ಕೋಲಾರ : ವೇಮಗಲ್ ಹೋಬಳಿಯ ಪಚ್ಚಾರ್ಲಹಳ್ಳಿ ಗ್ರಾಮದ ದಲಿತ ಮಹಿಳೆ ವೆಂಕಟಲಕ್ಷ್ಮಮ್ಮ ಕೊಲೆ ಪ್ರಕರಣದ ಆರೋಪಿಗಳನ್ನು ಬಂಧಿಸದ ವೇಮಗಲ್ ಪೊಲೀಸರ ಕಾರ್ಯ ವೈಖರಿಯನ್ನು ಖಂಡಿಸಿ, ದಲಿತ ಸಂಘರ್ಷ ಸಮಿತಿ (ದಸಂಸ) ಕೋಲಾರ ಜಿಲ್ಲಾ ಶಾಖೆಯ ವತಿಯಿಂದ ಸೋಮವಾರ ನಗರದ ಕೋಲಾರ ಉಪವಿಭಾಗೀಯ ಡಿವೈಎಸ್ಪಿ ಕಚೇರಿ ಮುಂದೆ ಬೃಹತ್ ಧರಣಿ ಸತ್ಯಾಗ್ರಹ ನಡೆಸಲಾಯಿತು.

ಇದಕ್ಕೂ ಮುನ್ನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ (ಎಸ್ಪಿ) ನಿವಾಸದ ಸಮೀಪದಿಂದ ಕಚೇರಿಯವರೆಗೆ ಮೆರವಣಿಗೆಯಲ್ಲಿ ಸಾಗಿದ ನೂರಾರು ಪ್ರತಿಭಟನಾಕಾರರು, ಪೊಲೀಸ್ ಇಲಾಖೆಯ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ಹೊರಹಾಕಿದರು.

ಗಾಂಧಿನಗರದಲ್ಲಿರುವ ಡಿವೈಎಸ್ಪಿ ಕಚೇರಿ ಎದುರಿನ ರಸ್ತೆಯಲ್ಲಿ ಧರಣಿ ಕುಳಿತ ಮುಖಂಡರು, ಆರೋಪಿಗಳ ರಕ್ಷಣೆಗೆ ನಿಂತಿರುವ ಅಧಿಕಾರಿಗಳ ನಡೆಗೆ ತೀವ್ರ ವಿರೋಧ ವ್ಯಕ್ತಪಡಿಸಿದರು.

ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿದ ದಸಂಸ ಜಿಲ್ಲಾ ಸಂಚಾಲಕ ಚಲ್ದಿಗಾನಹಳ್ಳಿ ಮುನಿವೆಂಕಟಪ್ಪಮಾತನಾಡಿ, ಅನ್ಯಾಯಕ್ಕೆ ಒಳಗಾದ ದಲಿತ ಮಹಿಳೆಯ ಸಾವಿಗೆ ನ್ಯಾಯ ಕೇಳಲು ಶಾಂತಿಯುತ ಮೆರವಣಿಗೆ ನಡೆಸಿ ಧರಣಿ ಕುಳಿತುಕೊಳ್ಳಲು ಪೊಲೀಸರು ಅವಕಾಶ ನೀಡುತ್ತಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಹಕ್ಕುಗಳಿಗಾಗಿ ಹೋರಾಡುವ ಬಡವರ ಧ್ವನಿಯನ್ನು ಅಡಗಿಸಲು ಪೊಲೀಸ್ ಇಲಾಖೆ ಈ ರೀತಿ ದಿಗ್ಬಂಧನ ಹಾಕಿರುವುದು ಖಂಡನೀಯ ಎಂದರು.

ಜಿಲ್ಲಾ ಸಂಘಟನಾ ಸಂಚಾಲಕ ಹೂವರಸನಹಳ್ಳಿ ರಾಜಪ್ಪ, ಮುಖಂಡರಾದ ಲಕ್ಷ್ಮ್ಮೀಸಾಗರ ಮುನಿರಾಜು, ವರದೇನಹಳ್ಳಿ ವೆಂಕಟೇಶ್ ಮಾತನಾಡಿದರು.

ಧರಣಿ ಸ್ಥಳಕ್ಕೆ ಆಗಮಿಸಿದ ಕೋಲಾರ ತಹಶೀಲ್ದಾರ್ ಶ್ರೀನಿವಾಸ್ ಅವರು ಧರಣಿನಿರತರಿಂದ ಮನವಿ ಪತ್ರ ಸ್ವೀಕರಿಸಿ, ಪರಿಶೀಲನೆ ನಡೆಸಿದ ನಂತರ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ರಕ್ಷಣಾಧಿಕಾರಿಗೆ ಪತ್ರ ಬರೆದು ಅಗತ್ಯ ಕ್ರಮಕ್ಕೆ ಶಿಫಾರಸು ಮಾಡಲಾಗುವುದು ಎಂದು ಆಶ್ವಾಸನೆ ನೀಡಿದರು. ಈ ಧರಣಿಯಲ್ಲಿ ದಸಂಸ ಜಿಲ್ಲಾ ಸಂಘಟನಾ ಸಂಚಾಲಕ ದೊಡ್ಡಿ ಮುನಿಯಪ್ಪ, ಜಿಲ್ಲಾ ಮಹಿಳಾ ಒಕ್ಕೂಟದ ಸಂಚಾಲಕಿ ಮಂಜುಳಾ ನಾಗರಾಜ್, ಲಕ್ಷ್ಮಮ್ಮ, ಶಿವರಾಂಪುರ ರಾಜೇಂದ್ರ, ಬೀರಮಾನಹಳ್ಳಿ ಆಂಜಿನಪ್ಪ, ಮಲ್ಲಸಂದ್ರ ವೆಂಕಟಸ್ವಾಮಿ, ಸಿಪೂರ್ ದೇವರಾಜ್, ಅಬ್ಬಣಿ ನಾಗರಾಜ್, ಪಾಡಿಗಾನಹಳ್ಳಿ ರಾಮಾಂಜಿನಪ್ಪ, ವೆಂಕಟೇಶ್, ಅನಿತಾ ಹಾಗೂ ಸಿದ್ದನಹಳ್ಳಿ ಯಲ್ಲಪ್ಪ ಹಲವು ಕಾರ್ಯಕರ್ತರು ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor