ಬೆಂಗಳೂರು : ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ(ಎಸ್‍ಐಆರ್)ಪ್ರಕ್ರಿಯೆಯನ್ನು ರದ್ದುಗೊಳಿಸಬೇಕು ಹಾಗೂ ಕೇಂದ್ರ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆ ಪಡೆಯಬೇಕು ಎಂದು ಒತ್ತಾಯಿಸಿ ಮೆರವಣಿಗೆ ನಡೆಸಲು ಸಿದ್ಧರಾಗಿದ್ದ ವಿದ್ಯಾರ್ಥಿಗಳನ್ನು ಪೊಲೀಸರು ಇಲ್ಲಿನ ಕೆ.ಆರ್.ವೃತ್ತದ ಬಳಿ ಸೋಮವಾರದಂದು ವಶಕ್ಕೆ ಪಡೆದಿದ್ದಾರೆ.

ಎಸ್‍ಐಆರ್ ರದ್ದುಗೊಳಿಸಬೇಕು ಮತ್ತು ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿ ವಿದ್ಯಾರ್ಥಿಗಳು ಸೇರಿ ವಿವಿಧ ವರ್ಗದ ನಾಗರಿಕರು ರಾಜ್ಯ ಮುಖ್ಯ ಚುನಾವಣಾಧಿಕಾರಿಗಳ ಕಚೇರಿಯತ್ತ ಶಾಂತಿಯುತ ಮೆರವಣಿಗೆಯನ್ನು ಹಮ್ಮಿಕೊಂಡಿದ್ದರು. ಈ ವಿಷಯ ತಿಳಿದ ಪೊಲೀಸರು, ಇನ್ನೂ ಮೆರವಣಿಗೆ ಆರಂಭಿಸಲು ಮುಂದಾಗಿದ್ದ ಹೋರಾಟಗಾರರನ್ನು ಬಲವಂತವಾಗಿ ವಶಕ್ಕೆ ಪಡೆದರು.

ಸಾಮೂಹಿಕವಾಗಿ ಜನರನ್ನು ಮತದಾನದ ಹಕ್ಕಿನಿಂದ ವಂಚಿಸುವ ಉದ್ದೇಶದಿಂದ ಎಸ್‍ಐಆರ್ ರೂಪಿಸಲಾಗಿದೆ. ಈಗಾಗಲೇ ಮತದಾರರ ಪಟ್ಟಿಯಿಂದ ದೇಶಾದ್ಯಂತ ಸುಮಾರು 13 ಕೋಟಿ ಮಂದಿ ಮತದಾರರ ಹೆಸರುಗಳನ್ನು ಅಳಿಸಿಹಾಕಲಾಗಿದೆ. ಅಲ್ಲದೆ, ಚುನಾವಣಾ ಆಯೋಗದ ಮೂವರು ಆಯುಕ್ತರಲ್ಲಿ ಇಬ್ಬರು ಕೇವಲ ಒಂಬತ್ತು ತಿಂಗಳ ಅವಧಿಯಲ್ಲಿ 14 ಬಾರಿ ಆಕ್ಷೇಪಣೆಗಳನ್ನು ವ್ಯಕ್ತಪಡಿಸಿದ್ದಾರೆ ಎಂಬುದು ತನಿಖಾ ವರದಿ ಬಹಿರಂಗಪಡಿಸಿದೆ ಎಂದು ಪ್ರತಿಭಟನಾಕಾರರರು ಆರೋಪಿಸಿದರು.

ಕರ್ನಾಟಕದಲ್ಲಿ ನಡೆಯುತ್ತಿರುವ ಎಸ್‍ಐಆರ್ ಪ್ರಕ್ರಿಯೆಯನ್ನು ತಕ್ಷಣವೇ ರದ್ದುಗೊಳಿಸಬೇಕು. ಮುಖ್ಯ ಚುನಾವಣಾ ಆಯುಕ್ತರಾದ ಜ್ಞಾನೇಶ್ ಕುಮಾರ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಜನವರಿ 2025ರಲ್ಲಿ ಇದ್ದ ಮತದಾರರ ಪಟ್ಟಿಗಳನ್ನು ಮರುಸ್ಥಾಪಿಸಬೇಕು. ಯಾವುದೇ ಅರ್ಹ ಮತದಾರರು ಮತದಾನದ ಹಕ್ಕಿನಿಂದ ವಂಚಿತರಾಗದಂತೆ ಖಚಿತಪಡಿಸಬೇಕೆಂದು ಪ್ರತಿಭಟನಾಕಾರರರು ಆಗ್ರಹಿಸಿದರು.

ಪ್ರತಿಭಟನಾ ಮೆರವಣಿಗೆಯನ್ನು ವರದಿಗಾರಿಕೆ ಮಾಡಲು ತೆರಳಿದ್ದ ಛಾಯಾಗ್ರಾಹಕನನ್ನು ಪೊಲೀಸರು, ಹೋರಾಟಗಾರರೆಂದು ತಪ್ಪಾಗಿ ಭಾವಿಸಿ ವಶಕ್ಕೆ ಪಡೆಯಲು ಪ್ರಯತ್ನಿಸಿದರು. ಈ ವೇಳೆ ಪೊಲೀಸ್ ಸಿಬ್ಬಂದಿ ಹಾಗೂ ಛಾಯಾಗ್ರಾಹಕನ ಮಧ್ಯೆ ವಾಗ್ವಾದ ನಡೆದಿದೆ. ಆ ಬಳಿಕ ಪೊಲೀಸರು ಆತನನ್ನು ಸ್ಥಳದಲ್ಲೇ ಬಿಡುಗಡೆ ಮಾಡಿದ್ದಾರೆಂದು ಗೊತ್ತಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor