×
Ad

ಮಹಾಬಲೇಶ್ವರ ಸೈಲ್‌ಗೆ ʼಕುವೆಂಪು ರಾಷ್ಟ್ರೀಯ ಪುರಸ್ಕಾರ-2025ʼ

Update: 2025-11-27 00:43 IST

ಬೆಂಗಳೂರು : ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನದ ವತಿಯಿಂದ ನೀಡಲಾಗುವ 2025ನೇ ಸಾಲಿನ ಕುವೆಂಪು ರಾಷ್ಟ್ರೀಯ ಪುರಸ್ಕಾರಕ್ಕೆ ಕೊಂಕಣಿ ಭಾಷೆಯ ಪ್ರಸಿದ್ಧ ಬರಹಗಾರ ಮಹಾಬಲೇಶ್ವರ ಸೈಲ್ ಅವರು ಭಾಜನರಾಗಿದ್ದಾರೆ.

ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನದ ಅಧ್ಯಕ್ಷ ಡಾ.ಬಿ.ಎಲ್.ಶಂಕರ್ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಪ್ರಶಸ್ತಿಯ ಆಯ್ಕೆ ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಯಿತು.

ಆಯ್ಕೆ ಸಮಿತಿಯಲ್ಲಿ ಹಿರಿಯ ಸಾಹಿತಿ ಶಾ.ಮಂ ಕೃಷ್ಣರಾಯ, ಅಗ್ರಹಾರ ಕೃಷ್ಣಮೂರ್ತಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ, ಕಡಿದಾಳ್ ಪ್ರಕಾಶ್ ಇದ್ದರು.

ಕುವೆಂಪು ರಾಷ್ಟ್ರೀಯ ಪುರಸ್ಕಾರವು 5 ಲಕ್ಷ ರೂ. ನಗದು ಹಾಗೂ ಬೆಳ್ಳಿ ಪದಕವನ್ನು ಒಳಗೊಂಡಿದೆ. ಪ್ರಶಸ್ತಿಯನ್ನು ರಾಷ್ಟ್ರಕವಿ ಕುವೆಂಪು ಜನ್ಮದಿನವಾದ ಡಿ.29ರಂದು ಕುಪ್ಪಳ್ಳಿಯಲ್ಲಿ ನಡೆಯಲಿರುವ ‘ವಿಶ್ವಮಾನವ ದಿನಾಚರಣೆ’ ಕಾರ್ಯಕ್ರಮದಲ್ಲಿ ಪ್ರದಾನ ಮಾಡಲಾಗುತ್ತದೆ.

ಮಹಾಬಲೇಶ್ವರ ಸೈಲ್ ಅವರು ಭಾರತೀಯ ಸೇನೆಯಲ್ಲಿದ್ದು, 1965ರ ಭಾರತ-ಪಾಕಿಸ್ತಾನ ಯುದ್ಧದಲ್ಲಿ ಭಾಗವಹಿಸಿದ್ದರು. ಅದರ ಜತೆಗೆ 1964-65ರ ಅವಧಿಯಲ್ಲಿ ಇಸ್ರೇಲ್ ಮತ್ತು ಈಜಿಪ್ಟ್ ನಡುವಿನ ಗಡಿಯಲ್ಲಿ ವಿಶ್ವಸಂಸ್ಥೆಯ ಶಾಂತಿಪಾಲನ ಪಡೆಯಲ್ಲಿ ಸೇವೆ ಸಲ್ಲಿಸಿದರು. ಸೇನೆಯ ನಿವೃತ್ತಿಯ ನಂತರ ಅಂಚೆ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಅವರು, ಕೊಂಕಣಿಯ ಪ್ರಮುಖ ಲೇಖಕ, ಅನುವಾದಕರಾಗಿ ಗುರುತಿಸಿಕೊಂಡಿದ್ದಾರೆ. ಮಹಾಬಲೇಶ್ವರ ಸೈಲ್ ಅವರು ಹಾವಟಣ್ ಕೃತಿಗೆ 2016ರಲ್ಲಿ ಸರಸ್ವತಿ ಸಮ್ಮಾನ್, ತರಂಗಂ ಕಥಾಸಂಕಲನಕ್ಕೆ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಗೋವಾ ಕಲೆ ಅಕಾಡಮಿ, ಗೋವಾ ಸರಕಾರದ ಸಾಂಸ್ಕೃತಿಕ ಪ್ರಶಸ್ತಿ, ಗೋವಾ ಸರಕಾರದ ಸಾಹಿತ್ಯ ಪ್ರಶಸ್ತಿ ಸೇರಿ ಅನೇಕ ಗೌರವಗಳಿಗೆ ಪಾತ್ರರಾಗಿದ್ದಾರೆ ಎಂದು ಪ್ರಕಟಣೆೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News