ಬೆಂಗಳೂರು  : ಪ್ರಥಮ ಮತ್ತು ದ್ವಿತೀಯ ದರ್ಜೆ ಸಹಾಯಕ ಹಾಗೂ ಇತರ ಸಮಾನಾಂತರ 5,431 ಹುದ್ದೆಗಳ ನೇಮಕಾತಿಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಶುಕ್ರವಾರದಿಂದ ಆರಂಭವಾಗಿದ್ದು, ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಹಲವು ನೂತನ ಉಪಕ್ರಮಗಳನ್ನು ಈ ಬಾರಿ ಅಳವಡಿಸಿಕೊಂಡಿದೆ ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ತಿಳಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ಸಮಾನಾಂತರ ಶೈಕ್ಷಣಿಕ ಅರ್ಹತೆಯ ವಿವಿಧ ಇಲಾಖೆಗಳ ಹುದ್ದೆಗಳಿಗೆ ಒಂದೇಸಲ ಪರೀಕ್ಷೆ ನಡೆಸುವುದರ ಮೂಲಕ ನೇಮಕಾತಿ ಪ್ರಕ್ರಿಯೆ ಮುಗಿಸಲು ಇದೇ ಮೊದಲ ಬಾರಿಗೆ ಕೆಇಎ ಹೆಜ್ಜೆ ಹಾಕಿದೆ. ಇದುವರೆಗೂ ಇಂತಹ ಅವಕಾಶ ಕರ್ನಾಟಕ ಲೋಕಸೇವಾ ಆಯೋಗಕ್ಕೆ ಮಾತ್ರ ಇತ್ತು ಎಂದು ತಿಳಿಸಿದ್ದಾರೆ.

ಇತ್ತೀಚೆಗೆ ರಾಜ್ಯ ಸರಕಾರ, ಕೆಇಎಗೂ ನೇಮಕಾತಿ ಪ್ರಾಧಿಕಾರದ ಮಾನ್ಯತೆ ನೀಡಿರುವ ಹಿನ್ನೆಲೆಯಲ್ಲಿ ಒಟ್ಟು 33 ಇಲಾಖೆಗಳ ವಿವಿಧ ಸಮಾನಾಂತರ ಹುದ್ದೆಗಳಿಗೆ ಒಂದೇ ಸಲ ಪರೀಕ್ಷೆ ನಡೆಸಿ, ತ್ವರಿತವಾಗಿ ನೇಮಕಾತಿ ನಡೆಸಲಾಗುವುದು ಎಂದು ತಿಳಿಸಿದ್ದಾರೆ.

ಹಿಂದೆ ಕೆಇಎ ನಡೆಸಿದ ಗ್ರಾಮ ಆಡಳಿತಾಧಿಕಾರಿ, ಭೂ ಮಾಪಕ, ಕೃಷಿ ಅಧಿಕಾರಿ, ಸಹಾಯಕ ಕೃಷಿ ಅಧಿಕಾರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ್ದ ಅಭ್ಯರ್ಥಿಗಳ ಮಾಹಿತಿ ಎಫ್‍ಡಿಎ ಮತ್ತು ಎಸ್‍ಡಿಎ ಅರ್ಜಿಯಲ್ಲೂ ಪ್ರತಿಬಿಂಬಿಸುವ ಹಾಗೆ ಸಾಫ್ಟ್‍ವೇರ್ ಅಭಿವೃದ್ಧಿಪಡಿಸಿದ್ದು ಅಂತಹವರು ಕೇವಲ ಲಾಗಿನ್ ಆಗಿ ಶುಲ್ಕ ಪಾವತಿಸಿದರೆ ಅರ್ಜಿ ಸಲ್ಲಿಸಿದಂತಾಗುತ್ತದೆ ಎಂದು ತಿಳಿಸಿದ್ದಾರೆ.

ಈ ಹಿಂದಿನ ಯೂಸರ್ ನೇಮ್, ಪಾಸ್‍ವರ್ಡ್ ಮೂಲಕವೇ ಲಾಗಿನ್ ಆಗಬಹುದು. ಬಳಿಕ ಅಗತ್ಯಬಿದ್ದರೆ ಏನಾದರೂ ತಿದ್ದುಪಡಿ ಮಾಡಿಕೊಳ್ಳಬಹುದು. ನಂತರ ಶುಲ್ಕ ಪಾವತಿಸಿ ಸಬ್ ಮಿಟ್ ಮಾಡಿದರೆ ಅರ್ಜಿ ಸಲ್ಲಿಸಿದಂತಾಗುತ್ತದೆ. ಯಾರು ಇದುವರೆಗೂ ನೋಂದಣಿ ಮಾಡಿಕೊಂಡಿಲ್ಲವೊ ಅಂತಹವರು ಮಾತ್ರ ಆಧಾರ್ ದೃಢೀಕರಣದ ಮೂಲಕ ಪೂರ್ಣ ವಿವರಗಳನ್ನು ಭರ್ತಿ ಮಾಡಬೇಕು ಎಂದು ಅವರು ಸಲಹೆ ನೀಡಿದ್ದಾರೆ.

ವರ್ಷಕ್ಕೆ ಎರಡು ಪರೀಕ್ಷೆ: ಸಮಾನಾಂತರ ಹುದ್ದೆಗಳಿಗೆ ವರ್ಷಕ್ಕೆ ಎರಡು ಬಾರಿ ಪರೀಕ್ಷೆ ನಡೆಸುವ ಬಗ್ಗೆ ಚಿಂತನೆ ಇದೆ. ಉದಾಹರಣೆಗೆ ಜನವರಿಯಿಂದ ಜೂನ್ ವರೆಗೂ ವಿವಿಧ ಇಲಾಖೆಗಳ ನೇಮಕಾತಿ ಕೋರಿಕೆಗಳಿಗೆ ಒಮ್ಮೆಗೆ ಅರ್ಜಿ ಕರೆದು ಪರೀಕ್ಷೆ ನಡೆಸುವುದು. ಅದರ ನಂತರ ಬರುವ ಇಲಾಖೆಗಳ ಕೋರಿಕೆಗಳಿಗೆ ಡಿಸೆಂಬರ್ ನಲ್ಲಿ ಪರೀಕ್ಷೆ ನಡೆಸಿ, ನೇಮಕಾತಿ ಪಟ್ಟಿ ನೀಡುವ ಬಗ್ಗೆ ಚಿಂತನೆ ನಡೆದಿದೆ ಎಂದು ಎಚ್.ಪ್ರಸನ್ನ ತಿಳಿಸಿದ್ದಾರೆ.

 

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor