Photo Credit : PTI 

ಬೆಂಗಳೂರು : ನೇಪಾಳ ಮತ್ತು ಚೀನಾದ ಟಿಬೆಟ್ ಸ್ವಾಯತ್ತ ಪ್ರದೇಶದ ಗಡಿ ಭಾಗಗಳಲ್ಲಿ ಉಂಟಾಗಿರುವ ದಿಢೀರ್ ಪ್ರವಾಹ ಹಾಗೂ ಭೂಕುಸಿತದಿಂದಾಗಿ ಕನ್ನಡಿಗರು ಸಿಲುಕಿ ಸಂಕಷ್ಟದಲ್ಲಿರುವವರ ರಕ್ಷಣೆ ಮತ್ತು ಸ್ಥಳಾಂತರಕ್ಕೆ ಕರ್ನಾಟಕ ಸರಕಾರ ಸಮರೋಪಾದಿ ಕ್ರಮಗಳನ್ನು ಕೈಗೊಂಡಿದೆ.

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಉಪಮುಖ್ಯಮಂತ್ರಿಯೂ ಆಗಿರುವ ಕಂದಾಯ ಸಚಿವ ಡಾ.ಜಿ. ಪರಮೇಶ್ವರ್ ಅವರು ಈ ಪರಿಸ್ಥಿತಿಯನ್ನು ನೇರವಾಗಿ ಮೇಲ್ವಿಚಾರಣೆ ಮಾಡುತ್ತಿದ್ದಾರೆ. ಬಾಧಿತ ಪ್ರದೇಶಗಳಲ್ಲಿರುವ ಕನ್ನಡಿಗರ ಕ್ಷೇಮಾಭಿವೃದ್ಧಿಗಾಗಿ ರಾಜ್ಯ ಸರಕಾರವು ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹಾಗೂ ಹೊಸದಿಲ್ಲಿಯ ಕರ್ನಾಟಕ ಭವನದ ಸ್ಥಾನಿಕ ಆಯುಕ್ತರೊಂದಿಗೆ ನಿರಂತರ ಸಂಪರ್ಕದಲ್ಲಿದೆ.

ಮಾಹಿತಿ ಸಂಗ್ರಹಕ್ಕೆ ಗೂಗಲ್ ಫಾರ್ಮ್: ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಸಿಲುಕಿರುವ ವ್ಯಕ್ತಿಗಳು, ಅವರ ಪ್ರಸ್ತುತ ಸ್ಥಳ, ಅಗತ್ಯವಿರುವ ನೆರವು ಮತ್ತು ಟೂರ್ ಆಪರೇಟರ್‍ಗಳ ವಿವರಗಳನ್ನು ಸಂಗ್ರಹಿಸಲು ರಾಜ್ಯ ಸರಕಾರವು ವಿಶೇಷ ಗೂಗಲ್ ಫಾರ್ಮ್ ಲಿಂಕ್ ಹಂಚಿಕೊಂಡಿದೆ. ಸಿಲುಕಿರುವ ವ್ಯಕ್ತಿಗಳು ಅಥವಾ ಅವರ ಸಂಬಂಧಿಕರು ತಕ್ಷಣವೇ ಈ ಫಾರ್ಮ್ ಭರ್ತಿ ಮಾಡಲು ಕೋರಲಾಗಿದೆ.

ತುರ್ತು ಕಾರ್ಯಾಚರಣೆ ಕೇಂದ್ರ: ಪರಿಸ್ಥಿತಿಯ ಮೇಲ್ವಿಚಾರಣೆಗೆ ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರ 24 ಗಂಟೆಯೂ ಕಾರ್ಯಾಚರಿಸುತ್ತಿದ್ದು, ವಿದೇಶಾಂಗ ಸಚಿವಾಲಯದ ಕ್ಷಿಪ್ರ ಪ್ರತಿಕ್ರಿಯೆ ಕೋಶ (Rapid Response Cell ) ಮತ್ತು ಗೃಹ ಸಚಿವಾಲಯದ ಸಮಗ್ರ ನಿಯಂತ್ರಣ ಕೊಠಡಿಯೊಂದಿಗೆ ನಿರಂತರ ಸಮನ್ವಯ ಸಾಧಿಸುತ್ತಿದೆ.

ಸಮನ್ವಯ: ಕಠ್ಮಂಡು ಮತ್ತು ಬೀಜಿಂಗ್‍ನಲ್ಲಿರುವ ಭಾರತೀಯ ರಾಯಭಾರ ಕಚೇರಿಗಳೊಂದಿಗೆ ನವದೆಹಲಿಯ ಕರ್ನಾಟಕ ಭವನವು ಸಂಪರ್ಕದಲ್ಲಿದ್ದು, ಕನ್ನಡಿಗರನ್ನು ಸುರಕ್ಷಿತವಾಗಿ ರಕ್ಷಿಸಲು ಪ್ರತ್ಯೇಕ ತಂಡಗಳನ್ನು ರಚಿಸಲಾಗಿದೆ.

ಪ್ರವಾಸಿಗರಿಗೆ ಸೂಚನೆಗಳು: ಬಾಧಿತ ಪ್ರದೇಶಗಳಲ್ಲಿರುವ ಕನ್ನಡಿಗರು ಸುರಕ್ಷಿತ ಸ್ಥಳಗಳಲ್ಲೇ ಉಳಿಯಬೇಕು. ಸ್ಥಳೀಯ ಆಡಳಿತ ಹಾಗೂ ಭಾರತೀಯ ರಾಯಭಾರ ಕಚೇರಿ ನೀಡುವ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಅಧಿಕೃತ ಸೂಚನೆ ಲಭ್ಯವಾಗುವವರೆಗೆ ಅಪಾಯಕಾರಿ ಮಾರ್ಗಗಳಲ್ಲಿ ಪ್ರಯಾಣಿಸಬಾರದು ಎಂದು ಸರಕಾರ ಎಚ್ಚರಿಸಿದೆ.

ಸಹಾಯಕ್ಕೆ ಸಂಪರ್ಕಿಸಿ: ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರ (SEOC)ಸಹಾಯವಾಣಿ: 1070/ 080-2225 3707. ಗೂಗಲ್ ಫಾರ್ಮ್ ಲಿಂಕ್: https://docs.google.com/forms/d/1gnw8B8vaYknr0Y2Lkn_fpWubPnKI6a8C4Em7co1Shbk/edit  ಸಂಪಕಿಸಲು ಕೋರಲಾಗಿದೆ.

 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor