ಸೇವಾನುಭವ ಪ್ರಮಾಣಪತ್ರದ ನೈಜತೆ ತನಿಖೆಗೆ ಜಿಲ್ಲಾ‌ ನ್ಯಾಯಾಧೀಶರ ನೇತೃತ್ವದ ಸಮಿತಿ ರಚನೆ; ಸಾರಿಗೆ ಇಲಾಖೆ ಆದೇಶಕ್ಕೆ ಹೈಕೋರ್ಟ್ ತಡೆ

Update: 2026-08-13 00:48 IST

ಬೆಂಗಳೂರು: ಸಾರಿಗೆ ಇಲಾಖೆಯ ಗ್ರೂಪ್ 'ಸಿ' ನೌಕರರು ಸಂಜೆ ಕಾಲೇಜುಗಳಲ್ಲಿ ಅರೆಕಾಲಿಕ ಡಿಪ್ಲೊಮಾ ಕೋರ್ಸ್‌ಗಳಿಗೆ ಪ್ರವೇಶ ಪಡೆಯಲು ಸಲ್ಲಿಸಿರುವ ಸೇವಾನುಭವ ಪ್ರಮಾಣಪತ್ರಗಳ ನೈಜತೆ ಬಗ್ಗೆ ತನಿಖೆ ನಡೆಸಲು ಜಿಲ್ಲಾ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಏಕಸದಸ್ಯ ಸಮಿತಿಯನ್ನು ರಚಿಸಿ ಸಾರಿಗೆ ಇಲಾಖೆ ಹೊರಡಿಸಿರುವ ಆದೇಶಕ್ಕೆ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ.

ಏಕಸದಸ್ಯ ತನಿಖಾ ಸಮಿತಿ ರಚಿಸಿ ಸಾರಿಗೆ ಇಲಾಖೆ 2026ರ ಜುಲೈ 10ರಂದು ಹೊರಡಿಸಿರುವ ಆದೇಶ ಪ್ರಶ್ನಿಸಿ ಸಾರಿಗೆ ಇಲಾಖೆಯಲ್ಲಿ ಸದ್ಯ ಸೂಪರಿಂಟೆಂಡೆಂಟ್ ಆಗಿ ಸೇವೆ ಸಲ್ಲಿಸುತ್ತಿರುವ ಎನ್. ಶಶಿಕುಮಾರ್ ಸೇರಿ 2023-2024ನೇ ಸಾಲಿನಲ್ಲಿ ಬೆಂಗಳೂರಿನ ಆಕ್ಸ್‌ಫರ್ಡ್ ಪಾಲಿಟೆಕ್ನಿಕ್ (ಸಂಜೆ) ಕಾಲೇಜಿನಲ್ಲಿ ಡಿಪ್ಲೊಮಾ ಆಟೋಮೊಬೈಲ್ ಕೋರ್ಸ್‌ಗೆ ಪ್ರವೇಶ ಪಡೆದಿದ್ದ 11 ಮಂದಿ ಸಿ ಗ್ರೂಪ್ ನೌಕರರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

ಅರ್ಜಿಯನ್ನು ಬುಧವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅಶೋಕ್ ಎಸ್. ಕಿಣಗಿ ಅವರಿದ್ದ ಏಕಸದಸ್ಯ ನ್ಯಾಯಪೀಠ, ದೂರು ಬಂದ ಹಿನ್ನೆಲೆಯಲ್ಲಿ ಇದೇ ವಿಚಾರವಾಗಿ ತಾಂತ್ರಿಕ ಶಿಕ್ಷಣ ಇಲಾಖೆಯ ನಿರ್ದೇಶಕರು 2025ರ ಜುಲೈ 18ರಂದು ತ್ರಿಸದಸ್ಯರ ಸಮಿತಿ ರಚಿಸಿದ್ದರು. ದಾಖಲೆಗಳನ್ನು ಪರಿಶೀಲಿಸಿದ್ದ ಸಮಿತಿಯು ಅರ್ಜಿದಾರರ ಪರವಾಗಿ ವರದಿ ಕೊಟ್ಟಿದೆ. ಆದರೆ, ಈಗ ಪುನಃ ನಿವೃತ್ತ ಜಿಲ್ಲಾ ನ್ಯಾಯಾಧೀಶರ ನೇತೃತ್ವದಲ್ಲಿ ಏಕಸದಸ್ಯ ತನಿಖಾ ಸಮಿತಿಯನ್ನು ಸಾರಿಗೆ ಆಯುಕ್ತರು ರಚಿಸಿದ್ದಾರೆ. ಆದ್ದರಿಂದ, ಒಂದೇ ವಿಷಯಕ್ಕೆ ಎರಡು ತನಿಖಾ ಸಮಿತಿಗಳನ್ನು ರಚಿಸಲಾಗಿರುವುದರಿಂದ ಪ್ರಕರಣವನ್ನು ವಿಚಾರಣೆಗೊಳಪಡಿಸಿವ ಅವಶ್ಯಕತೆಯಿದ್ದು, ಅರ್ಜಿಯ ಮುಂದಿನ ವಿಚಾರಣೆವರೆಗೆ ಸಾರಿಗೆ ಇಲಾಖೆಯ ಆದೇಶಕ್ಕೆ ತಡೆ ನೀಡಲಾಗುವುದು ಎಂದು ಆದೇಶಿಸಿತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News