ಜನಗಣತಿ-2027: ರಾಜ್ಯಮಟ್ಟದ ಪ್ರಧಾನ ಜನಗಣತಿ ಅಧಿಕಾರಿಗಳ ಸಮ್ಮೇಳನ
ಬೆಂಗಳೂರು : ಜನಸಂಖ್ಯಾ ಗಣತಿಗೆ ಸಂಬಂಧಿಸಿದ ‘ಜನಗಣತಿ-2027’ರ ಹಂತ-2ರ ರಾಜ್ಯಮಟ್ಟದ ಪ್ರಧಾನ ಜನಗಣತಿ ಅಧಿಕಾರಿಗಳ ಸಮ್ಮೇಳನವು ಶುಕ್ರವಾರ ಬೆಂಗಳೂರಿನ ವಿಕಾಸಸೌಧದ ಸಭಾಂಗಣದಲ್ಲಿ ನಡೆಯಿತು.
ಈ ಸಮ್ಮೇಳನದಲ್ಲಿ ಜನಸಂಖ್ಯಾ ಗಣತಿಗಾಗಿ ರಾಜ್ಯದ ಸನ್ನದ್ಧತೆಯನ್ನು ಪರಿಶೀಲಿಸಲಾಯಿತು. ಜಿಲ್ಲಾ ಆಡಳಿತಗಳ ನಡುವಿನ ಸಮನ್ವಯ, ಕಾರ್ಯಾಚರಣೆಯ ಸಿದ್ಧತೆ, ಸಾಮಥ್ರ್ಯವೃದ್ಧಿ, ಡಿಜಿಟಲ್ ಸಾಧನಗಳ ಪರಿಣಾಮಕಾರಿ ಬಳಕೆ ಹಾಗೂ ರಾಜ್ಯಾದ್ಯಂತ ನಿಖರ ಮತ್ತು ಸಮಗ್ರ ಜನಸಂಖ್ಯಾ ವ್ಯಾಪ್ತಿಯನ್ನು ಖಾತರಿಪಡಿಸುವ ಬಗ್ಗೆ ವಿಶೇಷ ಗಮನ ಹರಿಸಲಾಯಿತು.
ಸಮ್ಮೇಳನವನ್ನು ಸರಕಾರದ ಅಪರ ಮುಖ್ಯ ಕಾರ್ಯದರ್ಶಿ ಮತ್ತು ಅಭಿವೃದ್ಧಿ ಆಯುಕ್ತೆ ಉಮಾ ಮಹದೇವನ್ ಉದ್ಘಾಟಿಸಿದರು. ಭಾರತದ ರಿಜಿಸ್ಟ್ರಾರ್ ಜನರಲ್ ಕಚೇರಿಯ ಉಪ ರಿಜಿಸ್ಟ್ರಾರ್ ಜನರಲ್(ನಕ್ಷೆ) ವಿ.ವಿ.ಎಲ್.ಎನ್.ಶರ್ಮಾ, ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ ರಾವ್, ಕಂದಾಯ ಇಲಾಖೆಯ (ವಿಪತ್ತುನಿರ್ವಹಣೆ) ಸರಕಾರದ ಕಾರ್ಯದರ್ಶಿ ಮತ್ತು ಜನಗಣತಿ-2027ರ ರಾಜ್ಯ ನೋಡಲ್ ಅಧಿಕಾರಿ ಮನೋಜ್ ಕುಮಾರ್ ಮಿನಾ, ಜನಗಣತಿ ಕಾರ್ಯಾಚರಣೆಗಳ ನಿರ್ದೇಶಕರು, ಪ್ರಾದೇಶಿಕ ಆಯುಕ್ತರು, ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಮತ್ತು ಮಹಾನಗರ ಪಾಲಿಕೆಗಳ ಆಯುಕ್ತರು, ಜಿಲ್ಲಾ ಪಂಚಾಯತ್ಗಳ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ರಾಜ್ಯ ಸರಕಾರದ ವಿವಿಧ ಇಲಾಖೆಗಳ ಮತ್ತು ಜನಗಣತಿ ಕಾರ್ಯಾಚರಣೆಗಳ ನಿರ್ದೇಶನಾಲಯದ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.