‘ಮೇಕೆದಾಟು ವಿಚಾರದಲ್ಲಿ ಮಾತ್ರ ವಿಭಿನ್ನ ಮಾನದಂಡ ಏಕೆ?’; ಚೇತನ್ ಅಹಿಂಸಾಗೆ ಕೆಪಿಸಿಸಿ ಉಪಾಧ್ಯಕ್ಷ ಹುಸೇನ್ ಪತ್ರ

Update: 2026-08-10 00:47 IST


ಬೆಂಗಳೂರು : ‘ಮೇಕೆದಾಟು ಯೋಜನೆ’ ವಿರೋಧಿಸಿ ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿಗೆ ಪತ್ರ ಬರೆದಿದ್ದ ನಟ ಚೇತನ್ ಅಹಿಂಸಾ ನಿಲುವು ಖಂಡಿಸಿರುವ ಕೆಪಿಸಿಸಿ ಉಪಾಧ್ಯಕ್ಷ ಎಸ್.ಎ.ಹುಸೇನ್,’ ದೇಶದ ಅನೇಕ ಬೃಹತ್ ಅಣೆಕಟ್ಟು ಯೋಜನೆಗಳಿಂದ ಸಾವಿರಾರು ಹೆಕ್ಟೇರ್ ಅರಣ್ಯ ಭೂಮಿ ಮುಳುಗಿ, ಲಕ್ಷಾಂತರ ಜನರು ಸ್ಥಳಾಂತರಗೊಂಡಾಗ ನಿಮ್ಮ ಹೋರಾಟ ಎಲ್ಲಿತ್ತು?. ಮೇಕೆದಾಟು ಅಣೆಕಟ್ಟು ವಿಚಾರದಲ್ಲಿ ಮಾತ್ರ ವಿಭಿನ್ನ ಮಾನದಂಡ ಏಕೆ?’ ಎಂದು ಪ್ರಶ್ನಿಸಿದ್ದಾರೆ.

ರವಿವಾರ ಬಹಿರಂಗ ಪತ್ರ ಬರೆದಿರುವ ಹುಸೇನ್, ‘ನೀರಿನ ಹಕ್ಕು ಯಾವುದೇ ಪಕ್ಷದ ಅಥವಾ ರಾಜ್ಯದ ಪ್ರಶ್ನೆಯಲ್ಲ, ಅದು ಮಾನವ ಹಕ್ಕಿನ ಪ್ರಶ್ನೆ. ಪರಿಸರ-ಅಭಿವೃದ್ಧಿ ಪರಸ್ಪರ ವಿರೋಧಿಗಳಲ್ಲ ಎಂಬುದನ್ನು ನಾವು ನೆನಪಿನಲ್ಲಿಟ್ಟುಕೊಳ್ಳಬೇಕು. ನೀರು ಒಂದು ಸರಕು ಅಲ್ಲ, ಅದು ಜೀವಿಯ ಅಗತ್ಯ ಹಾಗೂ ಅನಿವಾರ್ಯತೆ. ಈ ಹಿನ್ನೆಲೆಯಲ್ಲಿ ಮೇಕೆದಾಟು ಹೋರಾಟ ‘ನಮ್ಮ ನೀರು ನಮ್ಮ ಹಕ್ಕು’ ಎಂಬ ಘೋಷವಾಕ್ಯದೊಂದಿಗೆ ಪ್ರಾರಂಭಿಸಲಾಗಿತ್ತು’.

‘ಪರಿಸರ ಸಂರಕ್ಷಣೆಯ ಬಗ್ಗೆ ನಿಮ್ಮ ಕಾಳಜಿಯನ್ನು ಗೌರವಿಸುತ್ತೇವೆ. ಆದರೆ ಈ ಚರ್ಚೆಯಲ್ಲಿ ಬೆಂಗಳೂರಿನ ಹಾಗೂ ದಕ್ಷಿಣ ಕರ್ನಾಟಕದ ಲಕ್ಷಾಂತರ ಜನರ ಕುಡಿಯುವ ನೀರಿನ ಹಕ್ಕಿಗೂ ಸಮಾನ ಸ್ಥಾನ ಸಿಗಬೇಕಲ್ಲವೇ?. 2018ರ ಫೆಬ್ರವರಿ 16ರಂದು ದೇಶದ ಸುಪ್ರೀಂ ಕೋರ್ಟ್ ಬೆಂಗಳೂರಿನ ಕುಡಿಯುವ ನೀರಿನ ಅಗತ್ಯವನ್ನು ‘ಅತ್ಯುನ್ನತ ಆದ್ಯತೆ’ ಎಂದು ಪರಿಗಣಿಸಿ, 4.75 ಟಿಎಂಸಿ ನೀರನ್ನು ಹಂಚಿಕೆ ಮಾಡಿದೆ’ ಎಂದು ಹುಸೇನ್ ಉಲ್ಲೇಖಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News