2047ರ ವೇಳೆಗೆ ಕರ್ನಾಟಕದ ನಗರವಾಸಿಗಳ ಪ್ರಮಾಣ ಭಾರೀ ಏರಿಕೆ : ಡಿ.ಕೆ.ಶಿವಕುಮಾರ್
ಬೆಂಗಳೂರು : 2047ರ ವೇಳೆಗೆ ಕರ್ನಾಟಕ ವ್ಯಾಪ್ತಿಯಲ್ಲಿ ನಗರವಾಸಿಗಳ ಪ್ರಮಾಣ ಶೇ.70ಕ್ಕೆ ಏರಿಕೆಯಾಗುವ ಅಂದಾಜಿಸಲಾಗಿದ್ದು, ಈ ಬದಲಾವಣೆಗೆ ಈಗಿನಿಂದಲೇ ಸಿದ್ಧತೆ ಮಾಡಿಕೊಳ್ಳದಿದ್ದರೆ ಭವಿಷ್ಯದಲ್ಲಿ ನಗರಗಳ ಮೇಲೆ ಒತ್ತಡ ಹೆಚ್ಚಾಗಲಿದೆ ಎಂಬ ಹಿನ್ನೆಲೆಯಲ್ಲಿ ಸಮಗ್ರ ಪ್ರಾದೇಶಿಕ ನಗರೀಕರಣ ಯೋಜನೆ ರೂಪಿಸಲಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಶುಕ್ರವಾರ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ಕರ್ನಾಟಕ ರಾಜ್ಯ ಪ್ರಾದೇಶಿಕ ನಗರೀಕರಣ ಯೋಜನೆ-2047 ರ ವರದಿ ಬಿಡುಗಡೆ ಹಾಗೂ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು. ರಾಜ್ಯದ ಜನಸಂಖ್ಯೆ ಪ್ರಸ್ತುತ ಸುಮಾರು 6.9 ಕೋಟಿ ಇದ್ದು, 2047ರ ವೇಳೆಗೆ 7.7ರಿಂದ 7.8 ಕೋಟಿಗೆ ತಲುಪುವ ನಿರೀಕ್ಷೆಯಿದೆ. ಪ್ರಸ್ತುತ ರಾಜ್ಯದ ಜನಸಂಖ್ಯೆಯಲ್ಲಿ ಶೇ.46ರಷ್ಟು ಮಂದಿ ನಗರ ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೆ. 2047ರ ವೇಳೆಗೆ ಈ ಪ್ರಮಾಣ ಶೇ.70ಕ್ಕೆ ಏರಿಕೆಯಾಗುವ ಅಂದಾಜಿದೆ ಎಂದರು.
ನಗರೀಕರಣ ಎಂದರೆ ಕೇವಲ ಬೆಂಗಳೂರು ಅಥವಾ ನಗರಗಳ ಅಭಿವೃದ್ಧಿಯಲ್ಲ. ರಾಜ್ಯದ ಎಲ್ಲ ಪ್ರದೇಶಗಳಲ್ಲೂ ಯೋಜಿತ ಬೆಳವಣಿಗೆ, ಉದ್ಯೋಗ ಸೃಷ್ಟಿ, ಮೂಲಸೌಕರ್ಯ ವಿಸ್ತರಣೆ ಹಾಗೂ ಗ್ರಾಮೀಣ-ನಗರ ಪ್ರದೇಶಗಳ ನಡುವಿನ ಆರ್ಥಿಕ ಸಂಪರ್ಕ ಬಲಪಡಿಸುವುದು ಇದರ ಉದ್ದೇಶವಾಗಿದೆ ಎಂದ ಅವರು,ಬೆಂಗಳೂರು ಮಾತ್ರವಲ್ಲದೆ ರಾಜ್ಯದ ಎಲ್ಲ ನಗರಗಳಲ್ಲಿಯೂ ಆರ್ಥಿಕ ಚಟುವಟಿಕೆಗಳು ಹೆಚ್ಚಾಗಬೇಕು. ನಗರಗಳಿಂದ ಸೃಷ್ಟಿಯಾಗುವ ಆರ್ಥಿಕ ಸಂಪನ್ಮೂಲವನ್ನು ಗ್ರಾಮೀಣ ಜನರ ಬದುಕಿನ ಸುಧಾರಣೆಗೂ ಬಳಸುವಂತಾಗಬೇಕು. ಬೆಂಗಳೂರು ಬೆಳೆದರೆ ಕರ್ನಾಟಕ ಬೆಳೆಯುತ್ತದೆ, ಪಟ್ಟಣಗಳು ಬೆಳೆದರೆ ಹಳ್ಳಿಗಳ ಬದುಕು ಸುಧಾರಿಸುತ್ತದೆ ಎಂಬ ದೃಢ ನಂಬಿಕೆ ನನ್ನದು ಎಂದು ಅವರು ಹೇಳಿದರು.
ಅಭಿವೃದ್ಧಿಯನ್ನು ಕೇವಲ ಆರ್ಥಿಕ ಅಂಕಿ-ಅಂಶಗಳಿಂದ ಅಳೆಯಲು ಸಾಧ್ಯವಿಲ್ಲ. ಜನರಿಗೆ ಉದ್ಯೋಗ, ಉತ್ತಮ ರಸ್ತೆ, ಗುಣಮಟ್ಟದ ಆಸ್ಪತ್ರೆ, ಶಿಕ್ಷಣ ಮತ್ತು ಸಮೃದ್ಧ ಬದುಕು ದೊರೆಯಬೇಕು. ಇಡೀ ಕರ್ನಾಟಕ ಸಮಗ್ರವಾಗಿ ಬೆಳೆಯಬೇಕು. ಇದೇ ನಮ್ಮ ಗುರಿ. 2047ರಲ್ಲಿ ಕರ್ನಾಟಕ ಹೇಗಿರಬೇಕು ಎಂಬುದನ್ನು ಈಗಲೇ ಕಲ್ಪಿಸಿಕೊಂಡು ಅದಕ್ಕೆ ಅಗತ್ಯವಾದ ಮಾರ್ಗಸೂಚಿ ಸಿದ್ಧಪಡಿಸಬೇಕು. ಮುಂದಿನ ಪೀಳಿಗೆಗೆ ಉತ್ತಮ ನಗರಗಳು, ಉತ್ತಮ ರಸ್ತೆಗಳು ಮತ್ತು ಉತ್ತಮ ಜೀವನಮಟ್ಟ ಕಲ್ಪಿಸುವುದು ನಮ್ಮೆಲ್ಲರ ಜವಾಬ್ದಾರಿ. ಈ ಯೋಜನೆ ಮುಂದಿನ ಎರಡು ದಶಕಗಳ ಅಭಿವೃದ್ಧಿಗೆ ಮಾರ್ಗಸೂಚಿಯಾಗಲಿದೆ. ಯೋಜನೆಯ ಸಿದ್ಧತೆಯಲ್ಲಿ ಸಹಕಾರ ನೀಡಿದ ಸಚಿವ ಯತೀಂದ್ರ ಸಿದ್ದರಾಮಯ್ಯ ಅವರನ್ನು ಅಭಿನಂದಿಸಿದ ಅವರು, ಕಡಿಮೆ ಅವಧಿಯಲ್ಲಿ ಯೋಜನೆಯನ್ನು ಈ ಹಂತಕ್ಕೆ ತಂದಿರುವುದು ಸಂತಸ ತಂದಿದೆ ಎಂದರು.
2047ರ ವೇಳೆಗೆ ಕರ್ನಾಟಕದ ವಿದ್ಯುತ್ ಬೇಡಿಕೆ 40 ಸಾವಿರದಿಂದ 50 ಸಾವಿರ ಮೆಗಾವಾಟ್ಗೆ ತಲುಪುವ ನಿರೀಕ್ಷೆಯಿದ್ದು, ಭವಿಷ್ಯದ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಈಗಿನಿಂದಲೇ ವಿದ್ಯುತ್ ಉತ್ಪಾದನೆ ಮತ್ತು ಸಂಗ್ರಹಣೆಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು. ಕೃಷಿ ಮತ್ತು ಕೈಗಾರಿಕೆಗಳಲ್ಲಿ ಹೆಚ್ಚಿನ ಉದ್ಯೋಗಾವಕಾಶ ಸೃಷ್ಟಿಸುವುದರ ಜತೆಗೆ ಹೊಸ ತಂತ್ರಜ್ಞಾನ, ಸೇವಾ ಕ್ಷೇತ್ರಗಳ ಬೆಳವಣಿಗೆಗೂ ಆದ್ಯತೆ ನೀಡಬೇಕು. ಉತ್ತಮ ರಸ್ತೆ, ರೈಲು ಹಾಗೂ ಸಾರಿಗೆ ಸಂಪರ್ಕ ವ್ಯವಸ್ಥೆ ಮತ್ತು ನಿರಂತರ ವಿದ್ಯುತ್ ಪೂರೈಕೆಗೆ ಒತ್ತು ನೀಡಬೇಕು ಎಂದು ಅವರು ತಿಳಿಸಿದರು.
ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ಮಾತನಾಡಿ, ರಾಜ್ಯದ ಸಮಗ್ರ ಮತ್ತು ಸಮತೋಲಿತ ಅಭಿವೃದ್ಧಿಯನ್ನು ಗುರಿಯಾಗಿಟ್ಟುಕೊಂಡು, ಮುಂದಿನ ಎರಡು ದಶಕಗಳ ದೂರದೃಷ್ಟಿಯೊಂದಿಗೆ ಕರ್ನಾಟಕ ರಾಜ್ಯ ಪ್ರಾದೇಶಿಕ ನಗರೀಕರಣ ಯೋಜನೆ-2047 ರ ವರದಿಯನ್ನು ಬಿಡುಗಡೆ ಮಾಡಲಾಗಿದೆ. ರಾಜ್ಯದ ಎಲ್ಲ ಜಿಲ್ಲೆಗಳು ಮತ್ತು ಗ್ರಾಮೀಣ ಪ್ರದೇಶಗಳನ್ನು ಸೇರಿದಂತೆ ರಾಜ್ಯದಾದ್ಯಂತ ಸಮಾನ ಆರ್ಥಿಕ ವೃದ್ಧಿಯನ್ನು ಸಾಧಿಸುವ ಪ್ರಮುಖ ಉದ್ದೇಶದಿಂದ ಈ ವರದಿಯನ್ನು ತಯಾರಿಸಲಾಗಿದ್ದು, ಮುಂದಿನ 20 ವರ್ಷದ ನಂತರ ನಮ್ಮ ರಾಜ್ಯದ ಚಿತ್ರವೇ ಬದಲಾಗಲಿದೆ ಎಂದರು.
ಬೆಂಗಳೂರು ನಗರಕ್ಕೆ ಶಿಕ್ಷಣ ಮತ್ತು ಉದ್ಯೋಗಕ್ಕಾಗಿ ಇತರೆ ಪಟ್ಟಣಗಳಿಂದ ಜನರು ಬರುತ್ತಿರುವುದರಿಂದ ಬೆಂಗಳೂರು ನಗರದಲ್ಲಿ ಜನಸಂಖ್ಯೆ ಹೆಚ್ಚಾಗುತ್ತಿರುವುದಲ್ಲದೆ, ಸಂಚಾರ ದಟ್ಟಣೆ ಹೆಚ್ಚುತ್ತಿದೆ. ಹಾಗಾಗಿ ಬೆಂಗಳೂರನ್ನು ಹೊರತುಪಡಿಸಿ ಇತರೆ ಪ್ರಮುಖ ನಗರಗಳನ್ನೂ ಸಹ ಸಮಾನಾಂತರವಾಗಿ ಬೆಳೆಸಲು ಈ ಯೋಜನೆಯಲ್ಲಿ ಒತ್ತು ನೀಡಲಾಗಿದೆ. ರಾಜ್ಯವನ್ನು ಮೂರು ಮುಖ್ಯ ವಲಯಗಳಾಗಿ ವಿಂಗಡಿಸಿ, ಅವುಗಳ ಅಡಿಯಲ್ಲಿ ಮೈಸೂರು, ಶಿವಮೊಗ್ಗ, ಮಂಗಳೂರು, ಕಲಗುರಗಿ, ಬಳ್ಳಾರಿ, ಬೆಳಗಾವಿ, ಹುಬ್ಬಳ್ಳಿ ಮತ್ತು ಧಾರವಾಡ ಸೇರಿದಂತೆ ಒಟ್ಟು 7 ಪ್ರಮುಖ ಪ್ರದೇಶಗಳಲ್ಲಿ ನಗರಗಳನ್ನು ಅಭಿವೃದ್ಧಿಪಡಿಸಲು ನಿರ್ಧರಿಸಲಾಗಿದೆ. ಈ ನಗರಗಳ ವಿಸ್ತರಣೆಯಷ್ಟೇ ಅಲ್ಲದೆ, ಹೊಸ ಉಪನಗರಗಳು ಹಾಗೂ ವ್ಯವಸ್ಥಿತ ಪಟ್ಟಣಗಳನ್ನು ಹೊಸದಾಗಿ ನಿರ್ಮಿಸುವ ಮೂಲಕ ರಸ್ತೆ, ಕುಡಿಯುವ ನೀರು, ಒಳಚರಂಡಿ ಮತ್ತು ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಅತ್ಯಂತ ಪರಿಣಾಮಕಾರಿಯಾಗಿ ಜಾರಿಗೊಳಿಸಲು ಪ್ಲಾನ್ ಮಾಡಲಾಗಿದೆ ಎಂದು ತಿಳಿಸಿದರು.
ಕಾರ್ಯಾಗಾರದಲ್ಲಿ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್, ಅಪರ ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿನಾಥ್, ಸಿಎಂ ಆರ್ಥಿಕ ಸಲಹೆಗಾರ ಎಲ್.ಕೆ.ಅತೀಕ್, ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಬಿ.ಬಿ ಕಾವೇರಿ, ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ. ಎಸ್. ಸೆಲ್ವಕುಮಾರ್ ಮತ್ತಿತರರು ಉಪಸ್ಥಿತರಿದ್ದರು.