ಶೂದ್ರ ಶ್ರೀನಿವಾಸ್ಗೆ ‘ಕೆಂಧೂಳಿ ರಾಜ್ಯೋತ್ಸವ ಪ್ರಶಸ್ತಿ’
ಬೆಂಗಳೂರು : ‘ಕೆಂಧೂಳಿ ಪತ್ರಿಕೆ’ಯಿಂದ ನೀಡುವ ‘ಕೆಂಧೂಳಿ ರಾಜ್ಯೋತ್ಸವ ಪ್ರಶಸ್ತಿ’ಗೆ ಹಿರಿಯ ಸಾಹಿತಿ, ಹಿರಿಯ ಪತ್ರಕರ್ತ ಶೂದ್ರ ಶ್ರೀನಿವಾಸ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಸಂಪಾದಕ ತುರುವನೂರು ಮಂಜುನಾಥ ತಿಳಿಸಿದ್ದಾರೆ.
ಶುಕ್ರವಾರ ಈ ಕುರಿತು ಪ್ರಕಟಣೆ ನೀಡಿರುವ ಅವರು, ಈ ಪ್ರಶಸ್ತಿಯನ್ನು ಕೆಂಧೂಳಿ ವಾರಪತ್ರಿಕೆ ಐದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಪ್ರಾರಂಭಿಸಲಾಗಿದ್ದು, ಸಾಹಿತ್ಯ, ಪತ್ರಿಕಾ, ಕೃಷಿ, ಕನ್ನಡ ಚಳವಳಿ, ಸಮಾಜಸೇವೆ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ಹಿರಿಯರಿಗೆ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.
ಪ್ರಶಸ್ತಿಯು 10 ಸಾವಿರ ರೂ.ನಗದು, ಫಲಕವನ್ನು ಒಳಗೊಂಡಿರುತ್ತದೆ. ಪ್ರಶಸ್ತಿ ಸಮಾರಂಭದ ದಿನಾಂಕವನ್ನು ಶೀಘ್ರದಲ್ಲಿಯೇ ತಿಳಿಸಲಾಗುತ್ತದೆ. ಸಾಹಿತಿ ಡಾ.ಬಿ.ಎಲ್.ವೇಣು ಅವರ ಅಧ್ಯಕ್ಷತೆಯಲ್ಲಿ ಸಾಹಿತಿ ಡಾ.ಶಿವಕುಮಾರ್ ಕಂಪ್ಲಿ, ಶ್ರೀದೇವಿ ಕೆರೆಮನೆ, ಡಾ.ಗುರುದೇವ್ ಎಸ್.ಎ. ಅವರನ್ನೊಳಗೊಂಡ ಸಮಿತಿಯು ಶೂದ್ರ ಶ್ರೀನಿವಾಸ್ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಿದೆ ಎಂದು ತಿಳಿಸಿದ್ದಾರೆ.