ಭೋವಿ ಸಮುದಾಯದವರ ಜಾತಿ ಪ್ರಮಾಣ ಪತ್ರದಲ್ಲಿ ಭೋವಿ-ವಡ್ಡರ್ ಎಂದು ನಮೂದಿಸಿ : ಶಿವರಾಜ್ ತಂಗಡಗಿ
ಬೆಂಗಳೂರು : ನಕಲಿ ಜಾತಿ ಪ್ರಮಾಣ ಪತ್ರ ಪಡೆಯುವ ಮೂಲಕ ಶೈಕ್ಷಣಿಕ ಹಾಗೂ ಉದ್ಯೋಗದ ಮೀಸಲಾತಿ ಸೌಲಭ್ಯ ದುರುಪಯೋಗ ತಡೆಗಟ್ಟುವ ನಿಟ್ಟಿನಲ್ಲಿ, ಭೋವಿ ಸಮುದಾಯದವರಿಗೆ ‘ಭೋವಿ-ವಡ್ಡರ್’ ಎಂದು ನಮೂದಿಸಿ ಜಾತಿ ಪ್ರಮಾಣ ಪತ್ರ ನೀಡುವಂತೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಶಿವರಾಜ್ ತಂಗಡಗಿ ತಿಳಿಸಿದ್ದಾರೆ.
ಶುಕ್ರವಾರ ಭೋವಿ ಸಮುದಾಯದ ವಿವಿಧ ಸಮಸ್ಯೆಗಳ ಕುರಿತು ಸಮಾಜ ಕಲ್ಯಾಣ ಇಲಾಖೆ ಸಚಿವ ಕೆ.ಎಚ್.ಮುನಿಯಪ್ಪ ಅವರ ನೇತೃತ್ವದಲ್ಲಿ ನಗರದಲ್ಲಿ ನಡೆದ ಸಭೆಯಲ್ಲಿ ಅವರು ಮಾತನಾಡಿದರು.
ಭೋವಿ-ವಡ್ಡರ್ ಸಮುದಾಯವು ಸಾಂಪ್ರದಾಯಿಕವಾಗಿ ಕಲ್ಲು ಒಡೆಯುವುದು, ಮಣ್ಣು ತೆಗೆಯುವುದು, ಕೆರೆ-ಬಾವಿ ತೋಡುವುದು ಹಾಗೂ ಕಟ್ಟಡ ನಿರ್ಮಾಣ ಸೇರಿದಂತೆ ವಿವಿಧ ಶ್ರಮ ಆಧಾರಿತ ಕೆಲಸಗಳಲ್ಲಿ ತೊಡಗಿಸಿಕೊಂಡಿರುವ ಸಮುದಾಯವಾಗಿದೆ. ಮತ್ತೊಂದೆಡೆ, ಬೋಯಿ(ಬೆಸ್ತ) ಸಮುದಾಯವು ಸಾಂಪ್ರದಾಯಿಕವಾಗಿ ಮೀನುಗಾರಿಕೆ, ದೋಣಿ ನಡೆಸುವುದು ಹಾಗೂ ಪಲ್ಲಕ್ಕಿ ಹೊರುವ ಕಾಯಕದಲ್ಲಿ ತೊಡಗಿಸಿಕೊಂಡು ಬಂದಿದ್ದು, ಹಿಂದುಳಿದ ವರ್ಗಗಳ ವ್ಯಾಪ್ತಿಗೆ ಒಳಪಡುತ್ತದೆ. ಅವರೂ ಶ್ರಮಿಕ ಹಾಗೂ ಹಿಂದುಳಿದ ವರ್ಗದವರಾಗಿದ್ದರಿಂದ ನ್ಯಾಯಯುತವಾಗಿ ಬೆಸ್ತ ಸಮುದಾಯಕ್ಕೆ ಸಿಗಬೇಕಾದ ಸೌಲಭ್ಯ ಸಿಗಬೇಕು. ಆದರೆ ಕೆಲವೇ ಕೆಲವು ಮಂದಿ ನಕಲಿ ಪ್ರಮಾಣಪತ್ರದ ಮೂಲಕ ಬೇರೆ ವರ್ಗದ ಮೀಸಲಾತಿ ಸೌಲಭ್ಯ ಪಡೆಯಲು ಯತ್ನಿಸುತ್ತಿದ್ದಾರೆ ಎಂದರು.
ಭೋವಿ ಮತ್ತು ಬೆಸ್ತ ಎರಡೂ ಸಮುದಾಯಗಳ ಸಾಂಪ್ರದಾಯಿಕ ಕಸಬು ಹಾಗೂ ಸಾಮಾಜಿಕ ಗುರುತಿನಲ್ಲಿರುವ ವ್ಯತ್ಯಾಸವನ್ನು ಪರಿಗಣಿಸಿ, ಭೋವಿ ಸಮುದಾಯಕ್ಕೆ ‘ಭೋವಿ-ವಡ್ಡರ್’ ಎಂದು ಸ್ಪಷ್ಟವಾಗಿ ನಮೂದಿಸಿರುವ ಜಾತಿ ಪ್ರಮಾಣ ಪತ್ರ ನೀಡಬೇಕು. ಇದರಿಂದ ನಕಲಿ ಜಾತಿ ಪ್ರಮಾಣ ಪತ್ರ ಪಡೆಯುವ ಪ್ರಕರಣಗಳಿಗೆ ಕಡಿವಾಣ ಹಾಕಲು ಸಾಧ್ಯವಾಗಲಿದೆ ಎಂದರು.
ಸಮಾಜ ಕಲ್ಯಾಣ ಇಲಾಖೆಯಿಂದ ವಿವಿಧ ಸಮುದಾಯಗಳಿಗೆ ಅಂಬೇಡ್ಕರ್ ಭವನ, ಬಾಬು ಜಗಜೀವನ್ ರಾಮ್ ಭವನ ಸೇರಿದಂತೆ ಸಮುದಾಯ ಭವನಗಳನ್ನು ನಿರ್ಮಿಸಿಕೊಡುತ್ತಿರುವ ಮಾದರಿಯಲ್ಲಿ, ಭೋವಿ ಸಮುದಾಯಕ್ಕೂ ‘ಸಿದ್ದರಾಮೇಶ್ವರ ಭೋವಿ ಭವನ’ ನಿರ್ಮಿಸಿಕೊಡಬೇಕು ಎಂದರು.
ಸಭೆಯಲ್ಲಿ ಸಮಾಜ ಕಲ್ಯಾಣ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿಗಳು, ಭೋವಿ ಸಮುದಾಯದ ಮುಖಂಡರು ಉಪಸ್ಥಿತರಿದ್ದರು.