ಬೆಂಗಳೂರು : ‘ರಾಜ್ಯದ ಜಲಸಂಪನ್ಮೂಲ ಯೋಜನೆಗಳನ್ನು ನಿಗದಿತ ಕಾಲಮಿತಿಯೊಳಗೆ ಪೂರ್ಣಗೊಳಿಸುವ ನಿಟ್ಟಿನಲ್ಲಿ ಕ್ರಮ ವಹಿಸಬೇಕು. ಅಲ್ಲದೆ, ಕಾನೂನು ತೊಡಕುಗಳನ್ನು ನಿವಾರಿಸುವುದು ಹಾಗೂ ಅಂತರ್ಜಲ ಮಟ್ಟ ಹೆಚ್ಚಿಸಲು ವೈಜ್ಞಾನಿಕ ಕ್ರಮಗಳನ್ನು ಕೈಗೊಳ್ಳಬೇಕು’ ಎಂದು ಜಲಸಂಪನ್ಮೂಲ ಸಚಿವ ಎನ್.ಚಲುವರಾಯಸ್ವಾಮಿ, ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಶುಕ್ರವಾರ ವಿಧಾನಸೌಧದಲ್ಲಿ ಜಲಸಂಪನ್ಮೂಲ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು, ಕೃಷ್ಣಾ, ಕಾವೇರಿ, ವಿಶ್ವೇಶ್ವರಯ್ಯ ಹಾಗೂ ಕರ್ನಾಟಕ ನೀರಾವರಿ ನಿಗಮಗಳ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಯೋಜನೆಗಳ ಭೌತಿಕ ಮತ್ತು ಆರ್ಥಿಕ ಪ್ರಗತಿಯನ್ನು ಪರಾಮರ್ಶಿಸಿದರು.

ಕೆರೆಗಳ ಭರ್ತಿಗೆ ಆದ್ಯತೆ: ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ನೀರನ್ನು ಪಂಪ್ ಮಾಡಿ ಕೆರೆ-ಕಟ್ಟೆಗಳನ್ನು ತುಂಬಿಸಬೇಕು. ಅಂತರ್ಜಲ ಹೆಚ್ಚಳಕ್ಕೆ ಕೇವಲ ಸಾಂಪ್ರದಾಯಿಕ ವಿಧಾನವಲ್ಲದೆ, ವೈಜ್ಞಾನಿಕ ಕ್ರಮಗಳನ್ನು ಅಳವಡಿಸಿಕೊಳ್ಳಬೇಕು ಎಂದು ಅವರು ನಿರ್ದೇಶನ ನೀಡಿದರು.

ಕೃಷ್ಣಾ ಮೇಲ್ದಂಡೆ ಯೋಜನೆ ಹಂತ 1 ಮತ್ತು 2ರ ಭೂಸ್ವಾಧೀನ ಪ್ರಕ್ರಿಯೆಯಲ್ಲಿನ ದರ ನಿಗದಿ ಹಾಗೂ ನ್ಯಾಯಾಲಯದಲ್ಲಿರುವ ಪ್ರಕರಣಗಳನ್ನು ತ್ವರಿತವಾಗಿ ಬಗೆಹರಿಸಬೇಕು. 20ವರ್ಷಗಳ ಹಿಂದಿನ ಸುಮಾರು 1500 ಪ್ರಕರಣಗಳಿದ್ದು, ಇವುಗಳನ್ನು ‘ಮಧ್ಯಸ್ಥಿಕೆ' ಮೂಲಕ ಇತ್ಯರ್ಥಪಡಿಸಿ 9 ಉಪ-ಯೋಜನೆಗಳ ಭೂಸ್ವಾಧೀನವನ್ನು ಚುರುಕುಗೊಳಿಸಬೇಕು ಎಂದು ತಾಕೀತು ಮಾಡಿದರು.

ಪರಿಹಾರ ವಿತರಣೆ: ಯುಕೆಪಿ-3 ಯೋಜನೆಗೆ ಸಂಬಂಧಿಸಿದಂತೆ ಇತ್ತೀಚೆಗೆ ಸಂಪುಟ ಘೋಷಿಸಿರುವ ಪರಿಹಾರದ ಹಣ ಶೀಘ್ರದಲ್ಲೇ ಬಿಡುಗಡೆಯಾಗಲಿದ್ದು, ಸ್ವಾಧೀನ ಪ್ರಕ್ರಿಯೆಯ ಎಲ್ಲ ಕೆಲಸಗಳನ್ನು ಪೂರ್ಣಗೊಳಿಸಬೇಕು ಎಂದು ಅವರು ನಿರ್ದೇಶಿಸಿದರು.

ಮೇಕೆದಾಟು: 67 ಟಿಎಂಸಿ ಸಾಮಥ್ರ್ಯದ ಮೇಕೆದಾಟು ಯೋಜನೆಯ ಪರಿಷ್ಕೃತ ಡಿಪಿಆರ್ ಅನ್ನು ಆ.13ರಂದು ಕೇಂದ್ರಕ್ಕೆ ಕಳುಹಿಸಲಾಗಿದೆ. ಅಣೆಕಟ್ಟು ಸುತ್ತಲೂ ನೀರಾವರಿ ಪ್ರದೇಶವಿಲ್ಲ ಎಂಬುದನ್ನು ಸ್ಪಷ್ಟಪಡಿಸುವ ಮೂಲಕ ತಮಿಳುನಾಡಿನ ಎಲ್ಲ ಅನುಮಾನಗಳಿಗೂ ತಾರ್ಕಿಕ ಅಂತ್ಯ ಹಾಡಲಾಗಿದೆ. ಈ ಬಗ್ಗೆ ಪ್ರತ್ಯೇಕ ಸಭೆಗೆ ಅವರು ಅಧಿಕಾರಿಗಳಿಗೆ ಸೂಚಿಸಿದರು.

ಎತ್ತಿನಹೊಳೆ: ಎತ್ತಿನಹೊಳೆ ಯೋಜನೆ 256 ಕಿ.ಮೀ ಉದ್ದದ ಗುರುತ್ವಾಕರ್ಷಣಾ ಕಾಲುವೆ ಯೋಜನೆಯ ಇದಾಗಿದ್ದು, ಈಗಾಗಲೇ 40ಕಿ.ಮೀ ವರೆಗೂ ನೀರು ಹರಿದಿದೆ. ಮೊದಲ ಹಂತದಲ್ಲಿ 111 ಹೆಕ್ಟೇರ್ ಅರಣ್ಯ ಪ್ರದೇಶದ ಬಳಕೆಗೆ ಕೇಂದ್ರದ ಒಪ್ಪಿಗೆ ಸಿಕ್ಕಿದೆ. ಯೋಜನೆಯಲ್ಲಿರುವ ಸಮಸ್ಯೆಗಳನ್ನು ಬಗೆಹರಿಸಲು ಹಾಸನ ಜಿಲ್ಲಾಧಿಕಾರಿಗೆ ಸೂಚನೆ ನೀಡಿದರು.

ಭದ್ರಾ ಮೇಲ್ದಂಡೆ ಯೋಜನೆ: 2023-24ರ ಬಜೆಟ್‍ನಲ್ಲಿ ಕೇಂದ್ರವು ಈ ಯೋಜನೆಗೆ 5,300ಕೋಟಿ ರೂ.ನೆರವು ಘೋಷಿಸಿದ್ದರೂ, ಈವರೆಗೂ ಅನುದಾನ ಬಿಡುಗಡೆಯಾಗದ ಬಗ್ಗೆ ಸಭೆಯಲ್ಲಿ ಕಳವಳ ವ್ಯಕ್ತವಾಯಿತು.

ಸಿಎಂ ಜೊತೆ ಚರ್ಚೆ: ಇಲಾಖೆಯ ಆರ್ಥಿಕ ಸಮಸ್ಯೆಗಳು ಹಾಗೂ ಬಾಕಿ ಇರುವ ಬಿಲ್‍ಗಳ ಪಾವತಿ ಕುರಿತು ಈಗಾಗಲೇ ಸಿಎಂ ಜತೆ ಮಾತುಕತೆ ನಡೆಸಲಾಗಿದ್ದು, ಸಂಬಂಧಿಸಿದ ಅಧಿಕಾರಿಗಳೊಂದಿಗೆ ಪ್ರತ್ಯೇಕ ಸಭೆ ನಡೆಸಿ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಅವರು ಭರವಸೆ ನೀಡಿದರು.

 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor