ಕೋರ್ಟ್ ಷರತ್ತು ಉಲ್ಲಂಘಿಸಿ ದಿಲ್ಲಿ ಭೇಟಿ?; ಸಚಿವ ನಾಗೇಂದ್ರ ವಜಾಕ್ಕೆ ವಿಪಕ್ಷ ನಾಯಕ ಆರ್.ಅಶೋಕ್ ಆಗ್ರಹ
ನಾಗೇಂದ್ರ/ಆರ್.ಅಶೋಕ್
ಬೆಂಗಳೂರು : ‘ನ್ಯಾಯಾಲಯದ ಆದೇಶವನ್ನ ಉಲ್ಲಂಘನೆ ಮಾಡಿರುವ ಸಚಿವ ಬಿ.ನಾಗೇಂದ್ರ ಅವರನ್ನು ಸಂಪುಟದಿಂದ ವಜಾ ಮಾಡಬೇಕು. ಈ ಕುರಿತು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಕ್ಷಣವೇ ಸ್ಪಷ್ಟನೆ ನೀಡಬೇಕು’ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ಆಗ್ರಹಿಸಿದ್ದಾರೆ.
ರವಿವಾರ ಕೋರ್ಟ್ ಷರತ್ತು ಮೀರಿ ಸಚಿವ ನಾಗೇಂದ್ರ ದಿಲ್ಲಿ ಭೇಟಿ ನೀಡಿದ್ದಾರೆಂಬ ಆರೋಪಕ್ಕೆ ಸಂಬಂಧಿಸಿದಂತೆ ಎಕ್ಸ್ ನಲ್ಲಿ ಪೋಸ್ಟ್ ಹಾಕಿರುವ ಆರ್.ಅಶೋಕ್, ಜಾಮೀನು ಷರತ್ತುಗಳನ್ನು ಉಲ್ಲಂಘಿಸಿ, ನ್ಯಾಯಾಲಯದ ಕಣ್ಣಿಗೆ ಮಣ್ಣೆರಚಿ ದಿಲ್ಲಿಯಲ್ಲಿ ಓಡಾಡುವಷ್ಟು ಅಧಿಕಾರದ ಮದ ಏರಿದೆಯೇ?. ವಾಲ್ಮೀಕಿ ನಿಗಮದ ಬಹುಕೋಟಿ ರೂ.ಭ್ರಷ್ಟಾಚಾರ ಪ್ರಕರಣದಲ್ಲಿ ಈಡಿ ತನಿಖೆ ಎದುರಿಸುತ್ತಿರುವ ಕಳಂಕಿತ ಸಚಿವ ನಾಗೇಂದ್ರ, ಕೋರ್ಟ್ ವಿಧಿಸಿರುವ ಷರತ್ತಿ ನಡುವೆಯೇ ಅನುಮತಿ ಪಡೆಯದೆ ದಿಲ್ಲಿಗೆ ತೆರಳಿದ್ದಾರೆಯೇ? ಎಂಬ ಪ್ರಶ್ನೆ ಈಗ ಎದುರಾಗಿದೆ ಎಂದು ಉಲ್ಲೇಖಿಸಿದ್ದಾರೆ.
‘ಮಾಧ್ಯಮ ವರದಿಗಳ ಪ್ರಕಾರ, ಜುಲೈ 15 ಮತ್ತು ಜು.26ರಂದು ನಾಗೇಂದ್ರ ದಿಲ್ಲಿ ಪ್ರವಾಸದ ಕುರಿತು ಈಡಿ ಸಿಸಿಟಿವಿ ದೃಶ್ಯಗಳು ಹಾಗೂ ವಿಮಾನ ನಿಲ್ದಾಣದ ದಾಖಲೆಗಳನ್ನು ಪರಿಶೀಲಿಸುತ್ತಿದೆ. ಒಂದೆಡೆ ತನಿಖೆಗೆ ಕಾಲಾವಕಾಶ ಕೋರುತ್ತಾ, ಇನ್ನೊಂದೆಡೆ ಕೋರ್ಟ್ ಅನುಮತಿಯನ್ನೇ ಪಡೆಯದೆ ಪ್ರಯಾಣ ಬೆಳೆಸುವುದು ಕಾಂಗ್ರೆಸ್ ಪಕ್ಷ ಕಾನೂನಿಗೆ, ನ್ಯಾಯಾಲಯಕ್ಕೆ ಎಷ್ಟು ಗೌರವ ಕೊಡುತ್ತದೆ ಎನ್ನುವುದನ್ನ ತೋರಿಸುತ್ತದೆ ಎಂದು ಅವರು ಲೇವಡಿ ಮಾಡಿದ್ದಾರೆ.
‘ಕಾನೂನಿಗಿಂತ ಯಾರೂ ದೊಡ್ಡವರಲ್ಲ. ಅಧಿಕಾರದಲ್ಲಿದ್ದವರಿಗೆ ಒಂದು ಕಾನೂನು, ಸಾಮಾನ್ಯ ನಾಗರಿಕರಿಗೆ ಮತ್ತೊಂದು ಕಾನೂನು ಎಂಬ ಕಾಂಗ್ರೆಸ್ ಪಕ್ಷದ ಮನಸ್ಥಿತಿ ರಾಜ್ಯದ ಜನರ ಮುಂದೆ ಮತ್ತೊಮ್ಮೆ ಬಯಲಾಗಿದೆ. ಸಿಎಂ ಡಿ.ಕೆ.ಶಿವಕುಮಾರ್ ರೇ, ನಿಮ್ಮ ಸರಕಾರಕ್ಕೆ ಕೋರ್ಟ್ ಆದೇಶ ದೊಡ್ಡದೋ, ಇಲ್ಲ ನಿಮ್ಮ ಹೈಕಮಾಂಡ್ ಆದೇಶ ದೊಡ್ಡದೋ?. ಭ್ರಷ್ಟಾಚಾರ ಮತ್ತು ಕಾನೂನು ಉಲ್ಲಂಘನೆಯ ಆರೋಪ ಎದುರಿಸುತ್ತಿರುವ ವ್ಯಕ್ತಿಗೆ ರಾಜಕೀಯ ಅಭಯ ನೀಡುವುದೇ ನಿಮ್ಮ ‘ಪಾರದರ್ಶಕ’ ಆಡಳಿತದ ಮಾದರಿಯೇ?’ ಎಂದು ಆರ್.ಅಶೋಕ್ ಪ್ರಶ್ನಿಸಿದ್ದಾರೆ.
ಜಾಮೀನು ಷರತ್ತುಗಳನ್ನು ಉಲ್ಲಂಘಿಸಿ, ನ್ಯಾಯಾಲಯದ ಕಣ್ಣಿಗೆ ಮಣ್ಣೆರಚಿ ದೆಹಲಿಗೆ ಓಡಾಡುವಷ್ಟು ಅಧಿಕಾರದ ಮದ ಏರಿದೆಯೇ?
— R. Ashoka (@RAshokaBJP) August 9, 2026
ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಬಹುಕೋಟಿ ಭ್ರಷ್ಟಾಚಾರ ಪ್ರಕರಣದಲ್ಲಿ ED ತನಿಖೆ ಎದುರಿಸುತ್ತಿರುವ ಕಳಂಕಿತ ಸಚಿವ ನಾಗೇಂದ್ರ ಅವರು, ನ್ಯಾಯಾಲಯ ವಿಧಿಸಿರುವ ಷರತ್ತುಗಳ ನಡುವೆಯೇ ಅನುಮತಿ ಪಡೆಯದೆ… pic.twitter.com/mKu3s6dVH1