ಬೆಂಗಳೂರು : ವಿಧಾನ ಪರಿಷತ್ತಿನ ಎರಡು ಶಿಕ್ಷಕರ ಮತ್ತು ಎರಡು ಪದವೀಧರರ ಕ್ಷೇತ್ರಗಳ ಚುನಾವಣೆ ಶಾಂತಿಯುತ ಅಂತ್ಯ ಕಂಡಿದ್ದು, ಕ್ರಮವಾಗಿ ಒಟ್ಟಾರೆ ಶೇ.81.98ರಷ್ಟು ಮತ್ತು ಶೇ.73.58ರಷ್ಟು ಮತದಾನವಾಗಿದ್ದು, ಅ.27ರ ಮತ ಎಣಿಕೆ ಮತ್ತು ಫಲಿತಾಂಶದತ್ತ ಎಲ್ಲರ ಚಿತ್ತ ನೆಟ್ಟಿದೆ.

ಬೆಳಗ್ಗೆ 8 ರಿಂದ ಸಂಜೆ 4 ಗಂಟೆಯ ವರೆಗೆ ಮತದಾನ ನಡೆದಿದೆ. ಕೆಲ ಸಣ್ಣ-ಪುಟ್ಟ ಘಟನೆಗಳನ್ನು ಹೊರತುಪಡಿಸಿ, ಯಾವುದೇ ಅಹಿತಕರ ಘಟನೆಗಳ ವರದಿಯಾಗಿಲ್ಲ. ಶಿಕ್ಷಕರ ಕ್ಷೇತ್ರಕ್ಕೆ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಮತ್ತು ರಾಮನಗರ ಸೇರಿದಂತೆ 28 ಕ್ಷೇತ್ರಗಳ ವ್ಯಾಪ್ತಿಯಲ್ಲಿ ಶೇ.81.98ರಷ್ಟು ಮತದಾನ ನಡೆದಿದೆ.

ಬೆಂಗಳೂರು ಶಿಕ್ಷಕರ ಕ್ಷೇತ್ರದ ಒಟ್ಟು 27,405 ಮತದಾರರ ಪೈಕಿ 8,360 ಪುರುಷ ಮತದಾರರು ಹಾಗೂ 14,108 ಮಹಿಳಾ ಮತದಾರರು ಒಟ್ಟು 22,468 ಮತದಾರರು ಮತ ಚಲಾಯಿಸಿದ್ದಾರೆ. ಈ ಮೂಲಕ ಮೂರು ಜಿಲ್ಲೆಗಳ ಒಟ್ಟು 58ಮತಗಟ್ಟೆಯಲ್ಲಿ ಶೇ.81.98ರಷ್ಟು ಮತದಾನ ನಡೆದಿದೆ ಎಂದು ಚುನಾವಣಾಧಿಕಾರಿ ಅಮ್ಲಾನ್ ಆದಿತ್ಯ ಬಿಸ್ವಾಸ್ ಹೇಳಿದ್ದಾರೆ.

ರಾಮನಗರದಲ್ಲಿ ಶೇ.96.66 ಮತದಾನ: ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ(ರಾಮನಗರ) 1,688 ಪುರುಷ ಮತದಾರರು ಹಾಗೂ 1,505 ಮಹಿಳಾ ಮತದಾರರು ಸೇರಿ ಒಟ್ಟಾರೆ 3,193 ಮತದಾರರಿದ್ದಾರೆ. 1,633 ಪುರುಷ ಹಾಗೂ 1,439 ಮಹಿಳಾ ಮತದಾರರು ಸೇರಿದಂತೆ ಒಟ್ಟಾರೆ 3,072 ಮಂದಿ ತಮ್ಮ ಹಕ್ಕು ಚಲಾಯಿಸಿದ್ದಾರೆ. ಈ ಮೂಲಕ ಜಿಲ್ಲೆಯ 9 ಮತಗಟ್ಟೆಯಲ್ಲಿ ಒಟ್ಟಾರೆ ಶೇ.96.66 ಮತದಾನವಾಗಿದೆ.

ಬೆಂಗಳೂರು ಶಿಕ್ಷಕರ ಕ್ಷೇತ್ರಕ್ಕೆ ನಡೆದ ಚುನಾವಣೆಗೆ ಜಿಲ್ಲೆಯಲ್ಲಿ ಒಟ್ಟು 9 ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು. ರಾಮನಗರ, ಚನ್ನಪಟ್ಟಣ, ಮಾಗಡಿ ಹಾಗೂ ಕನಕಪುರ ತಾಲ್ಲೂಕುಗಳಲ್ಲಿ ತಲಾ 2 ಹಾಗೂ ಹಾರೋಹಳ್ಳಿ ತಾಲ್ಲೂಕು ವ್ಯಾಪ್ತಿಯಲ್ಲಿ ಒಂದು ಮತಗಟ್ಟೆಯನ್ನು ರಚಿಸಲಾಗಿತ್ತು.

ಮಾಗಡಿ ತಾಲ್ಲೂಕಿನಲ್ಲಿ 555 ಮತದಾರರಿದ್ದು, 535 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ. ಈ ಪೈಕಿ 335 ಪುರುಷರು ಹಾಗೂ 200 ಮಹಿಳಾ ಮತದಾರರು ಮತ ಚಲಾಯಿಸಿದ್ದಾರೆ. ರಾಮನಗರ ತಾಲ್ಲೂಕಿನಲ್ಲಿ 833 ಮತದಾರರಿದ್ದು, 794 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ. ಈ ಪೈಕಿ 384 ಪುರುಷರು ಹಾಗೂ 410 ಮಹಿಳಾ ಮತದಾರರು ಮತ ಚಲಾಯಿಸಿದ್ದಾರೆ.

ಚನ್ನಪಟ್ಟಣ ತಾಲ್ಲೂಕಿನಲ್ಲಿ 926 ಮತದಾರರಿದ್ದು, 902 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ. ಈ ಪೈಕಿ 454 ಪುರುಷರು ಹಾಗೂ 448 ಮಹಿಳಾ ಮತದಾರರು ಮತ ಚಲಾಯಿಸಿದ್ದಾರೆ. ಕನಕಪುರ ತಾಲ್ಲೂಕಿನಲ್ಲಿ 679 ಮತದಾರರಿದ್ದು, 642 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ. ಈ ಪೈಕಿ 360 ಪುರುಷರು ಹಾಗೂ 282 ಮಹಿಳಾ ಮತದಾರರು ಮತ ಚಲಾಯಿಸಿದ್ದಾರೆ ಎಂದು ಬೆಂಗಳೂರು ದಕ್ಷಿಣ ಜಿಲ್ಲೆಯ ಅಪರ ಜಿಲ್ಲಾಧಿಕಾರಿ ಆರ್. ಚಂದ್ರಯ್ಯ ತಿಳಿಸಿದರು.

ಗ್ರಾಮಾಂತರದಲ್ಲಿ ಶೇ.95.94ರಷ್ಟು ಮತದಾನ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಮತದಾರರ ಪಟ್ಟಿಯಲ್ಲಿ ಒಟ್ಟು 2,863 ಶಿಕ್ಷಕ ಮತದಾರರಿದ್ದು, ಈ ಪೈಕಿ 1,341 ಪುರುಷ ಹಾಗೂ 1,398 ಮಹಿಳಾ ಶಿಕ್ಷಕರು ಸೇರಿ 2,739 ಶಿಕ್ಷಕ ಮತದಾರರು ಮತದಾನ ಮಾಡಿದ್ದಾರೆ. ಈ ಮೂಲಕ ಜಿಲ್ಲೆಯ 6 ಮತದಾನ ಕೇಂದ್ರಗಳಲ್ಲಿ ಶೇ.95.94ರಷ್ಟು ಮತದಾನವಾಗಿದೆ.

ದೊಡ್ಡಬಳ್ಳಾಪುರ ಟೌನ್‍ನಲ್ಲಿ 664 ಮತದಾರರಿದ್ದು, 646 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ. ಈ ಪೈಕಿ 348 ಪುರುಷರು ಹಾಗೂ 298 ಮಹಿಳಾ ಮತದಾರರು ಮತ ಚಲಾಯಿಸಿದ್ದಾರೆ. ದೊಡ್ಡಬೆಳವಂಗಲ ಹೋಬಳಿಯಲ್ಲಿ 147 ಮತದಾರರಿದ್ದು, 146 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ. ಈ ಪೈಕಿ 103 ಪುರುಷರು ಹಾಗೂ 43 ಮಹಿಳಾ ಮತದಾರರು ಮತ ಚಲಾಯಿಸಿದ್ದಾರೆ.

ದೇವನಹಳ್ಳಿ ಟೌನ್‍ನಲ್ಲಿ 593 ಮತದಾರರಿದ್ದು, 562 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ. ಈ ಪೈಕಿ 273 ಪುರುಷರು ಹಾಗೂ 289 ಮಹಿಳಾ ಮತದಾರರು ಮತ ಚಲಾಯಿಸಿದ್ದಾರೆ. ಹೊಸಕೋಟೆ ಟೌನ್‍ನಲ್ಲಿ 814 ಮತದಾರರಿದ್ದು, 759 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ. ಈ ಪೈಕಿ 297 ಪುರುಷರು ಹಾಗೂ 462 ಮಹಿಳಾ ಮತದಾರರು ಮತ ಚಲಾಯಿಸಿದ್ದಾರೆ.

ನೆಲಮಂಗಲ ಟೌನ್‍ನಲ್ಲಿ 442 ಮತದಾರರಿದ್ದು, 433 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ. ಈ ಪೈಕಿ 210 ಪುರುಷರು ಹಾಗೂ 223 ಮಹಿಳಾ ಮತದಾರರು ಮತ ಚಲಾಯಿಸಿದ್ದಾರೆ. ಸೋಂಪುರ ಹೋಬಳಿಯಲ್ಲಿ 203 ಮತದಾರರಿದ್ದು, 193 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ. ಈ ಪೈಕಿ 110 ಪುರುಷರು ಹಾಗೂ 83 ಮಹಿಳಾ ಮತದಾರರು ಮತ ಚಲಾಯಿಸಿದ್ದಾರೆ.

 

ಶೇ.76.83ರಷ್ಟು ಮತದಾನ: ಬೆಂಗಳೂರು ನಗರ ಜಿಲ್ಲೆಯಲ್ಲಿ ಒಟ್ಟಾರೆ 21,349 ಮತದಾರರಿದ್ದು, 5,331 ಪುರುಷ ಹಾಗೂ 11,072 ಮಹಿಳಾ ಮತದಾರರು ಸೇರಿದಂತೆ ಒಟ್ಟಾರೆ 16,403 ಮಂದಿ ತಮ್ಮ ಹಕ್ಕು ಚಲಾಯಿಸಿದ್ದಾರೆ. ಈ ಮೂಲಕ ಜಿಲ್ಲೆಯ 43 ಮತಗಟ್ಟೆಗಳಲ್ಲಿ ಒಟ್ಟಾರೆ ಶೇ.76.83ರಷ್ಟು ಮತದಾನವಾಗಿದೆ.

 

ಕರ್ನಾಟಕ ಆಗ್ನೆಯ ಪದವೀಧರರ ಕ್ಷೇತ್ರದಲ್ಲಿ ಶೇ.73.58ರಷ್ಟು ಮತದಾನ: ಕರ್ನಾಟಕ ಆಗ್ನೆಯ ಪದವೀಧರರ ಕ್ಷೇತ್ರದಲ್ಲಿ ಒಟ್ಟು 1,83,888 ಮತದಾರರ ಪೈಕಿ 78,070 ಪುರುಷ ಮತದಾರರು ಹಾಗೂ 57,251 ಮಹಿಳಾ ಮತದಾರರು ಸೇರಿ ಒಟ್ಟು 1,35,321 ಮತದಾರರು ಮತ ಚಲಾಯಿಸಿದ್ದಾರೆ. ಈ ಮೂಲಕ ಕ್ಷೇತ್ರದ 257 ಮತಗಟ್ಟೆಗಳಲ್ಲಿ ಶೇ.73.58ರಷ್ಟು ಮತದಾನವಾಗಿದೆ.

 

ಅ.27ಕ್ಕೆ ಮತ ಎಣಿಕೆ: ಬೆಂಗಳೂರು ಶಿಕ್ಷಕರ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದಿಂದ ಹಾಲಿ ಎಂಎಲ್‍ಸಿ ಪುಟ್ಟಣ್ಣ ಮತ್ತು ಬಿಜೆಪಿ-ಜೆಡಿಎಸ್ ಮೈತ್ರಿಕೂಟದಿಂದ ಎ.ಪಿ.ರಂಗನಾಥ್ ನಡುವೆ ನೇರ ಸ್ಪರ್ಧೆ ಏರ್ಪಟ್ಟಿದೆ. ಅ.27ರಂದು ಬೆಂಗಳೂರಿನ ಸರಕಾರಿ ಕಲಾ ಕಾಲೇಜಿನಲ್ಲಿ ಬೆಂಗಳೂರು ಶಿಕ್ಷಕರ ಕ್ಷೇತ್ರ ಹಾಗೂ ಕರ್ನಾಟಕ ಆಗ್ನೆಯ ಪದವೀಧರರ ಕ್ಷೇತ್ರದ ಚುನಾವಣೆಯ ಮತಎಣಿಕೆ ನಡೆಯಲಿದ್ದು, ಫಲಿತಾಂಶ ಪ್ರಕಟವಾಗಲಿದೆ.

 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor