ಕೆಪಿಎಸ್‍ಸಿ ಹುದ್ದೆಗಳ ನೇಮಕಾತಿ ಅಕ್ರಮ: ಜ್ಞಾನೇಂದ್ರ ಕುಮಾರ್ ಮತ್ತೆ ಎಂಟು ದಿನ ಈ.ಡಿ. ವಶಕ್ಕೆ
ಬೆಂಗಳೂರು : ಕರ್ನಾಟಕ ಲೋಕಸೇವಾ ಆಯೋಗ(ಕೆಪಿಎಸ್‍ಸಿ) ಪ್ರಕ್ರಿಯೆಯಲ್ಲಿ ನಡೆದಿದೆ ಎನ್ನಲಾದ ಕೋಟ್ಯಂತರ ರೂ.ಅಕ್ರಮ ಪ್ರಕರಣದಲ್ಲಿ ಆರೋಪಿಯಾಗಿರುವ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಗಂಗ್ವಾರ್‍ನನ್ನು ಎಂಟು ದಿನಗಳ ಕಾಲ ಈ.ಡಿ. ವಶಕ್ಕೆ ನೀಡಿ ನಗರದ ನಾಲ್ಕನೇ ಪ್ರಧಾನ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ಆದೇಶಿಸಿದೆ.
ನೇಮಕಾತಿ ಅಕ್ರಮ ಪ್ರಕರಣದಲ್ಲಿ ತನಿಖೆ ಎದುರಿಸುತ್ತಿರುವ ಜ್ಞಾನೇಂದ್ರ ಕುಮಾರ್ ರ ಕಸ್ಟಡಿ ಅಂತ್ಯ ಹಿನ್ನೆಲೆ ಜಾರಿ ನಿರ್ದೇಶನಾಲಯದ(ಈ.ಡಿ.) ಅಧಿಕಾರಿಗಳು ಶನಿವಾರ ನ್ಯಾಯಾಲಯದ ಮುಂದೆ ಹಾಜರುಪಡಿಸಿದರು.
ಈ ವೇಳೆ, ಪ್ರಕರಣದ ಕುರಿತು ಇನ್ನಷ್ಟು ತನಿಖೆಯನ್ನು ನಡೆಸಬೇಕಿರುವ ಕಾರಣ, ಆರೋಪಿ ಜ್ಞಾನೇಂದ್ರ ಕುಮಾರ್‍ನನ್ನು ಹೆಚ್ಚಿನ ವಿಚಾರಣೆಗಾಗಿ ತಮ್ಮ ವಶಕ್ಕೆ ಒಪ್ಪಿಸಬೇಕೆಂದು ಈ.ಡಿ. ಪರ ವಕೀಲರು ನ್ಯಾಯಾಲಯಕ್ಕೆ ಮನವಿ ಮಾಡಿಕೊಂಡರು. ವಕೀಲರ ವಾದ-ಪ್ರತಿವಾದಗಳನ್ನು ಪರಿಗಣಿಸಿದ ನ್ಯಾಯಪೀಠ, ಆರೋಪಿ ಜ್ಞಾನೇಂದ್ರ ಕುಮಾರ್‍ನನ್ನು ಮತ್ತೆ ಎಂಟು ದಿನಗಳ ಕಾಲ ಈ.ಡಿ. ವಶಕ್ಕೆ ಒಪ್ಪಿಸಿದೆ.
ಇದೇ ವೇಳೆ, ಕಸ್ಟಡಿ ಅವಧಿಯಲ್ಲಿ ನಿಯಮಾನುಸಾರ ಆರೋಪಿಯನ್ನು ಭೇಟಿಯಾಗಲು ಅವರ ಕುಟುಂಬದ ಸದಸ್ಯರಿಗೆ ಅವಕಾಶ ಕಲ್ಪಿಸಬೇಕು ಎಂದು ನ್ಯಾಯಾಲಯ ತನಿಖಾಧಿಕಾರಿಗಳಿಗೆ ನಿರ್ದೇಶನ ನೀಡಿದೆ.