ಬ್ಯಾಕ್‍ಲಾಗ್ ಹುದ್ದೆಗಳ ಭರ್ತಿಗೆ ಸರಕಾರದ ಹಂತದಲ್ಲಿ ಚರ್ಚೆ : ಡಾ.ಜಿ.ಪರಮೇಶ್ವರ್
‘ಎಸ್ಸಿ, ಎಸ್‍ಟಿ ನೌಕರರ ಸಮನ್ವಯ ಸಮಿತಿಗೆ ಜಾಗ ಗುರುತಿಸಿದರೆ ಮಂಜೂರು’
ಬೆಂಗಳೂರು : ರಾಜ್ಯದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ 72 ಸಾವಿರ ಸರಕಾರಿ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಲಾಗುತ್ತಿದ್ದು, ಬ್ಯಾಕ್‍ಲಾಗ್ ಹುದ್ದೆಗಳನ್ನು ಭರ್ತಿ ಮಾಡಲು ಸರಕಾರದ ಹಂತದಲ್ಲಿ ಚರ್ಚೆ ನಡೆಯುತ್ತಿದೆ ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ಶುಕ್ರವಾರ ನಗರದ ಅರಮನೆ ಮೈದಾನದ ಶೃಂಗಾರ್ ಪ್ಯಾಲೇಸ್‍ನಲ್ಲಿ ಕರ್ನಾಟಕ ರಾಜ್ಯ ಸರಕಾರಿ ಎಸ್‍ಸಿ, ಎಸ್‍ಟಿ ನೌಕರರ ಸಮನ್ವಯ ಸಮಿತಿಯು ಆಯೋಜಿಸಿದ್ದ 6ನೇ ‘ರಾಜ್ಯಮಟ್ಟದ ಐಕ್ಯತಾ ಸಮಾವೇಶ’ ಕಾರ್ಯಕ್ರಮವನ್ನು ಉದ್ಘಾಟಿಸಿದ ಬಳಿಕ ಅವರು ಮಾತನಾಡಿದರು.
ಹಿಂದೆ ಎಸ್.ಎಂ.ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದ ವೇಳೆ ಹೋರಾಟ ಮಾಡಿ ಬ್ಯಾಕ್‍ಲಾಗ್ ಹುದ್ದೆಗಳನ್ನು ಭರ್ತಿ ಮಾಡಲಾಗಿತ್ತು. ಈಗ ಡಿ.ಕೆ.ಶಿವಕುಮಾರ್ ಅವರೊಂದಿಗೆ ಮಾತನಾಡಿ ಬ್ಯಾಕ್‍ಲಾಗ್ ಹುದ್ದೆಗಳನ್ನು ತುಂಬಲಾಗುವುದು ಎಂದು ಜಿ.ಪರಮೇಶ್ವರ್ ಹೇಳಿದರು.
ರಾಜ್ಯ ಸರಕಾರಿ ಎಸ್‍ಸಿ, ಎಸ್‍ಟಿ ನೌಕರರ ಸಮನ್ವಯ ಸಮಿತಿಗೆ ಜಾಗ ನೀಡುವಂತೆ ಮನವಿ ಮಾಡಲಾಗಿದೆ. ಜಾಗ ಗುರುತಿಸಿದರೆ ಸಚಿವ ಕೆ.ಎಚ್.ಮುನಿಯಪ್ಪ ಅವರು ಮತ್ತು ನಾನು ಮಂಜೂರು ಮಾಡಿಸುತ್ತೇವೆ. ಒಪಿಎಸ್ ಜಾರಿಗೊಳಿಸಲು ಸಿಎಂ ಡಿ.ಕೆ.ಶಿವಕುಮಾರ್ ಅವರು ತಾತ್ವಿಕವಾಗಿ ಒಪ್ಪಿದ್ದಾರೆ. ಮುಂದಿನ ದಿನಗಳಲ್ಲಿ ಅನುಷ್ಠಾನಗೊಳಿಸಲಾಗುವುದು ಎಂದು ಜಿ.ಪರಮೇಶ್ವರ್ ತಿಳಿಸಿದರು.
ಈ ಸಮಾವೇಶವನ್ನು ನೋಡಿದರೆ ಸಮಾಜದ ಬದಲಾವಣೆ ಬಗ್ಗೆ ನಿಮ್ಮ ಧ್ವನಿ ಎಲ್ಲಿದೆ? ಕಳಕಳಿ ಎಲ್ಲಿದೆ ಎಂಬ ಪ್ರಶ್ನೆ ಮೂಡುತ್ತದೆ. ಸರಕಾರಿ ಎಸ್‍ಸಿ, ಎಸ್‍ಟಿ ನೌಕರರ ಸಂಘಟನೆ ಮತ್ತಷ್ಟು ಗಟ್ಟಿಯಾಗಬೇಕು. ಸರಕಾರಗಳು ತೀರ್ಮಾನಗಳನ್ನು ತೆಗೆದುಕೊಳ್ಳುವವರಿಗೆ ತಲುಪಬೇಕು. ನಿಮ್ಮ ಶಕ್ತಿ ಪ್ರದರ್ಶನ ಸಾಲುವುದಿಲ್ಲ. ಎಲ್ಲರೂ ಒಟ್ಟಾಗಿ ಸಮಾವೇಶ ಮಾಡಿದರೆ ನಿಜವಾದ ಅರ್ಥ ಬರುತ್ತದೆ ಎಂದು ಜಿ. ಪರಮೇಶ್ವರ್ ತಿಳಿಸಿದರು.
ಈ ಸಮಾವೇಶಕ್ಕೆ ಸಮುದಾಯದ ಎಲ್ಲ ಸಚಿವರು, ಶಾಸಕರು ಬಂದಿದ್ದರೆ, ಸಮಾವೇಶಕ್ಕೆ ಬಲ ಬರುತ್ತಿತ್ತು. 1.20 ಲಕ್ಷ ಎಸ್‍ಸಿ, ಎಸ್‍ಟಿ ನೌಕರರಿದ್ದಾರೆ. ಸಮಾವೇಶದಲ್ಲಿ ಎಲ್ಲರೂ ಪಾಲ್ಗೊಳ್ಳಬೇಕು. ನಮಗೆ ಕಷ್ಟ ಇದೆ. ನಾವು ಒಗ್ಗಟ್ಟಾಗಬೇಕು ಎಂಬ ಮನೋಭಾವ ಇಲ್ಲದೆ ಹೋದರೆ ಹೇಗೆ ಎಂದು ಜಿ.ಪರಮೇಶ್ವರ್ ಪ್ರಶ್ನಿಸಿದರು.
ಯಾರು ಬೇಕಾದರು ಒಪ್ಪಲಿ, ಬಿಡಲಿ, ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದು ಕಾಂಗ್ರೆಸ್ ಪಕ್ಷ. ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರು ಭಾಗವಹಿಸಿದ ವೇದಿಕೆಯನ್ನು ಶುದ್ಧೀಕರಣ ಮಾಡಿದರು. ಮಾಜಿ ಪ್ರಧಾನಿ ಬಾಬು ಜಗಜೀವನ್ ರಾಮ್ ಅವರು ಬನಾರಸ್ ವಿಶ್ವವಿದ್ಯಾಲಯದಲ್ಲಿ ಮದನ್ ಮೋಹನ್ ಮಾಳವೀಯ ಅವರ ಪ್ರತಿಮೆ ಉದ್ಘಾಟಿಸಿದ ಬಳಿಕ ಜಾಗವನ್ನು ಶುದ್ಧೀಕರಣ ಮಾಡಿದ್ದರು ಎಂದು ಪರಮೇಶ್ವರ್ ಬೇಸರ ವ್ಯಕ್ತಪಡಿಸಿದರು.
ಹಳ್ಳಿಗಾಡಿನಲ್ಲಿ ಕೂಲಿ ಮಾಡುವ ಜನ ಗುಡಿಸಲುಗಳಲ್ಲಿ ಜೀವನ ಸಾಗಿಸುತ್ತಿದ್ದಾರೆ. ಈ ವ್ಯವಸ್ಥೆಯನ್ನು ಬದಲು ಮಾಡಲು ಇನ್ನೂ ಸಾಧ್ಯವಾಗಿಲ್ಲ. ಶಾಶ್ವತ ವಿಳಾಸ ಕಲ್ಪಿಸಲು ಆಗಿಲ್ಲ. ಪ್ರತಿಯೊಬ್ಬರು, ‘ನಾವೆಲ್ಲ ನಾಲ್ಕು ಜನರನ್ನು ಪರಿವರ್ತಿಸಿ, ವಿದ್ಯಾವಂತರನ್ನಾಗಿ ಮಾಡುತ್ತೇನೆ' ಎಂಬ ಸಂಕಲ್ಪ ಮಾಡಬೇಕು. ಆಗ ಜಾತಿ ವ್ಯವಸ್ಥೆಯನ್ನು ಹೋಗಲಾಡಿಸಲು ಸಾಧ್ಯ ಎಂದು ಜಿ.ಪರಮೇಶ್ವರ್ ಹೇಳಿದರು.
ಕೆಲವು ಬೇಡಿಕೆಗಳನ್ನು ಈಡೇರಿಸಲು ಮನವಿ ಮಾಡಿದ್ದೀರಿ. ನಿಮ್ಮ ಸಮಿತಿಗೆ ಸರಕಾರದಿಂದ ಮಾನ್ಯತೆ ಸಿಗುವಂತೆ ಶಕ್ತಿ ಪ್ರದರ್ಶಿಸಬೇಕು. ನಿಮ್ಮ ಬೇಡಿಕೆಗಳನ್ನು ನಾವು ಈಡೇರಿಸುತ್ತೇವೆ. ಸಮಾಜಕ್ಕೆ ನೀವು ಏನು ಮಾಡಬೇಕು ಎಂಬುದರ ಬಗ್ಗೆ ಯೋಚಿಸಿ. ಬಡವರ ಮಕ್ಕಳನ್ನು ದತ್ತು ತೆಗೆದುಕೊಂಡು ಅವರ ವಿದ್ಯಾಭ್ಯಾಸಕ್ಕೆ ಅನುಕೂಲ ಮಾಡಿಕೊಡಬೇಕು. ಇದು ಮಾಡಿದರೆ ನಿಮ್ಮ ಜೀವನ ಸಾರ್ಥಕವಾಗುತ್ತದೆ ಎಂದು ಜಿ.ಪರಮೇಶ್ವರ್ ಕರೆಕೊಟ್ಟರು.
ಸಮಾಜ ಕಲ್ಯಾಣ ಸಚಿವ ಕೆ.ಎಚ್.ಮುನಿಯಪ್ಪ ಮಾತನಾಡಿ, ಎಚ್.ಆಂಜನೇಯ ಅವರು ಹಿಂದೆ ಸಮಾಜ ಕಲ್ಯಾಣ ಸಚಿವರಾಗಿದ್ದಾಗ ಎಸ್‍ಸಿ, ಎಸ್‍ಟಿ ಸಮುದಾಯಕ್ಕಾಗಿ ಪ್ರತಿ ಹೋಬಳಿಗೊಂದು ವಸತಿ ಶಾಲೆ ನಿರ್ಮಾಣ ಮಾಡಿದ ಫಲವಾಗಿ ಇಂದು ಎಲ್ಲ ಮಕ್ಕಳು ಉತ್ತಮ ಶಿಕ್ಷಣವನ್ನು ಪಡೆಯಲು ಸಹಕಾರಿಯಾಗಿದೆ. ನಾನು ಕೋಲಾರದಲ್ಲಿ ಸಂಸದನಾಗಿದ್ದಾಗ ಹೋಬಳಿಗೊಂದು ವಸತಿ ಶಾಲೆಯನ್ನು ನಿರ್ಮಿಸಿದೆ, ಅದು ಇಂದು ಮಕ್ಕಳ ಗುಣಮಟ್ಟ ಶಿಕ್ಷಣವನ್ನು ಪಡೆಯಲು ಸಹಕಾರಿಯಾಗಿದೆ ಎಂದರು.
ಸಮಾವೇಶದಲ್ಲಿ ಕೊಳ್ಳೇಗಾಲದ ಚೇತವನ ವಿಹಾರದ ಬೌದ್ಧಬಿಕ್ಕು ಪೂಜ್ಯ ಮನೋರಕ್ಕಿತ ಬಂತೇಜಿ, ಶಾಸಕರಾದ ಎ.ಆರ್.ಕೃಷ್ಣಮೂರ್ತಿ, ಬಿ.ದೇವೇಂದ್ರಪ್ಪ, ಮಾಜಿ ಸಚಿವ ಎಚ್.ಆಂಜನೇಯ, ಡಾ.ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧ್ಯಕ್ಷ ಸಿ.ನರೇಂದ್ರ, ನೌಕರರ ಸಮನ್ವಯ ಸಮಿತಿಯ ಅಧ್ಯಕ್ಷ ಡಿ.ಶಿವಶಂಕರ್, ಪದಾಧಿಕಾರಿಗಳಾದ ಡಾ.ವಿಜಯಕುಮಾರ್, ಆರ್.ಮೋಹನ್, ಸತ್ಯನಾರಾಯಣ, ಕೆಂಪಸಿದ್ದಯ್ಯ, ಎಂ.ಬಿ.ಶಿವಕುಮಾರ್, ಅವಿನಾಶ ಯಳಕಾರ, ನಾರಾಯಣ್, ಪ್ರಸನ್ನಕುಮಾರ್ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
‘ರಾಜ್ಯದ ವಿವಿಧ ಇಲಾಖೆಗಳಲ್ಲಿ ಬಾಕಿ ಉಳಿದ 24 ಸಾವಿರ ಬ್ಯಾಕ್‍ಲಾಗ್ ಹುದ್ದೆಗಳ ಭರ್ತಿಗೆ ಕ್ರಮ ವಹಿಸಲಾಗುವುದು. ಜೊತೆಗೆ, ಎಸ್ಸಿ ಎಸ್ಟಿ ಸರಕಾರಿ ನೌಕರರ ಎಲ್ಲ ಬೇಡಿಕೆಗಳ ಈಡೇರಿಕೆಗಾಗಿ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಬಗೆಹರಿಸಲು ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತೇನೆ’
-ಕೆ.ಎಚ್.ಮುನಿಯಪ್ಪ, ಸಮಾಜ ಕಲ್ಯಾಣ ಸಚಿವ.