ಚಿತ್ರ ನಟ ಅಶೋಕ್ ಆರ್ ಅವರಿಗೆ ʼರಾಜ್ಯೋತ್ಸವ ಪ್ರಶಸ್ತಿʼ
ಬೆಂಗಳೂರು : ಚಿತ್ರ ನಟ ಹಾಗೂ ಚಿತ್ರೋದ್ಯಮದ ಕಾರ್ಮಿಕರ ಧ್ವನಿಯಾಗಿ ಕೆಲಸ ಮಾಡುತ್ತಿರುವ ಅಶೋಕ್ ಆರ್. ಅವರಿಗೆ ಪ್ರತಿಷ್ಠಿತ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸಂದಿದ್ದು, ಚಿತ್ರೋದ್ಯಮದ ಕಾರ್ಮಿಕರಿಗೆ ಗೌರವ ಸಲ್ಲಿಸಿದಂತೆ ಆಗಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆ ಮೂಲದ ಅಶೋಕ್ ಅವರು 1975ರಲ್ಲಿ ತೆರೆಕಂಡ ‘ಹೆಣ್ಣು ಸಂಸಾರದ ಕಣ್ಣು’ ಚಿತ್ರದ ಮೂಲಕ ನಾಯಕನಾಗಿ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟರು. ‘ಸನಾದಿ ಅಪ್ಪಣ್ಣ’ (1977), ‘ಬಯಲು ದಾರಿ’ (1977), ಪುಟ್ಟಣ್ಣ ಕಣಗಾಲ್ ಅವರ ‘ರಂಗನಾಯಕಿ’ (1981), ‘ಚೆಲ್ಲಿದ ರಕ್ತ’, ‘ತಾಯಿಯ ಮಡಿಲಲ್ಲಿ’, ‘ಜನುಮದ ಜೋಡಿ’ ಹಾಗೂ ಇತ್ತೀಚಿನ ‘ಕೆಂಪೇಗೌಡ’, ‘ಮಿಸ್ಟರ್ ಐರಾವತ’ ಸೇರಿದಂತೆ 200ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.
ರೊಮ್ಯಾಂಟಿಕ್ ಹೀರೋ ಆಗಿ ಮಾತ್ರವಲ್ಲದೆ ಸಾಮಾಜಿಕ ಸಂದೇಶವಿರುವ ಪಾತ್ರಗಳ ಮೂಲಕವೂ ಜನಮನ್ನಣೆ ಗಳಿಸಿದ್ದಾರೆ. 1986ರಲ್ಲಿ ‘ಕರ್ನಾಟಕ ಚಲನಚಿತ್ರ ಕಲಾವಿದರು, ಕೆಲಸಗಾರರ ಮತ್ತು ತಂತ್ರಜ್ಞರ ಒಕ್ಕೂಟ’ದ ಸಂಸ್ಥಾಪಕ ಅಧ್ಯಕ್ಷರಾಗಿ ಅಶೋಕ್ ಅವರು ಕಾರ್ಯನಿರ್ವಹಿಸಿದ್ದರು. ನಟರೂ ಮಾತ್ರವಲ್ಲದೆ, ಚಿತ್ರೋದ್ಯಮದ ಕಾರ್ಮಿಕರ ಧ್ವನಿಯಾಗಿ ಕೆಲಸ ಮಾಡಿದ್ದರು. ಕನ್ನಡದ ಗೋಕಾಕ ಚಳವಳಿ ಹಾಗೂ ರೈತ ಸಂಘದ ಪ್ರತಿಭಟನೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು.