ಬಗರ್‌ಹುಕುಂ ಜಮೀನು ಮಂಜೂರಾತಿಯಲ್ಲಿ ಅಕ್ರಮ ಆರೋಪ; ಮಾಜಿ ಶಾಸಕ ಲಿಂಗೇಶ್‌ಗೆ ಜಾಮೀನು ನೀಡಿದ ಹೈಕೋರ್ಟ್
ಬೆಂಗಳೂರು: ಬಗರ್‌ಹುಕುಂ ಜಮೀನು ಮಂಜೂರಾತಿಯಲ್ಲಿ ಅಕ್ರಮವೆಸಗಿದ ಆರೋಪದಲ್ಲಿ ಬಂಧನಕ್ಕೊಳಗಾಗಿದ್ದ ಬೇಲೂರಿನ ಮಾಜಿ ಶಾಸಕ ಕೆ.ಎಸ್. ಲಿಂಗೇಶ್‌ಗೆ ಹೈಕೋರ್ಟ್ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.
ಜಾಮೀನು ಕೋರಿ ಕೆ.ಎಸ್. ಲಿಂಗೇಶ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ಪೂರ್ಣಗೊಳಿಸಿ ಕಾಯ್ದಿರಿಸಿದ್ದ ತೀರ್ಪನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಪ್ರಕಟಿಸಿದ್ದು, ಅರ್ಜಿಯನ್ನು ಮಾನ್ಯ ಮಾಡಿ ಆದೇಶಿಸಿದೆ.
ಅರ್ಜಿದಾರರನ್ನು ವಶಕ್ಕೆ ಪಡೆದು 40 ದಿನಗಳಾಗಿದ್ದು, ಅಂದಿನಿಂದಲೂ ಅವರು ಕಸ್ಟಡಿಯಲ್ಲಿದ್ದಾರೆ. ಅರ್ಜಿದಾರರು ಓಪನ್ ಹಾರ್ಟ್ ಸರ್ಜರಿಗೆ ಒಳಗಾಗಿದ್ದು, ಕಾರಾಗೃಹದಲ್ಲಿ ಅವರ ಆರೋಗ್ಯ ಕ್ಷಿಣಿಸುತ್ತಿದೆ. ಪ್ರಕರಣದ ತನಿಖೆ ಪ್ರಗತಿಯಲ್ಲಿದೆ ಮತ್ತು ಸಿಐಡಿ ಅಧಿಕಾರಿಗಳು ಎಲ್ಲ ದಾಖಲೆಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಹೆಚ್ಚಿನ ವಿಚಾರಣೆಗೆ ಅರ್ಜಿದಾರರ ಅಗತ್ಯವಿಲ್ಲವೆಂದು ಹೇಳಿದ್ದಾರೆ. ಆದ್ದರಿಂದ, ಜಾಮೀನು ಮಂಜೂರು ಮಾಡಲಾಗುತ್ತಿದೆ ಎಂದು ಹೈಕೋರ್ಟ್ ಆದೇಶದಲ್ಲಿ ಹೇಳಿದೆ.
ಜತೆಗೆ, ಈಗಾಗಲೇ ಇದೇ ಪ್ರಕರಣದ 2, 6, 8ನೇ ಆರೋಪಿಗಳಿಗೆ ನಿರೀಕ್ಷಣಾ ಜಾಮೀನು ನೀಡಲಾಗಿದ್ದು, 3, 4, 5ನೇ ಆರೋಪಿಗಳಿಗೆ ಜಾಮೀನು ದೊರೆತಿದೆ. ಆದ್ದರಿಂದ, ಕಠಿಣ ಷರತ್ತುಗಳನ್ನು ವಿಧಿಸಿ ಅರ್ಜಿದಾರರಿಗೆ ಜಾಮೀನು ನೀಡಲಾಗುತ್ತಿದೆ ಎಂದು ನ್ಯಾಯಾಲಯ ಆದೇಶಿಸಿದೆ.
ಅರ್ಜಿದಾರರು 2 ಲಕ್ಷ ರೂ. ಮೌಲ್ಯದ ವೈಯಕ್ತಿಕ ಬಾಂಡ್ ಹಾಗೂ ಅಷ್ಟೇ ಮೊತ್ತದ ಶ್ಯೂರಿಟಿ ಒದಗಿಸಬೇಕು. ವಿಚಾರಣಾ ನ್ಯಾಯಾಲಯಕ್ಕೆ ತಪ್ಪದೇ ವಿಚಾರಣೆಗೆ ಹಾಜರಾಗಬೇಕು, ಸಾಕ್ಷ್ಯ ನಾಶಪಡಿಸಲು ಯತ್ನಿಸಬಾರದು ಹಾಗೂ ಸಾಕ್ಷಿಗಳಿಗೆ ಬೆದರಿಕೆ ಹಾಕಬಾರದು, ತನಿಖಾಧಿಕಾರಿ ಸೂಚಿಸಿದಾಗ ಹಾಜರಾಗಿ, ತನಿಖೆಗೆ ಅಗತ್ಯ ದಾಖಲೆಗಳನ್ನು ಒದಗಿಸಬೇಕು, ಕೋರ್ಟ್ ಅನುಮತಿ ಇಲ್ಲದೆ ವ್ಯಾಪ್ತಿ ಬಿಟ್ಟು ತೆರಳಬಾರದು ಎಂಬ ಷರತ್ತುಗಳನ್ನು ವಿಧಿಸಿರುವ ಹೈಕೋರ್ಟ್, ಈ ಯಾವುದೇ ಷರತ್ತುಗಳ ಉಲ್ಲಂಘನೆಯಾದರೆ ಜಾಮೀನು ಸಹಜವಾಗಿಯೇ ರದ್ದಾಗಲಿದೆ ಎಂದು ಎಚ್ಚರಿಕೆ ನೀಡಿದೆ.
ಪ್ರಕರಣವೇನು?
ಬೇಲೂರು ವಿಧಾನಸಭೆ ಕ್ಷೇತ್ರದಲ್ಲಿ 2018ರಿಂದ 2023ರ ಅವಧಿಯಲ್ಲಿ ಶಾಸಕರಾಗಿದ್ದಾಗ ಬಗರ್‌ಹುಕುಂ ಸಾಗುವಳಿ ಸಕ್ರಮ ಸಮಿತಿ ಅಧ್ಯಕ್ಷರಾಗಿದ್ದ ಲಿಂಗೇಶ್ 2,750 ಎಕರೆ ಜಮೀನನ್ನು 1,430 ಮಂದಿಗೆ ಅಕ್ರಮವಾಗಿ ಮಂಜೂರು ಮಾಡಿದ್ದಾರೆಂದು ಆರೋಪಿಸಿ ಕೋಲಾರದ ಸಾಮಾಜಿಕ ಕಾರ್ಯಕರ್ತ ಕೆ.ಸಿ. ರಾಜಣ್ಣ ಖಾಸಗಿ ದೂರು ಸಲ್ಲಿಸಿದ್ದರು.
ದೂರನ್ನು ಪರಿಗಣಿಸಿದ್ದ ವಿಚಾರಣಾ ನ್ಯಾಯಾಲಯ ಆರೋಪಿಗಳ ವಿರುದ್ಧ ಎಫ್‌ಐಆರ್ ದಾಖಲಿಸಲು ಆದೇಶಿಸಿತ್ತು. ಅದರನ್ವಯ ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್‌ಗಳಾದ 468, 464, 465, 471, 409, 420, 120ಬಿ ಅಡಿ ಪ್ರಕರಣ ದಾಖಲಿಸಲಾಗಿತ್ತು. ಮೊದಲ ಆರೋಪಿ ಮಾಜಿ ಶಾಸಕ ಲಿಂಗೇಶ್ ಅವರು ಉಳಿದ ಆರೋಪಿಗಳು ಹಾಗೂ ಅಧಿಕಾರಿಗಳ ಜತೆ ಶಾಮೀಲಾಗಿ ತಮ್ಮ ಅಧಿಕಾರ ಮತ್ತು ಹುದ್ದೆ ದುರ್ಬಳಕೆ ಮಾಡಿಕೊಂಡಿದ್ದಾರೆಂಬ ಆರೋಪವಿದೆ. ಅಲ್ಲದೆ, ಅಧಿಕಾರಿಗಳು ನಕಲಿ ದಾಖಲೆ ಸೃಷ್ಟಿಸಲು ಸಹಕಾರ ನೀಡಿದ್ದು, ಸರ್ಕಾರಕ್ಕೆ ವಂಚಿಸುವ ಉದ್ದೇಶದಿಂದ ಒಳಸಂಚು ನಡೆಸಿದ್ದಾರೆಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿತ್ತು. ಆನಂತರ, ಸಿಐಡಿ ಪೊಲೀಸರು ಲಿಂಗೇಶ್ ಅವರನ್ನು ಬಂಧಿಸಿದ್ದರು.