ಬೆಂಗಳೂರು : ನೈಸ್ ರಸ್ತೆಯ ಟೋಲ್ ಸಂಗ್ರಹದಲ್ಲಿ ‘ನೈಸ್’ ಕಂಪೆನಿ ವ್ಯಾಪಕ ಅಕ್ರಮಗಳನ್ನು ಎಸಗಿದೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದ್ದಾರೆ.

ಶುಕ್ರವಾರ ಜೆಡಿಎಸ್ ಪಕ್ಷದ ಕೇಂದ್ರ ಕಚೇರಿಯಲ್ಲಿ ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ನೈಸ್ ಸಂಸ್ಥೆಯ ಪೂರ್ಣ ಹೂಡಿಕೆಗೆ ಹೋಲಿಸಿದರೆ ಸುಮಾರು ಶೇ.40ರಷ್ಟು ಮೊತ್ತವನ್ನಷ್ಟೇ ಹೂಡಿಕೆ ಮಾಡಲಾಗಿದೆ. ವಾರ್ಷಿಕ ಸುಮಾರು 730 ಕೋಟಿ ರೂ. ಮೊತ್ತವನ್ನು ಟೋಲ್ ರೂಪದಲ್ಲಿ ಸಂಗ್ರಹಿಸಲಾಗುತ್ತಿದೆ. ಈಗಾಗಲೇ ಸುಮಾರು 4,500 ಕೋಟಿ ರೂ. ಸಂಗ್ರಹಿಸಲಾಗಿದೆ.

ಈ ಮೊತ್ತದಲ್ಲಿ ನಿರ್ವಹಣಾ ವೆಚ್ಚವೂ ಸೇರಿದೆ ಎಂದು ಕೆಲವರು ಹೇಳುತ್ತಾರೆ. ಆದರೆ ಒಪ್ಪಂದದ ಅವಧಿ 30 ವರ್ಷವಾಗಿದ್ದು, ನಿರ್ವಹಣೆಯೂ ಆ ಅವಧಿಯಲ್ಲಿ ನೈಸ್ ಕಂಪೆನಿಯ ಜವಾಬ್ದಾರಿ ಆಗಿರುತ್ತದೆ. ವರದಿ ಪ್ರಕಾರ ಆದಾಯವು ಹೂಡಿಕೆಯನ್ನು ಮೀರಿದೆ ಮತ್ತು ಹೂಡಿಕೆಗಿಂತ ಹೆಚ್ಚಿನ ಲಾಭ ಪಡೆದಿದ್ದಾರೆ ಎಂದು ಕುಮಾರಸ್ವಾಮಿ ದೂರಿದರು.

ಫಾಸ್ಟ್‌ಟ್ಯಾಗ್ ಅಳವಡಿಸುವ ಮೊದಲು ವಾರ್ಷಿಕ ಟೋಲ್ ಆದಾಯವನ್ನು 60ರಿಂದ 70 ಕೋಟಿ ರೂ.ಗಳಷ್ಟೆ ಎಂದು ಘೋಷಿಸಲಾಗುತ್ತಿತ್ತು. 2022ರಲ್ಲಿ ಫಾಸ್ಟ್ ಟ್ಯಾಗ್ ಅಳವಡಿಸಿದ ಬಳಿಕ ಆ ಮೊತ್ತವು ಸುಮಾರು 700 ಕೋಟಿ ರೂ.ಗಳೆಂದು ತೋರಿಸಲಾಗುತ್ತಿದೆ ಎಂದು ವರದಿ ಹೇಳುತ್ತದೆ. ಅಲ್ಲಿಗೆ ಫಾಸ್ಟ್‌ಟ್ಯಾಗ್ ಅಳವಡಿಕೆಗೆ ಮೊದಲು ಭಾರೀ ಪ್ರಮಾಣದ ಹಣ ಲೂಟಿಯಾಗಿದೆ ಎಂದೇ ಅರ್ಥ. ಈ ದೊಡ್ಡ ವ್ಯತ್ಯಾಸವು ಹಿಂದಿನ ಟೋಲ್ ಆದಾಯದ ಘೋಷಣೆ ಸುಳ್ಳು ಅಂಕಿ-ಅಂಶಗಳಿಂದ ಕೂಡಿದೆ ಎಂಬುದು ತಿಳಿಯುತ್ತದೆ. ಈ ಬಗ್ಗೆ ರಾಜ್ಯ ಸರಕಾರಕ್ಕೂ ತಪ್ಪುಮಾಹಿತಿ ನೀಡಲಾಗಿದೆ ಎಂಬುದು ಇದರಿಂದ ಸಾಬೀತಾಗುತ್ತದೆ ಎಂದು ಅವರು ಹೇಳಿದರು.

ಯೋಜನೆ ಒಳ್ಳೆಯದು, ದೇವೇಗೌಡರ ಕಾಲದಲ್ಲಿ ದೂರದೃಷ್ಟಿಯಿಂದ ಆರಂಭಿಸಿದ್ದು. ಮೈಸೂರಿನವರೆಗೆ ಕೆಲಸ ಮಾಡಲು ಯಾರು ತಡೆದರು. ಒಪ್ಪಂದ ಮತ್ತು ಆದೇಶಗಳನ್ನು ಉಲ್ಲಂಘಿಸಿದ್ದು ಸರಕಾರವೇ?. ವರದಿಯ ಪ್ರಕಾರ, ನೇಮಕಾತಿ ದಿನಾಂಕದಿಂದ ಎಂಟು ವರ್ಷಗಳ ಅವಧಿಯಲ್ಲಿ ಕ್ಲೋವರ್ ಲೀಫ್‌ನಿಂದ ಬಿಡದಿಯವರೆಗಿನ ಎಕ್ಸ್‌ಪ್ರೆಸ್‌ವೇ ಕಾಮಗಾರಿಯಲ್ಲಿ ಕೇವಲ ಶೇ.20ರಷ್ಟು ಕೆಲಸ ಪೂರ್ಣಗೊಂಡಿದೆ ಎಂದು ಅವರು ಹೇಳಿದರು. ಸರಕಾರವೇ ನೇಮಿಸಿದ ಖಾಸಗಿ ಸಂಸ್ಥೆ ನೀಡಿರುವ ಈ ವರದಿಯನ್ನು ಸಾರ್ವಜನಿಕವಾಗಿ ಬಿಡುಗಡೆ ಮಾಡಬೇಕು. ವರದಿ ಇರುವಾಗ ಸುಳ್ಳು ಹೇಳಿ ಜನರನ್ನು ಎಷ್ಟು ದಿನ ತಪ್ಪು ದಾರಿಗೆ ಎಳೆಯುತ್ತೀರಿ ಎಂದು ಅವರು ಪ್ರಶ್ನಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor