ಕೀರ್ತಿ ತಡವಾದಷ್ಟು ಸೃಜನಶೀಲ ಸಾಹಿತ್ಯ ಸೃಷ್ಠಿಯಾಗುತ್ತೆ : ಡಾ.ಕಾ.ವೆಂ.ಶ್ರೀನಿವಾಸಮೂರ್ತಿ

ಡಾ.ಅರವಿಂದ ಮಾಲಗತ್ತಿ ಅವರ ಸಾಹಿತ್ಯ ವಿಚಾರ ಸಂಕಿರಣ

Update: 2026-08-09 21:18 IST

ಬೆಂಗಳೂರು : ಸಾಮಾನ್ಯವಾಗಿ ಸೃಜನಶೀಲತೆ, ಪಾಂಡಿತ್ಯವು ಜನಪ್ರಿಯತೆಯಲ್ಲಿ ಕಳೆದು ಹೋಗುವ ಸಾಧ್ಯತೆ ಇರುತ್ತದೆ. ಹಾಗೆಯೇ ಕೀರ್ತಿ ತಡವಾದಷ್ಟು ಸೃಜನಶೀಲ ಸಾಹಿತ್ಯ ಸೃಷ್ಟಿಯಾಗುತ್ತದೆ ಎಂದು ಸಾಹಿತಿ ಡಾ.ಕಾ.ವೆಂ.ಶ್ರೀನಿವಾಸಮೂರ್ತಿ ಅಭಿಪ್ರಾಯಪಟ್ಟಿದ್ದಾರೆ.

ರವಿವಾರ ಬೆಂಗಳೂರು ನಗರ ಜಿಲ್ಲಾ ಕಸಾಪ, ಸಾಹಿತ್ಯ ಅಕಾಡಮಿಯ ಸಹಯೋಗದೊಂದಿಗೆ ನಗರದ ಕಸಾಪ ಆವರಣದ ಕೃಷ್ಣರಾಜ ಪರಿಷತ್ ಮಂದಿರದಲ್ಲಿ ನಡೆದ ಹಿರಿಯ ಸಾಹಿತಿ, ಹೋರಾಟಗಾರ ಡಾ. ಅರವಿಂದ ಮಾಲಗತ್ತಿ ಅವರ ಸಾಹಿತ್ಯ ವಿಚಾರ ಸಂಕಿರಣದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಡಾ. ಅರವಿಂದ ಮಾಲಗತ್ತಿ ಅವರು ಜನಪ್ರಿಯತೆಯ ಬಗ್ಗೆ ತಲೆಕೆಡಿಸಿಕೊಂಡವರಲ್ಲ. ಅವರು ‘ಗೌರ್ನಮೆಂಟ್ ಬ್ರಾಹ್ಮಣ’ ಕೃತಿಯಿಂದ ಇಂದಿನ ವರೆಗೆ ಸೃಜನಶೀಲತೆ ಕಳೆದುಕೊಂಡಿಲ್ಲ. ಅಧ್ಯಾಪಕರಾಗಿರುವ ಡಾ.ಅರವಿಂದ ಮಾಲಗತ್ತಿ ಅವರು ಹಲವು ವಿಶ್ವ ವಿದ್ಯಾಲಯಗಳಲ್ಲಿ ಕೆಲಸ ಮಾಡಿದ್ದಾರೆ. ಆದರೆ ಜನತಾ ವಿವಿಯಲ್ಲಿ ಅವರು ಮಾಡಿದ ಕೆಲಸ ವಿಶಿಷ್ಟ ಎಂದು ಅವರು ತಿಳಿಸಿದರು.

ಇದೇ ವೇಳೆ ಡಾ.ಅರವಿಂದ ಮಾಲಗತ್ತಿ ಅವರ ಕಾವ್ಯದ ಕುರಿತು ಕವಿ ಡಾ.ಎಚ್.ಲಕ್ಷ್ಮೀನಾರಾಯಣಸ್ವಾಮಿ, ಕಥನ ಸಾಹಿತ್ಯದ ಕುರಿತು ಡಾ.ರಾಜಪ್ಪ ದಳವಾಯಿ, ಆತ್ಮಕಥನದ ಕುರಿತು ಸಾಹಿತಿ ಡಾ.ಕೆ. ಶರೀಫಾ, ಜಾನಪದ ಸಾಹಿತ್ಯ ಕುರಿತು ಡಾ.ಎಂ.ಬೈರೇಗೌಡ, ವಿಮರ್ಶೆ ಕುರಿತು ಡಾ.ರಾಜಶೇಖರ ಮಠಪತಿ ಅವರು ವಿಷಯ ಮಂಡನೆ ಮಾಡಿದರು.

ಕಾರ್ಯಕ್ರಮದಲ್ಲಿ ಸಾಹಿತಿ ಡಾ.ಅರವಿಂದ ಮಾಲಗತ್ತಿ, ಡಾ.ಧರಣಿದೇವಿ ಮಾಲಗತ್ತಿ, ನಿವೃತ್ತ ಪೊಲೀಸ್ ಅಧಿಕಾರಿ ಬಸವರಾಜ ಮಾಲಗತ್ತಿ, ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ. ಪ್ರಕಾಶ್‍ಮೂರ್ತಿ ಸೇರಿದಂತೆ ಮತ್ತಿತರರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News