ಶಾಂತಿಯುತ ಪ್ರತಿಭಟನೆ ಹತ್ತಿಕ್ಕುವುದು ಸಂವಿಧಾನದ ಮೇಲಿನ ದಾಳಿ: ಪಾಫ್ರೆ
ಸಾಂದರ್ಭಿಕ ಚಿತ್ರ
ಬೆಂಗಳೂರು : ದೇಶದಲ್ಲಿ ವಿವಿಧ ವಿದ್ಯಾರ್ಥಿ ಸಂಘಟನೆಗಳು, ವಕೀಲರು ಹಾಗೂ ಜನಪರ ಸಂಘಟನೆಗಳು ನಡೆಸುತ್ತಿರುವ ಶಾಂತಿಯುತ ಪ್ರತಿಭಟನೆಗಳನ್ನು ಅಕ್ರಮವಾಗಿ ಹತ್ತಿಕ್ಕುತ್ತಿರುವ ಕೇಂದ್ರ ಸರಕಾರದ ಕ್ರಮವನ್ನು ಶಿಕ್ಷಣದ ಹಕ್ಕಿಗಾಗಿ ಜನಾಂದೋಲನಗಳ ಸಮನ್ವಯ (ಪಾಫ್ರೆ) ಸಂಘಟನೆ ತೀವ್ರವಾಗಿ ಖಂಡಿಸಿದೆ.
ಸೋಮವಾರ ಈ ಕುರಿತು ಪತ್ರಿಕಾ ಪಾಫ್ರೆ ಪ್ರಧಾನ ಸಂಚಾಲಕ ಪ್ರೊ.ನಿರಂಜನಾರಾಧ್ಯ ವಿ.ಪಿ., ಎಐಟಿಯುಸಿ ಅಧ್ಯಕ್ಷ ಪ್ರೊ.ಬಾಬು ಮಾಥ್ಯು, ದಸಂಸ ಸಂಚಾಲಕ ಮಾವಳ್ಳಿ ಶಂಕರ್, ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕರ ಒಕ್ಕೂಟದ ಎಂ.ಜಯಮ್ಮ, ಎಸ್‌ಡಿಎಮ್‌ಸಿಸಿಎಫ್ ಅಧ್ಯಕ್ಷ ಉಮೇಶ್ ದೊಡ್ಡಗಂಗವಾಡಿ, ಬಿಜಿವಿಎಸ್‌ನ ಎಫ್.ಸಿ.ಚೇಗರೆಡ್ಡಿ, ಶುಭಂಕರ್ ಚಕ್ರವರ್ತಿ, ಎಐಡಿಎಸ್‌ಒ ರಾಜ್ಯಾಧ್ಯಕ್ಷ ಅಜಯ್ ಕಾಮತ್ ಸೇರಿದಂತೆ ಹಲವರು ಜಂಟಿ ಪತ್ರಿಕಾ ಹೇಳಿಕೆ ನೀಡಿದ್ದಾರೆ.
ಭಾರತದ ಸಂವಿಧಾನದ ಕಲಂ 19(1)(ಬಿ) ಶಾಂತಿಯುತವಾಗಿ ಮತ್ತು ನಿರಾಯುಧವಾಗಿ ಸಭೆ ಸೇರುವ ಹಕ್ಕನ್ನು ನೀಡುತ್ತದೆ. ಕಲಂ 19(1)(ಎ) ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಖಾತ್ರಿಪಡಿಸುತ್ತದೆ. ಈ ಹಕ್ಕುಗಳ ವ್ಯಾಪ್ತಿಯಲ್ಲಿ ಶಾಂತಿಯುತ ಧರಣಿ ಮತ್ತು ಪ್ರತಿಭಟನೆಗಳು ಮಹತ್ವದ ಸ್ಥಾನ ಹೊಂದಿವೆ. ಆದರೆ, ಸರ್ಕಾರದ ವಿರುದ್ಧದ ಭಿನ್ನಮತದ ಧ್ವನಿಯನ್ನು ಹತ್ತಿಕ್ಕುವ ಪ್ರಯತ್ನಗಳು ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿವೆ ಎಂದು ಹೋರಾಟಗಾರು ಅಭಿಪ್ರಾಯಪಟ್ಟಿದ್ದಾರೆ.