ಬೆಂಗಳೂರು : ಭಾರತೀಯ ಸೇನೆಯಲ್ಲಿ ನಾಲ್ಕು ವರ್ಷಗಳ ಕಾಲ ಸೇವೆ ಸಲ್ಲಿಸಿ ನಾಗರಿಕ ಜೀವನಕ್ಕೆ ಮರಳುವ ಅಗ್ನಿವೀರರಿಗೆ ರಾಜ್ಯ ಸರಕಾರ, ಉದ್ಯೋಗ ಹಾಗೂ ಭವಿಷ್ಯದ ಕುರಿತು ಸ್ಪಷ್ಟ ನೀತಿಯನ್ನು ರೂಪಿಸುವಂತೆ ಆಗ್ರಹಿಸಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಪತ್ರ ಬರೆದಿದ್ದಾರೆ.

ಉತ್ತರ ಪ್ರದೇಶ, ಹರಿಯಾಣ ಮತ್ತು ಗುಜರಾತ್ ರಾಜ್ಯಗಳಲ್ಲಿ ಕೆಲವು ಸರಕಾರಿ ಸೇವೆಗಳಲ್ಲಿ ಅಗ್ನಿವೀರರಿಗೆ ಶೇ.20ರಷ್ಟು ಮೀಸಲಾತಿ ಕಲ್ಪಿಸಲಾಗಿದೆ. ಒಡಿಶಾ ಮತ್ತು ಮಹಾರಾಷ್ಟ್ರದಲ್ಲಿ ಶೇ.10ರಷ್ಟು ಮೀಸಲಾತಿ ಹಾಗೂ ವಯೋಮಿತಿ ಸಡಿಲಿಕೆಯ ಸೌಲಭ್ಯ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಉತ್ತರಾಖಂಡ ಸರಕಾರ ಪೊಲೀಸ್, ಅರಣ್ಯ, ಜೈಲು ಮತ್ತು ಅಬಕಾರಿ ಸೇವೆಗಳಲ್ಲಿ ಮೀಸಲಾತಿ ಕಲ್ಪಿಸಿದೆ. ಮಧ್ಯಪ್ರದೇಶ, ಛತ್ತೀಸ್‍ಗಢ, ರಾಜಸ್ಥಾನ, ಅಸ್ಸಾಂ ಮತ್ತು ಅರುಣಾಚಲ ಪ್ರದೇಶಗಳಲ್ಲಿಯೂ ರಾಜ್ಯ ಸರಕಾರಿ ಸೇವೆಗಳಲ್ಲಿ ಅಗ್ನಿವೀರರಿಗೆ ಆದ್ಯತೆ ನೀಡುವ ಹಾಗೂ ಉದ್ಯೋಗಾವಕಾಶ ಕಲ್ಪಿಸುವ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಅವರು ಗಮನ ಸೆಳೆದಿದ್ದಾರೆ.

ಈ ರಾಜ್ಯಗಳ ಮಾದರಿಯನ್ನು ಅಧ್ಯಯನ ಮಾಡಿ, ಕರ್ನಾಟಕದ ಅಗತ್ಯಗಳಿಗೆ ಅನುಗುಣವಾಗಿ ಪರಿಣಾಮಕಾರಿ ನೀತಿಯೊಂದನ್ನು ರೂಪಿಸಲು ರಾಜ್ಯ ಸರಕಾರ ಮುಂದಾಗಬೇಕು. ಇತರ ರಾಜ್ಯಗಳಲ್ಲಿ ಅಗ್ನಿವೀರರಿಗೆ ಅವಕಾಶ ಕಲ್ಪಿಸುವ ಪ್ರಯತ್ನಗಳು ನಡೆಯುತ್ತಿರುವಾಗ, ಕರ್ನಾಟಕದ ಯುವಕರು ಇಂತಹ ಸೌಲಭ್ಯಗಳಿಂದ ವಂಚಿತರಾಗಬಾರದು ಎಂದು ರವಿ ತಿಳಿಸಿದ್ದಾರೆ.

ಗುತ್ತಿಗೆ ನೌಕರರಿಗೆ ಏಕರೂಪದ ವೇತನ ಪಾವತಿ ಮಾರ್ಗಸೂಚಿ: ಗ್ರಾಮೀಣಾಭಿವೃದ್ಧಿ, ಶಿಕ್ಷಣ, ವೈದ್ಯಕೀಯ, ಆರೋಗ್ಯ ಸೇರಿದಂತೆ ರಾಜ್ಯದ ಎಲ್ಲ ಇಲಾಖೆಗಳಲ್ಲೂ ಕಾರ್ಯನಿರ್ವಹಿಸುತ್ತಿರುವ ಗುತ್ತಿಗೆ ಮತ್ತು ಹೊರಗುತ್ತಿಗೆ ನೌಕರರಿಗೆ ಅನ್ವಯವಾಗುವಂತೆ ಏಕರೂಪದ ವೇತನ ಪಾವತಿ ಮಾರ್ಗಸೂಚಿಯನ್ನು ರೂಪಿಸಬೇಕು. ಅವರ ಕೆಲಸದ ಸ್ವರೂಪ, ವಿದ್ಯಾರ್ಹತೆ, ಅನುಭವ ಮತ್ತು ಜವಾಬ್ದಾರಿಗಳನ್ನು ಪರಿಗಣಿಸಿ ಕನಿಷ್ಠ ವೇತನವನ್ನು ನಿಗದಿಪಡಿಸಬೇಕು ಎಂದು ಅವರು ಕೋರಿದ್ದಾರೆ.

ವಿವಿಧ ಇಲಾಖೆಗಳಲ್ಲಿರುವ ವೇತನ ಮತ್ತು ಪಾವತಿ ವ್ಯವಸ್ಥೆಗಳಲ್ಲಿನ ಅಸಮಾನತೆಗಳನ್ನು ಪರಿಶೀಲಿಸಿ, ನೌಕರರಿಗೆ ನ್ಯಾಯಯುತ ವೇತನ ದೊರೆಯುವಂತೆ ಕ್ರಮ ಕೈಗೊಳ್ಳಬೇಕು. ಬಾಕಿ ಉಳಿದಿರುವ ವೇತನವನ್ನು ತಕ್ಷಣ ಬಿಡುಗಡೆ ಮಾಡಬೇಕು. ಪ್ರತಿ ತಿಂಗಳ 5ನೇ ತಾರೀಖಿನೊಳಗೆ ಎಲ್ಲ್ಲ ಗುತ್ತಿಗೆ ಮತ್ತು ಹೊರಗುತ್ತಿಗೆ ನೌಕರರ ವೇತನ ಪಾವತಿಯಾಗುವುದನ್ನು ಖಚಿತಪಡಿಸಬೇಕು ಎಂದು ರವಿ ಮನವಿ ಮಾಡಿದ್ದಾರೆ.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor