ಸಿಆರ್‌ಸಿ ಆವರಣದ ಶಾಲೆ ಮೇಲ್ದರ್ಜೆಗೆ ಕ್ರಮ : ಆಗಾ ಸುಲ್ತಾನ್
ಬೆಂಗಳೂರು : ಕೇಂದ್ರ ಪರಿಹಾರ ಸಮಿತಿ(ಸಿಆರ್‌ಸಿ) ಆವರಣದಲ್ಲಿರುವ ಕಿರಿಯ ಪ್ರಾಥಮಿಕ ಶಾಲೆಯನ್ನು ಪ್ರೌಢಶಾಲೆಯನ್ನಾಗಿ ಮೇಲ್ದರ್ಜೆಗೇರಿಸುವ ಕುರಿತು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಶಾಲಾ ಶಿಕ್ಷಣ ಇಲಾಖೆ ಸಚಿವ ಮಧು ಬಂಗಾರಪ್ಪ ಅವರಿಗೆ ಮನವಿ ಮಾಡಿ, ಅಗತ್ಯ ಕ್ರಮ ವಹಿಸಲಾಗುವುದು ಎಂದು ಕೇಂದ್ರ ಪರಿಹಾರ ಸಮಿತಿಯ ಅಧ್ಯಕ್ಷ ಆಗಾ ಸುಲ್ತಾನ್ ತಿಳಿಸಿದ್ದಾರೆ.
ಶನಿವಾರ ನಗರದ ಕೇಂದ್ರ ಪರಿಹಾರ ಸಮಿತಿಯ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಹಾಗೂ ನವೀಕರಿಸಲಾದ ಶಾಲೆ-ನೂತನ ಸೌಲಭ್ಯಗಳ ಉದ್ಘಾಟನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕೇಂದ್ರ ಪರಿಹಾರ ಸಮಿತಿ ಆವರಣ ಹಾಗೂ ಸುತ್ತಮುತ್ತಲಿನ ಪ್ರದೇಶವನ್ನು ‘ಭಿಕ್ಷುಕರ ಕಾಲನಿ’ ಎಂದು ಯಾರೂ ಕರೆಯಬೇಡಿ. ಒಂದು ವೇಳೆ ಆ ರೀತಿ ಕರೆದರೆ ಅಗತ್ಯ ಕ್ರಮವಹಿಸಲಾಗುತ್ತದೆ. ನಿರಾಶ್ರಿತರ ಪರಿಹಾರ ಕೇಂದ್ರದಲ್ಲಿರುವವರು ನಮ್ಮ ಅತಿಥಿಗಳು. ಅವರಿಗೆ ಉತ್ತಮ ಸೌಲಭ್ಯಗಳನ್ನು ಕಲ್ಪಿಸಬೇಕು ಎಂದು ಅವರು ತಿಳಿಸಿದರು.
ನಿರಾಶ್ರಿತರ ಪರಿಹಾರ ಕೇಂದ್ರದಿಂದ ಯಾರು ಮನೆಗೆ ಹೋಗಲು ಬಯಸುತ್ತೀರೋ, ಅಂತವರು ಅರ್ಜಿ ಸಲ್ಲಿಸಿ, ಆಪ್ತ ಸಮಾಲೋಚನೆ ಮಾಡಿದ ಮೇಲೆ ಅಧಿಕಾರಿಗಳೇ ನಿಮ್ಮ ಮನೆಗೆ ಬಿಡುತ್ತಾರೆ ಎಂದು ಅವರು ತಿಳಿಸಿದರು.
ಮಕ್ಕಳಿಗೆ ನಡತೆ ಬಹಳ ಮುಖ್ಯ. ಆದ್ದರಿಂದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಸಾಂಸ್ಕೃ ತಿಕ ಕಾರ್ಯಕ್ರಮಗಳಲ್ಲಿ ತೊಡಗಿಸಬೇಕು. ಕೇವಲ ಓದುವುದು ಮಾತ್ರವಲ್ಲ ಮಕ್ಕಳು ಎಲ್ಲ ರೀತಿಯ ಕೌಶಲ್ಯಗಳನ್ನು ಕಲಿತು ಸರ್ವತೋಮುಖ ಅಭಿವೃದ್ಧಿ ಹೊಂದಬೇಕು ಎಂದು ಆಗಾ ಸುಲ್ತಾನ್ ಹೇಳಿದರು.
ಇದೇ ವೇಳೆ ಕೇಂದ್ರ ಪರಿಹಾರ ಸಮಿತಿ ಆವರಣದಲ್ಲಿರುವ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ನೂತನ ಶೌಚಾಲಯಗಳು, ಬಹುಪಯೋಗಿ ಸಭಾಂಗಣ, ವಿಶ್ರಾಂತಿ ಕೊಠಡಿಗಳನ್ನು ಉದ್ಘಾಟಿಸಲಾಯಿತು.
ಕಾರ್ಯಕ್ರಮದಲ್ಲಿ ಕೇಂದ್ರ ಪರಿಹಾರ ಸಮಿತಿಯ ಕಾರ್ಯದರ್ಶಿ ಜಗದೀಶ್ ಎಸ್.ಹೆಬ್ಬಾಳಿ, ಅಧೀಕ್ಷಕ ರಾಜೇಂದ್ರ ಪಿ., ದುಲಾ ಹೆಲ್ತ್ ಸಂಸ್ಥಾಪಕ ಮೆಹುಲ್ ಜೈನ್ ಮತ್ತಿತರರು ಹಾಜರಿದ್ದರು.