Bengaluru | ಉದ್ಯಮಿಗೆ 18.41 ಕೋಟಿ ರೂ. ವಂಚನೆ; ಪ್ರಕರಣ ದಾಖಲು

Update: 2026-08-09 21:15 IST

ಬೆಂಗಳೂರು : ಸಹಕಾರ ಬ್ಯಾಂಕ್‍ವೊಂದರ ವ್ಯವಸ್ಥಾಪಕನೊಬ್ಬ ತನ್ನ ಸಹಚರರ ಜೊತೆಗೂಡಿ ಉದ್ಯಮಿಯೊಬ್ಬರಿಗೆ 18.41 ಕೋಟಿ ರೂ.ಹಣ ವಂಚಿಸಿರುವ ಸಂಬಂಧ ಸಿಸಿಬಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಉದ್ಯಮಿ ನವೀನ್ ಎಂಬುವವರು ಬನಶಂಕರಿಯಲ್ಲಿರುವ ಸಹಕಾರ ಬ್ಯಾಂಕ್‍ನಲ್ಲಿ 7 ಚಾಲ್ತಿ ಖಾತೆ ಹೊಂದಿದ್ದಾರೆ. ಕೆಲ ದಿನಗಳ ಹಿಂದೆ ಬ್ಯಾಂಕ್‍ನ ವ್ಯವಸ್ಥಾಪಕ ಕೃಷ್ಣಮೂರ್ತಿ ತಾತ್ಕಾಲಿಕ ಓವರ್‍ಡ್ರಾಫ್ಟ್(ಟಿಒಡಿ) ಲೋನ್ ಬಿಡುಗಡೆಗೊಳಿಸುತ್ತೇವೆ. ಆದರೆ ನಾವು ಸೂಚಿಸುವ ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾಯಿಸಬೇಕು ಎಂದು ನವೀನ್ ಅವರಿಗೆ ಹೇಳಿದ್ದರು. ಅದಕ್ಕೆ ಒಪ್ಪಿದಾಗ ಸಾಲಬಿಡುಗಡೆಗೊಳಿಸಿದ್ದರು ಎನ್ನಲಾಗಿದೆ.

ಬಳಿಕ ಸಾಲವಾಗಿ ಪಡೆದ ಹಣವನ್ನು ಕೆಲವು ಖಾತೆಗಳಿಗೆ ವರ್ಗಾಯಿಸಲಾಗಿತ್ತು. ಅಲ್ಲದೆ, ಅದಕ್ಕೆ ಆಸ್ತಿ ದಾಖಲೆಗಳನ್ನು ಅಡಮಾನ ಇರಿಸಿಕೊಂಡಿದ್ದು, ಬ್ಯಾಂಕಿನವರು ಬಡ್ಡಿಯನ್ನು ಕಟ್ಟಿಸಿಕೊಂಡಿದ್ದಾರೆ. ಆದರೆ, ಸಾಲದ ಹಣ ಬಳಸಿಕೊಳ್ಳಲು ಅವಕಾಶ ನೀಡಿಲ್ಲ ಎಂದು ಉದ್ಯಮಿ ನವೀನ್ ಆರೋಪಿಸಿದ್ದಾರೆ.

ಸಹಕಾರ ಬ್ಯಾಂಕ್‍ನ ವ್ಯವಸ್ಥಾಪಕ ವಿ. ಕೃಷ್ಣಮೂರ್ತಿ ಸಹಚರರಾದ ಹರೀಶ್, ಸಚಿನ್ ಹಾಗೂ ಕೆಲ ಸೌಹಾರ್ದ ಬ್ಯಾಂಕ್‍ಗಳ ಅಧಿಕಾರಿಗಳು ಒಳಸಂಚು ರೂಪಿಸಿ 18.41 ಕೋಟಿ ರೂ. ವಂಚಿಸಿದ್ದಾರೆ. ಅಲ್ಲದೆ ಖಾತೆ ಸ್ಥಗಿತಗೊಳಿಸುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ನವೀನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಹೀಗಾಗಿ ಪ್ರಕರಣವನ್ನು ದಾಖಲಿಸಿಕೊಂಡ ಸಿಸಿಬಿ ಪೊಲೀಸರು ಆರೋಪಿಗಳಿಗೆ ನೋಟಿಸ್ ನೀಡಿದ್ದಾರೆ.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News