗುವ ಸಾಧ್ಯತೆಯಿದೆ. ಇಂತಹ ಪರಿಸ್ಥಿತಿಗೆ ಸರಕಾರ ಹೊಣೆಯಾಗಲಿದೆ ಎಂದು ಅವರು ಎಚ್ಚರಿಸಿದ್ದಾರೆ.
ಕರವೇ ಈ ಆದೇಶವನ್ನು ಒಪ್ಪುವುದಿಲ್ಲ. ರಾಜ್ಯದ ಹಿತಾಸಕ್ತಿ, ರೈತರ ಬದುಕು ಹಾಗೂ ಕುಡಿಯುವ ನೀರಿನ ಹಕ್ಕನ್ನು ರಕ್ಷಿಸುವ ಉದ್ದೇಶದಿಂದ ಈ ಆದೇಶದ ವಿರುದ್ಧ ರಾಜ್ಯಾದ್ಯಂತ ಪ್ರಜಾಸತ್ತಾತ್ಮಕ ಹೋರಾಟವನ್ನು ಸಂಘಟಿಸಲಿದೆ. ಸರಕಾರ ಜನರ ಭಾವನೆಗಳಿಗೆ ಗೌರವ ನೀಡಿ, ಕರ್ನಾಟಕದ ಹಿತಾಸಕ್ತಿಯನ್ನು ಅಗ್ರಸ್ಥಾನದಲ್ಲಿರಿಸಿ ನಿರ್ಧಾರ ಕೈಗೊಳ್ಳಬೇಕು ಎಂದು ನಾರಾಯಣಗೌಡ ಒತ್ತಾಯಿಸಿದ್ದಾರೆ.