ಸರಕಾರಿ ಪಿಯು ಕಾಲೇಜು ಪ್ರಾಂಶುಪಾಲರ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅ.24ರ ವರೆಗೆ ಅವಧಿ ವಿಸ್ತರಣೆ
ಸಾಂದರ್ಭಿಕ ಚಿತ್ರ | PC : Image by jannoon028 on Magnific
ಬೆಂಗಳೂರು : ಸರಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಖಾಲಿ ಇರುವ ಪ್ರಾಂಶುಪಾಲರ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನಿಗದಿಪಡಿಸಿದ್ದ ಕೊನೆಯ ದಿನಾಂಕವನ್ನು ಅ.24ರವರೆಗೆ ವಿಸ್ತರಿಸಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಸೋಮವಾರ ಪರಿಷ್ಕೃ ತ ಅಧಿಸೂಚನೆ ಹೊರಡಿಸಿದೆ.
ಸರಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಖಾಲಿ ಇರುವ ಗ್ರೂಪ್-‘ಎ’ ವೃಂದದ 247 ಪ್ರಾಂಶುಪಾಲರ ಹುದ್ದೆಗಳ ನೇಮಕ ಪ್ರಕ್ರಿಯೆ ಆರಂಭಿಸಲಾಗಿದ್ದು, ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಎ)ದ ಮೂಲಕ ನೇಮಕಾತಿ ಪ್ರಕ್ರಿಯೆ ಜರುಗಲಿದ್ದು ಆಸಕ್ತ ಹಾಗೂ ಅರ್ಹ ಸರಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅರ್ಹ ಉಪನ್ಯಾಸಕರು ಕೆಇಎ ಅಧಿಕೃತ ವೆಬ್‍ಸೈಟ್ ಮೂಲಕ ಆನ್‍ಲೈನ್‍ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಉಳಿಕೆ ಮೂಲ ವೃಂದದ 216 ಹುದ್ದೆ ಹಾಗೂ ಕಲ್ಯಾಣ ಕರ್ನಾಟಕ ರಾಜ್ಯ ವ್ಯಾಪ್ತಿ ಸ್ಥಳೀಯ ವೃಂದದ 31 ಹುದ್ದೆಗಳಿಗೆ ನೇಮಕ ನಡೆಸಲಾಗುತ್ತದೆ. ಆನ್‍ಲೈನ್‍ನಲ್ಲಿ ಅರ್ಜಿ ಸಲ್ಲಿಸಲು ನೀಡಲಾಗಿದ್ದ ಅವಧಿಯನ್ನು ಈಗ ವಿಸ್ತರಿಸಲಾಗಿದ್ದು, ಅಕ್ಟೋಬರ್ 24 ಕೊನೆಯ ದಿನವಾಗಿದೆ. ಅರ್ಜಿ ಶುಲ್ಕ ಪಾವತಿಸಲು ಅಕ್ಟೋಬರ್ 25 ಕೊನೆಯ ದಿನವಾಗಿದೆ ಎಂದು ಇಲಾಖೆಯ ಅಧಿಸೂಚನೆಯಲ್ಲಿ ಹೇಳಲಾಗಿದೆ.
ಈ ಹುದ್ದೆಗಳಿಗೆ ಅಂತಿಮವಾಗಿ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಮಾಸಿಕ 90,200 ರೂ.ನಿಂದ ಆರಂಭವಾಗಿ ಗರಿಷ್ಠ 1,59,200 ರೂ.ವರೆಗೆ ವೇತನ ಶ್ರೇಣಿ ಸಿಗಲಿದೆ. ಅಭ್ಯರ್ಥಿಗಳ ಆಯ್ಕೆಗಾಗಿ ಸ್ಪರ್ಧಾತ್ಮಕ ಪರೀಕ್ಷೆಯನ್ನು ನಡೆಸಲಾಗುತ್ತಿದ್ದು, ಈ ಪರೀಕ್ಷೆಯು ಒಟ್ಟು ಮೂರು ಪ್ರಮುಖ ಪತ್ರಿಕೆಗಳನ್ನು ಒಳಗೊಂಡಿರಲಿದೆ ಎಂದು ಅಧಿಕೃತ ಅಧಿಸೂಚನೆಯಲ್ಲಿ ಸ್ಪಷ್ಟಪಡಿಸಲಾಗಿದೆ.