ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ (Photo: PTI) 

ಬೆಂಗಳೂರು : ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧ ಗಂಭೀರ ಪ್ರಶ್ನೆಗಳು ಎದ್ದಿರುವ ಹಿನ್ನೆಲೆಯಲ್ಲಿ, ಅವರನ್ನು ತಕ್ಷಣವೇ ಹುದ್ದೆಯಿಂದ ವಜಾಗೊಳಿಸಬೇಕು ಮತ್ತು ಹೊಣೆಗಾರಿಕೆಯನ್ನು ನಿಗದಿಪಡಿಸಲು ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಆಗ್ರಹಿಸಿದೆ.

ಶನಿವಾರ ಪತ್ರಿಕಾ ಹೇಳಿಕೆ ನೀಡಿರುವ ಸಂಘಟನೆಯ ಅಧ್ಯಕ್ಷೆ ಚಂದ್ರಕುಮಾರಿ, ವಿಶೇಷ ತೀವ್ರ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ಗಂಭೀರ ಅಕ್ರಮಗಳು, ಪಾರದರ್ಶಕತೆಯ ಕೊರತೆ ಹಾಗೂ ಮತದಾರರ ಹೆಸರುಗಳನ್ನು ಯಾದೃಚ್ಛಿಕವಾಗಿ ಅಳಿಸಲಾಗುತ್ತಿದೆ ಎಂಬ ನಮ್ಮ ದೀರ್ಘಕಾಲದ ಆತಂಕಗಳನ್ನು ಇತ್ತೀಚಿನ ಮಾಧ್ಯಮ ವರದಿಗಳು ಮತ್ತಷ್ಟು ದೃಢಪಡಿಸಿವೆ. ಇದರ ಜೊತೆಗೆ, ಭಾರತದ ಚುನಾವಣಾ ಆಯೋಗದೊಳಗಿನ ಗಂಭೀರ ಬಿಕ್ಕಟ್ಟನ್ನೂ ಈ ವರದಿಗಳು ಬಹಿರಂಗಪಡಿಸಿವೆ ಎಂದಿದ್ದಾರೆ.

ಮೂರು ಚುನಾವಣಾ ಆಯುಕ್ತರಲ್ಲಿ ಇಬ್ಬರಾದ ಸುಖ್ಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ ಅವರು ಕೇವಲ ಹತ್ತು ತಿಂಗಳ ಅವಧಿಯಲ್ಲಿ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಕೈಗೊಂಡ ನಿರ್ಧಾರಗಳಿಗೆ ಕನಿಷ್ಠ 14 ಬಾರಿ ಅಧಿಕೃತವಾಗಿ ಆಕ್ಷೇಪ ದಾಖಲಿಸಿದ್ದಾರೆ ಎಂದು ವರದಿಯಾಗಿದೆ. ಮತದಾರರ ನೋಂದಣಿ ಪ್ರಕ್ರಿಯೆಯಲ್ಲಿ ಕಾನೂನುಬಾಹಿರ, ಏಕಪಕ್ಷೀಯ ಹಾಗೂ ಅನಧಿಕೃತ ಬದಲಾವಣೆಗಳು, ಮತದಾರರ ಪಟ್ಟಿಯಿಂದ ಹೆಸರುಗಳನ್ನು ಅಳಿಸುವುದು, ಚುನಾವಣಾ ಸಾಫ್ಟ್‍ವೇರ್‍ನ ಕಾರ್ಯನಿರ್ವಹಣೆ ಹಾಗೂ ತಮ್ಮ ಗಮನಕ್ಕೆ ತರದೇ ಕೈಗೊಂಡ ನಿರ್ಧಾರಗಳಿಗೆ ಸಂಬಂಧಿಸಿದಂತೆ ಈ ಆಕ್ಷೇಪಗಳು ವ್ಯಕ್ತವಾಗಿವೆ ಎಂದು ಚಂದ್ರಕುಮಾರಿ ಹೇಳಿದ್ದಾರೆ.

ಮತದಾರರ ಹೆಸರುಗಳನ್ನು ಅಳಿಸುವ ಪ್ರಕ್ರಿಯೆಯ ಲಿಂಗಾಧಾರಿತ ಪರಿಣಾಮದ ಬಗ್ಗೆ ತುರ್ತು ಪರಿಶೀಲನೆ ಅಗತ್ಯವಾಗಿದೆ. ಬಿಹಾರದ ಎಸ್‍ಐಆರ್ ಪ್ರಕ್ರಿಯೆಯು ಮಹಿಳೆಯರ ಮೇಲೆ ಅಸಮಾನ ಪ್ರಮಾಣದ ಪರಿಣಾಮ ಬೀರಿರುವುದಕ್ಕೆ ಆತಂಕಕಾರಿ ಸಾಕ್ಷ್ಯಗಳನ್ನು ಒದಗಿಸಿದೆ. ಮತದಾರರ ಪಟ್ಟಿಯಿಂದ ಕೈಬಿಡಲಾದವರಲ್ಲಿ ಹತ್ತರಲ್ಲಿ ಆರು ಮಂದಿ ಮಹಿಳೆಯರಾಗಿದ್ದಾರೆ. ಒಟ್ಟು ಮತದಾರರಲ್ಲಿ ಮಹಿಳೆಯರು ಅರ್ಧಕ್ಕಿಂತಲೂ ಕಡಿಮೆ ಸಂಖ್ಯೆಯಲ್ಲಿದ್ದಾರೆ. ಮತದಾರರ ಪಟ್ಟಿಯಲ್ಲಿನ ಲಿಂಗಾನುಪಾತವು ಪ್ರತಿ 1,000 ಪುರುಷರಿಗೆ 914 ಮಹಿಳೆಯರಿಂದ 892 ಮಹಿಳೆಯರಿಗೆ ಕುಸಿದಿದೆ ಎಂದು ಅವರು ತಿಳಿಸಿದ್ದಾರೆ.

ಚುನಾವಣಾ ಆಯೋಗದ ಮೇಲಿನ ಸಾರ್ವಜನಿಕ ವಿಶ್ವಾಸ ಗಂಭೀರವಾಗಿ ಕುಸಿದಿದೆ ಮತ್ತು ಆಡಳಿತದ ಸಮಗ್ರತೆಯ ಬಗ್ಗೆ ಪ್ರಶ್ನೆಗಳನ್ನು ಎದ್ದಿವೆ. ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧ ಗಂಭೀರ ಪ್ರಶ್ನೆಗಳು ಎದ್ದಿರುವ ಹಿನ್ನೆಲೆಯಲ್ಲಿ ಅವರನ್ನು ತಕ್ಷಣವೇ ಹುದ್ದೆಯಿಂದ ತೆಗೆದುಹಾಕಬೇಕು. ಅರ್ಹ ಮತದಾರರನ್ನು ಮತಪಟ್ಟಿಯಿಂದ ಹೊರಗಿಡದಂತೆ ಸುರಕ್ಷತಾ ಕ್ರಮಗಳನ್ನು ಜಾರಿಗೊಳಿಸುವವರೆಗೆ ಎಸ್‍ಐಆರ್ ಪ್ರಕ್ರಿಯೆಯನ್ನು ತಕ್ಷಣವೇ ಸ್ಥಗಿತಗೊಳಿಸಬೇಕು ಎಂದು ಚಂದ್ರಕುಮಾರಿ ಆಗ್ರಹಿಸಿದ್ದಾರೆ.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor