ಜಿಬಿಎ ಚುನಾವಣೆ; ಮತದಾರರ ಪಟ್ಟಿ ಆಕ್ಷೇಪಿಸಿ ಹೈಕೋರ್ಟ್‌ಗೆ ಪಿಐಎಲ್
ಬೆಂಗಳೂರು : ಮುಂಬರುವ ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ಚುನಾವಣೆಗಾಗಿ ರಾಜ್ಯ ಚುನಾವಣಾ ಆಯೋಗ ಪ್ರಕಟಿಸಿರುವ ಮತದಾರರ ಪಟ್ಟಿಯಲ್ಲಿ ಸಾಕಷ್ಟು ಲೋಪಗಳಿವೆ ಎಂದು ಆಕ್ಷೇಪಿಸಿ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿದೆ.
ಬೆಂಗಳೂರು ನವನಿರ್ಮಾಣ ಪಾರ್ಟಿ ಸಲ್ಲಿಸಿರುವ ಅರ್ಜಿಯು ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಹಾಗೂ ನ್ಯಾಯಮೂರ್ತಿ ಕೆ.ಎಸ್. ಹೇಮಲೇಖಾ ಅವರಿದ್ದ ವಿಭಾಗೀಯ ನ್ಯಾಯಪೀಠದ ಮುಂದೆ ಶುಕ್ರವಾರ ವಿಚಾರಣೆಗೆ ನಿಗದಿಯಾಗಿತ್ತು.
ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ, ಜಿಬಿಎ ಚುನಾವಣೆಗೆ ರಾಜ್ಯ ಚುನಾವಣಾ ಆಯೋಗ ಪ್ರಕಟಿಸಿರುವ ಮತದಾರರ ಪಟ್ಟಿಯಲ್ಲಿ ಸಾವಿರಾರು ಲೋಪಗಳು ಕಂಡು ಬಂದಿವೆ. ಇದು ಲಕ್ಷಾಂತರ ಮತದಾರರನ್ನು ಸಮಸ್ಯೆಗಳಿಗೆ ದೂಡಲಿದೆ. ಅಷ್ಟಕ್ಕೂ ರಾಜ್ಯ ಚುನಾವಣಾ ಆಯೋಗ ಪ್ರತ್ಯೇಕವಾಗಿ ಮತದಾರರ ಪಟ್ಟಿ ಸಿದ್ದಪಡಿಸುವುದಿಲ್ಲ. ರಾಜ್ಯ ಮುಖ್ಯ ಚುನಾವಣಾಧಿಕಾರಿ ಕಚೇರಿ ಸಿದ್ದಪಡಿಸುವ ಮತದಾರರ ಪಟ್ಟಿಯ ಅಂಕಿ-ಅಂಶಗಳನ್ನೇ ಅವಲಂಬಿಸಲಿದೆ ಎಂದು ನ್ಯಾಯಪೀಠದ ಗಮನಕ್ಕೆ ತಂದರು.
ಈ ಕುರಿತು ಮಾಹಿತಿ ಪಡೆದು ನ್ಯಾಯಾಲಯಕ್ಕೆ ತಿಳಿಸಲು ರಾಜ್ಯ ಚುನಾವಣಾ ಆಯೋಗದ ಪರ ವಕೀಲರಿಗೆ ಸೂಚಿಸಿದ ನ್ಯಾಯಪೀಠ ವಿಚಾರಣೆಯನ್ನು ಶನಿವಾರಕ್ಕೆ (ಆಗಸ್ಟ್ 29) ಮುಂದೂಡಿತು.