ಮೂರನೇ ದಿನವೂ ಆಹಾರ ಸುರಕ್ಷತಾ ಅಧಿಕಾರಿಗಳಿಂದ ಪ್ರತಿಷ್ಠಿತ ಹೋಟೆಲ್‌ಗಳ ಮೇಲೆ ದಾಳಿ

Update: 2026-08-10 00:43 IST

ಸಾಂದರ್ಭಿಕ ಚಿತ್ರ

ಬೆಂಗಳೂರು : ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯ ಅಧಿಕಾರಿಗಳು ಸತತ ಮೂರನೇ ದಿನವೂ ಯುಬಿ ಸಿಟಿ, ಎಂಜಿ ರಸ್ತೆ, ಬ್ರಿಗೆಡ್ ರಸ್ತೆಗಳಲ್ಲಿರುವ ಪ್ರತಿಷ್ಠಿತ ಹೋಟೆಲ್‌ಗಳ ಮೇಲೆ ದಾಳಿ ನಡೆಸಿ ಆಹಾರ ಮಾದರಿಗಳನ್ನು ಪರಿಶೀಲಿಸಿ ಕೆಲವನ್ನು ಜಪ್ತಿ ಮಾಡಿದ್ದಾರೆ.

ರವಿವಾರ ನಗರದ ಯುಬಿ ಸಿಟಿ ಮಾಲ್ ಸೇರಿದಂತೆ ಇನ್ನು ಕೆಲವೆಡೆ ವಿಶೇಷ ತಪಾಸಣೆ ಕಾರ್ಯಾಚರಣೆ ನಡೆಸಲಾಗಿದೆ. ಕೇಕ್ ಸೇರಿದಂತೆ ಬೇಕರಿ ವಸ್ತುಗಳು, ಫಾಸ್ಟ್‌ಫುಡ್‌ ಗೆ ಬಳಸುವ ಸಾಸ್, ಮಾಂಸಾಹಾರವನ್ನು ಅಧಿಕಾರಿಗಳು ಪರಿಶೀಲಿಸಿದ್ದಾರೆ. ಶುಚಿತ್ವ, ಆಹಾರ ಉತ್ಪನ್ನಗಳ ದಾಸ್ತಾನು, ಗುಣಮಟ್ಟ ಹಾಗೂ ಸುರಕ್ಷತಾ ಕ್ರಮಗಳನ್ನು ಪರೀಕ್ಷಿಸಲಾಯಿತು ಎಂದು ಆಹಾರ ಸುರಕ್ಷತಾ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ನಕಲಿ ಸೌಂದರ್ಯ ವರ್ಧಕಗಳ ಮೇಲೆ ದಾಳಿಗೆ ಸಜ್ಜು: ಕಳಪೆ, ನಕಲಿ ಸೌಂದರ್ಯವರ್ಧಕಗಳ ಮಾರಾಟದ ವಿರುದ್ಧವೂ ಆರೋಗ್ಯ ಇಲಾಖೆ ಕಾರ್ಯಾಚರಣೆಗೆ ಸಜ್ಜಾಗಿದೆ ಎಂದು ಮೂಲಗಳು ತಿಳಿಸಿವೆ. ನಗರದಲ್ಲಿ ಮಾರಾಟವಾಗುತ್ತಿರುವ ವಿವಿಧ ಬ್ರಾಂಡ್‌ಗಳ ಲಿಪ್‌ಸ್ಟಿಕ್‌ಗಳ ಜತೆಗೆ ರಸ್ತೆಬದಿ ಮಾರಾಟವಾಗುತ್ತಿದ್ದ ಉತ್ಪನ್ನಗಳ ಮಾದರಿಗಳನ್ನೂ ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಲಾಗಿದೆ. ಒಟ್ಟು 23 ಮಾದರಿಗಳಲ್ಲಿ ಅಪಾಯಕಾರಿ ರಾಸಾಯನಿಕ ಅಂಶಗಳು ಪತ್ತೆಯಾಗಿವೆ ಎಂದು ಇಲಾಖೆ ತಿಳಿಸಿದೆ. ಕೆಲವು ಮಾದರಿಗಳಲ್ಲಿ ಕ್ಯಾನ್ಸರ್‌ಗೆ ಕಾರಣವಾಗಬಹುದಾದ ಕಾರ್ಸಿನೋಜೆನಿಕ್ ಅಂಶಗಳ ಜತೆಗೆ ಲೋಹದ ಅಂಶಗಳೂ ಕಂಡುಬಂದಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆಹಾರ ಸುರಕ್ಷತಾ ಇಲಾಖೆ ಆಯುಕ್ತ ಶ್ರೀನಿವಾಸ್ ಮಾತನಾಡಿ, ಮಹಿಳೆಯರು ಸೌಂದರ್ಯವರ್ಧಕಗಳನ್ನು ಖರೀದಿಸುವಾಗ ಉತ್ಪನ್ನದ ಗುಣಮಟ್ಟ, ಲೇಬಲ್, ತಯಾರಿಕೆ ದಿನಾಂಕ ಹಾಗೂ ಮುಕ್ತಾಯ ದಿನಾಂಕವನ್ನು ಕಡ್ಡಾಯವಾಗಿ ಪರಿಶೀಲಿಸುವಂತೆ ಸಲಹೆ ನೀಡಿದ್ದಾರೆ.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News