Bengaluru | ಬಾಲಕಿಗೆ ಲೈಂಗಿಕ ಕಿರುಕುಳ ಆರೋಪ: ಹಾಸ್ಟೆಲ್ ಮುಖ್ಯಸ್ಥನ ವಿರುದ್ಧ ಪೋಕ್ಸೊ ಪ್ರಕರಣ ದಾಖಲು
ಸಾಂದರ್ಭಿಕ ಚಿತ್ರ | Photo Credit : magnific
ಬೆಂಗಳೂರು : ನಗರದ ಹೊರವಲಯದಲ್ಲಿರುವ ಹಾಸ್ಟೆಲ್‍ನಲ್ಲಿರುವ 13 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಹಾಸ್ಟೆಲ್ ಮುಖ್ಯಸ್ಥನ ಮೇಲೆ ಪೋಕ್ಸೊ ಕಾಯ್ದೆಯಡಿ ಎಫ್‍ಐಆರ್ ದಾಖಲಾಗಿದೆ.
ಜಾನ್ ಶಮೈನ್(46) ಎಂಬುವವರು ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಿ ಎಂದು ತಿಳಿದು ಬಂದಿದೆ. ಒಂದು ವರ್ಷದ ಹಿಂದೆ ಬಾಲಕಿಯನ್ನು ಹಾಸ್ಟೆಲ್‍ಗೆ ಓದಲು ಸೇರಿಸಲಾಗಿತ್ತು. ಆದರೆ ಹಿಂದಿನ ಮೂರು ತಿಂಗಳಿನಿಂದಲೂ ಹಾಸ್ಟೆಲ್ ನಡೆಸುವ ಮುಖ್ಯಸ್ಥನಾದ ಜಾನ್ ಶಮೈನ್ ಬಾಲಕಿಯೊಂದಿಗೆ ಅಸಭ್ಯವಾಗಿ ವರ್ತಿಸುತ್ತಿದ್ದನು ಎಂದು ಹೇಳಲಾಗಿದೆ.
ಆ.8ರ ಸಂಜೆ ಸುಮಾರು 4.30ರ ಹೊತ್ತಿನಲ್ಲಿ ಬಾಲಕಿಯನ್ನು ಶೌಚಾಲಯಕ್ಕೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಲು ಪ್ರಯತ್ನಿಸಿದ್ದಾನೆ ಎಂದು ಬಾಲಕಿಯ ಪೋಷಕರು ಬೆಂಗಳೂರು ಹೊರ ವಲಯದ ವಿಶ್ವನಾಥಪುರ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ.
ಘಟನೆಯಿಂದ ಬಾಲಕಿಯು ಮಾನಸಿಕ ಖಿನ್ನತೆಗೆ ಒಳಗಾಗಿ ಮಹಡಿಯ ಮೇಲೆ ಹೋಗಿ ಸಾಯಲು ಪ್ರಯತ್ನಿಸಿದಾಗ ಹಾಸ್ಟೆಲ್‍ನಲ್ಲಿದ್ದ ಮತ್ತೊಬ್ಬ ವಿದ್ಯಾರ್ಥಿನಿ, ಸಂತ್ರಸ್ತ ಬಾಲಕಿಗೆ ಬುದ್ದಿವಾದ ಹೇಳಿ, ಧೈರ್ಯ ತುಂಬಿ ವಾಪಸ್ ಕರೆದುಕೊಂಡು ಬಂದಿದ್ದಾಳೆ. ಇದಕ್ಕೂ ಮುಂಚೆಯೂ 5 ಬಾರಿ ಹೀಗೆ ಲೈಂಗಿಕ ದೌರ್ಜನ್ಯ ಎಸಗಿರುತ್ತಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಅಲ್ಲದೆ, ಆರೋಪಿ ಜಾನ್ ಶಮೈನ್ ಬಾಲಕಿಯ ಪೋಷಕರನ್ನು ನಿಂದಿಸಿದ್ದು, ಪ್ರಾಣ ಬೆದರಿಕೆಯನ್ನೂ ಹಾಕಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ದೂರಿನ ಅನ್ವಯ ಆರೋಪಿ ಜಾನ್ ಶಮೈನ್ ವಿರುದ್ಧ ಪೋಕ್ಸೊ ಕಾಯ್ದೆ ಜೊತೆಗೆ ಬಿಎನ್‍ಎಸ್‍ನ 319(2), 351(2), 352 ಸೆಕ್ಷನ್‍ಗಳಡಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.