‘ಜಾಲಿವುಡ್ ಸ್ಟುಡಿಯೋಸ್’ಗೆ ಬೀಗ ಜಡಿದ ಪ್ರಕರಣ : 10 ದಿನಗಳ ಕಾಲಾವಕಾಶ ಕೇಳಿ ಮನವಿ
ಬೆಂಗಳೂರು, ಅ.8: ಪರಿಸರ ನಿಯಮ ಉಲ್ಲಂಘನೆ ಆರೋಪದ ಕಾರಣ ಜಾಲಿವುಡ್ ಸ್ಟುಡಿಯೋಸ್‍ಗೆ ಬೀಗ ಜಡಿದ ಪ್ರಕರಣ ಸಂಬಂಧ ಬೆಂಗಳೂರು ದಕ್ಷಿಣ ಜಿಲ್ಲಾಧಿಕಾರಿ ಕಚೇರಿಗೆ ಬುಧವಾರ ಜಾಲಿವುಡ್ ಸ್ಟುಡಿಯೋಸ್ ಆಡಳಿತ ಮಂಡಳಿ ನಿಯೋಗ ಭೇಟಿ ನೀಡಿ, ನೋಟಿಸ್‍ಗೆ ಪ್ರತಿಕ್ರಿಯಿಸಲು 10 ದಿನಗಳ ಕಾಲಾವಕಾಶ ಕೇಳಿ ಮನವಿ ಸಲ್ಲಿಸಿದೆ.
ಜಿಲ್ಲಾಧಿಕಾರಿಯನ್ನು ಭೇಟಿಯಾಗಿರುವ ಜಾಲಿವುಡ್ ಆಡಳಿತ ಮಂಡಳಿಯವರು, ಜಾಲಿವುಡ್ ಸ್ಟುಡಿಯೋಸ್‍ನಲ್ಲಿ 400ಕ್ಕೂ ಹೆಚ್ಚು ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಬಿಗ್‍ಬಾಸ್ ರಿಯಾಲಿಟಿ ಶೋ ನಡೆಯುತ್ತಿದೆ. ಈ ರೀತಿ ಏಕಾಏಕಿ ಬಂದ್ ಮಾಡಿದರೆ ಕಾರ್ಮಿಕರ ಕೆಲಸಕ್ಕೆ ಕುತ್ತು ಬರಲಿದೆ. ತಪ್ಪು ಸರಿಪಡಿಸಿಕೊಳ್ಳಲು ಕಾಲಾವಕಾಶ ಕೊಡಿ ಎಂದು ಮನವಿಯಲ್ಲಿ ಕೋರಿದ್ದಾರೆ.
ಈ ಬಗ್ಗೆ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯಿಸಿರುವ ಜಿಲ್ಲಾಧಿಕಾರಿ ಯಶವಂತ ವಿ.ಗುರುಕರ್, ಜಾಲಿವುಡ್ ಸ್ಟುಡಿಯೋಸ್‍ನವರು 10 ದಿನಗಳ ಕಾಲಾವಕಾಶ ಕೇಳಿದ್ದಾರೆ. ಮನವಿ ಪುರಸ್ಕರಿಸಿ ಮಾಲಿನ್ಯ ನಿಯಂತ್ರಣ ಮಂಡಳಿಗೆ ವರ್ಗಾಯಿಸಿದ್ದೇವೆ. ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ನಿರ್ಧಾರದಂತೆ ನಮ್ಮ ಮುಂದಿನ ಕ್ರಮ ಇರಲಿದೆ ಎಂದು ತಿಳಿಸಿದ್ದಾರೆ.
‘ಜಾಲಿವುಡ್ ಸ್ಟುಡಿಯೋಸ್‍ಗೆ 10 ದಿನ ಕಾಲಾವಕಾಶ ಕೊಟ್ಟಿರುವ ಸಂಬಂಧ ನಮಗೆ ಯಾವುದೇ ಮನವಿ ಬಂದಿಲ್ಲ. ನಾವು ಯಾವುದೇ ರೀತಿ ಅವಕಾಶವನ್ನೂ ನೀಡಿಲ್ಲ. ನಮಗೆ ಬಿಗ್‍ಬಾಸ್ ಕಾರ್ಯಕ್ರಮದ ಬಗ್ಗೆ ಗೊತ್ತಿಲ್ಲ. ಕಾನೂನು ಉಲ್ಲಂಘನೆ ಮಾಡಿದ ಕಾರಣಕ್ಕೆ ನಾವು ಜಾಲಿವುಡ್ ಸಂಸ್ಥೆಗೆ ನೋಟಿಸ್ ಕೊಟ್ಟಿದ್ದೇವೆ. 10 ದಿನದ ಕಾಲಾವಕಾಶ ಕೊಡುವ ಬಗ್ಗೆ ಅವರ ಮನವಿ ಬಂದ ಬಳಿಕ ನಾವು ಪರಿಶೀಲಿಸುತ್ತೇನೆ. ಈ ಪ್ರಕರಣ ಸದಸ್ಯ ನ್ಯಾಯಾಲಯದಲ್ಲಿದ್ದು, ಹೆಚ್ಚಿನ ಪ್ರತಿಕ್ರಿಯೆ ನೀಡಲು ಸಾಧ್ಯವಿಲ್ಲ’
-ಪಿ.ಎಂ.ನರೇಂದ್ರಸ್ವಾಮಿ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ