ಆಹಾರ ಇಲಾಖೆ ಅಧಿಕಾರಿಗಳಿಂದ ವಿಧಾನಸೌಧ ಕ್ಯಾಂಟಿನ್‍ಗಳಲ್ಲಿ ಪರಿಶೀಲನೆ
ಬೆಂಗಳೂರು, : ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯ ಅಧಿಕಾರಿಗಳು ನಗರದಲ್ಲಿರುವ ಝೊಮಾಟೊ ಹೈಪರ್ ಪ್ಯೂರ್ ನಲ್ಲಿ ಪರಿಶೀಲಿಸಿದ್ದು, ಆ ವೇಳೆ ಹಲವು ಲೋಪಗಳು ಕಂಡು ಬಂದಿವೆ. ಇನ್ನು ಶಾಸಕರ ಭವನದಲ್ಲಿರುವ ಮಲ್ಲಿಗೆ ಹೋಟೆಲ್‍ನಲ್ಲಿ ಜಿರಳೆಗಳ ಓಡಾಟ ಕಂಡು ಬಂದರೆ, ಆರೋಗ್ಯಸೌಧದಲ್ಲಿರುವ ಕ್ಯಾಂಟಿನ್‍ನಲ್ಲೂ ಅನೈರ್ಮಲ್ಯ ಪತ್ತೆಯಾಗಿದೆ.
ಆಹಾರ ಸುರಕ್ಷತಾ ವಿಭಾಗದ ವತಿಯಿಂದ ಬೆಂಗಳೂರು ನಗರ ಜಿಲ್ಲೆಯಲ್ಲಿ ಕೈಗೊಂಡ ತಪಾಸಣೆ ವೇಳೆ ಆಹಾರ ಪದಾರ್ಥಗಳು ಹಾಗೂ ಮಾಂಸ/ಮೀನುಗಳು ಝೊಮಾಟೊ ಹೈಪರ್ ಪ್ಯೂರ್ ನಿಂದ ಸರಬರಾಜು ಆಗಿರುವುದು ಕಂಡಬಂದಿತ್ತು. ಹೀಗಾಗಿ ಅಧಿಕಾರಿಗಳು, ಆಹಾರ ಪದಾರ್ಥಗಳ ಗುಣಮಟ್ಟ, ಸುರಕ್ಷತೆ, ಸಂಗ್ರಹಣೆ, ಲೇಬಲಿಂಗ್ ಹಾಗೂ ಆಹಾರ ನಿರ್ವಹಣಾ ಕ್ರಮಗಳನ್ನು ಪರಿಶೀಲಿಸುವ ಉದ್ದೇಶದಿಂದ ತಪಾಸಣೆ ಕೈಗೊಂಡಿದ್ದರು.
ಝೊಮಾಟೊ ಹೈಪರ್ ಪ್ಯೂರ್ ನ ತಪಾಸಣೆಯ ವೇಳೆ ಸ್ಥಳವು ನೈರ್ಮಲ್ಯಯಿಂದ ಕೂಡಿತ್ತು. ಆದರೆ, 146 ಕೆ.ಜಿ. ಚಿಕನ್‍ಗೆ ತಯಾರಕರ ಎಫ್‍ಎಸ್‍ಎಸ್‍ಎಐ ಪರವಾನಿಗೆ ಸಂಖ್ಯೆ ಇರಲಿಲ್ಲ. 40 ಕೆಜಿ ಬೆಳ್ಳುಳ್ಳಿಯಲ್ಲಿ ತಯಾರಕರ ಎಫ್‍ಎಸ್‍ಎಸ್‍ಎಐ ಪರವಾನಿಗೆ ಚಾಲ್ತಿ ಇರಲಿಲ್ಲ. 300ಕೆಜಿ ಅಕ್ಕಿಗೆ ಹಾಗೂ 20 ಕೆಜಿ ಡ್ರೈ ಫ್ರೂಟ್ಸ್ ಗೆ ತಪ್ಪಾದ ಲೇಬಲ್ ಅಂಟಿಸಿರುವುದು ಪತ್ತೆಯಾಗಿದೆ. 10ಕೆಜಿ ಆಮದು ಮಾಡಿಕೊಂಡ ಮೂಲಂಗಿ ಉಪ್ಪಿನಕಾಯಿ ಶೈಥೀಕರಿಸಿದ ಜಾಗದಲ್ಲಿ ಇರಲಿಲ್ಲ ಹಾಗೂ ಲೇಬಲ್ ಮಾಡುವುದರಲ್ಲಿ ಉಲ್ಲಂಘನೆ, 15 ಕೆಜಿ ಮಸಾಲ ಪ್ಯಾಕೇಟ್‍ಗಳಿಗೆ ತಪ್ಪಾದ ಲೇಬಲ್ ಅಂಟಿಸಿರುವುದು ಕಂಡು ಬಂದಿದೆ. 5 ಲೀಗಲ್ ಸ್ಯಾಂಪಲ್ಸ್, 35 ಸರ್ವೆ ಸ್ಯಾಪಲ್ಸ್ ಸೇರಿ 40 ಆಹಾರ ಮಾದರಿಗಳನ್ನು ಸಂಗ್ರಹಿಸಲಾಗಿದೆ.
ವಿಧಾನಸೌಧ/ಆರೋಗ್ಯಸೌಧ ಕ್ಯಾಂಟಿನ್‍ಗಳ ಪರಿಶೀಲನೆ: ಆರೋಗ್ಯಸೌಧ, ವಿಧಾನಸೌಧ ಹಾಗೂ ಶಾಸಕರ ಭವನ ಮತ್ತು ಬಹು ಮಹಡಿ ಕಟ್ಟಡಗಳ ಆವರಣದಲ್ಲಿರುವ ಹೊಟೇಲ್‍ಗಳು/ಆಹಾರ ಉದ್ದಿಮೆಗಳಿಗೆ ಭೇಟಿ ನೀಡಿ, ಪರಿಶೀಲಿಸಿದ ಸಂದರ್ಭದಲ್ಲಿ ಅವಧಿ ಮೀರಿದ ಸೂಜಿ ರವಾ 500ಗ್ರಾಂ, ಕೋಕೊನಟ್ ಪೌಡರ್ 500 ಗ್ರಾಂ ಉತ್ಪನ್ನಗಳನ್ನು ಜಪ್ತಿ ಮಾಡಲಾಗಿದೆ. ಅಲ್ಲದೆ, ಅನೈರ್ಮಲ್ಯ ಕಂಡುಬಂದ ಹಿನ್ನೆಲೆಯಲ್ಲಿ ತಿಳುವಳಿಕೆ ನೋಟಿಸ್ ಜಾರಿಗೊಳಿಸಲಾಗಿದೆ. ಪ್ರಕರಣವನ್ನು ಮಾನ್ಯ ನಿರ್ಣಾಧಿಕಾರಿಗಳ ನ್ಯಾಯಲಯಲ್ಲಿ ಕಾನೂನು ಕ್ರಮ ಕೈಗೊಳ್ಳಲು ಪ್ರಕರಣವನ್ನು ದಾಖಲಿಸಲಾಗುವುದು.
ನಂದಿನಿ ಪಾರ್ಲರ್ ಗೆ ಭೇಟಿ ನೀಡಿ ಪರಿಶೀಲಿಸಿದ ಸಂದರ್ಭದಲ್ಲಿ, ಲೇಬಲಿಂಗ್‍ಗೆ ಸಂಬಂಧಿಸಿದ ನಿಯಮಗಳ ಉಲ್ಲಂಘನೆ ಕಂಡುಬಂದ ಹಿನ್ನೆಲೆಯಲ್ಲಿ ತಿಳುವಳಿಕೆ ನೋಟಿಸ್ ಜಾರಿಗೊಳಿಸಲಾಗಿದೆ.
ಬಹುಮಹಡಿ ಕಟ್ಟಡದ ಆವರಣದಲ್ಲಿ ಅನೈರ್ಮಲ್ಯ ಕಂಡುಬಂದ ಹಿನ್ನೆಲೆಯಲ್ಲಿ, ಸದರಿ ಹೋಟೆಲ್‍ನ್ನು ಮುಚ್ಚಲಾಗಿದೆ. ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ-2006 ಹಾಗೂ ನಿಯಮಗಳು, 2011ರ ಅನ್ವಯ, ಹೊಟೇಲ್‍ನಲ್ಲಿನ ಅನೈರ್ಮಲ್ಯಕ್ಕೆ ಸಂಬಂಧಿಸಿದ ಲೋಪಗಳನ್ನು ಸರಿಪಡಿಸಿಕೊಂಡ ನಂತರವಷ್ಟೇ, ಅನುಮತಿ ಪಡೆದು ಹೊಟೇಲ್‍ನ್ನು ಪುನರಾರಂಭಿಸುವುದಾಗಿ ಮುಚ್ಚಳಿಕೆ ಪತ್ರವನ್ನು ಸಲ್ಲಿಸಲಾಗಿದೆ. ಈ ಪ್ರಕರಣದಲ್ಲಿ ವಿಚಾರಣೆ ನಡೆಸಿ ಕಾನೂನು ರೀತಿ ಕ್ರಮ ಜರುಗಿಸಲಾಗುವುದು ಎಂದು ಇಲಾಖೆಯ ಪ್ರಕಟನೆಯಲ್ಲಿ ತಿಳಿಸಲಾಗಿದೆ.