×
Ad

ಪರಪ್ಪನ ಅಗ್ರಹಾರ ಜೈಲೊಳಗೆ ಕೈದಿಗಳಿಗೆ ರಾಜಾತಿಥ್ಯ ವಿಡಿಯೋ ವೈರಲ್; ತಪಾಸಣೆಗೆ ಸೂಚಿಸಿದ ಎಡಿಜಿಪಿ ಬಿ.ದಯಾನಂದ್

Update: 2025-11-08 23:56 IST

ಪರಪ್ಪನ ಅಗ್ರಹಾರ ಜೈಲೊಳಗೆ ಕೈದಿಗಳಿಗೆ ರಾಜಾತಿಥ್ಯ ವಿಡಿಯೋ ವೈರಲ್

ಬೆಂಗಳೂರು : ಕೊಲೆ ಪ್ರಕರಣದ ಅಪರಾಧಿ ಉಮೇಶ್ ರೆಡ್ಡಿ, ಚಿನ್ನ ಕಳ್ಳಸಾಗಾಣಿಕೆ ಪ್ರಕರಣದ ಪ್ರಮುಖ ಆರೋಪಿ ತರಣ್ ರಾಜ್ ಪರಪ್ಪನ ಅಗ್ರಹಾರ ಜೈಲಿನ ತಮ್ಮ ಸೆಲ್‍ಗಳಲ್ಲಿ ಮೊಬೈಲ್ ಬಳಸುತ್ತಿದ್ದಾರೆ ಎಂಬ ವಿಡಿಯೋ, ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಈ ವಿಚಾರ ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಸುದ್ದಿ ಮಾಧ್ಯಮಗಳಲ್ಲಿ ಈ ದೃಶ್ಯಗಳು ಪ್ರಸಾರವಾಗುತ್ತಿದ್ದಂತೆ ಸಂಬಂಧಪಟ್ಟ ಕೈದಿಗಳ ಬ್ಯಾರಕ್‍ಗಳನ್ನು ಪರಿಶೀಲನೆ ನಡೆಸುವಂತೆ ಜೈಲಾಧಿಕಾರಿಗಳಿಗೆ ಕಾರಾಗೃಹ ಹಾಗೂ ಸುಧಾರಣಾ ಇಲಾಖೆಯ ಎಡಿಜಿಪಿ ಬಿ.ದಯಾನಂದ್ ಸೂಚಿಸಿದ್ದಾರೆ.

ಈ ವಿಚಾರವಾಗಿ ಮಾಧ್ಯಮವೊಂದಕ್ಕೆ ಪ್ರತಿಕ್ರಿಯಿಸಿದ ನಿವೃತ್ತ ಪೊಲೀಸ್ ಅಧಿಕಾರಿ ಎಸ್.ಕೆ.ಉಮೇಶ್, ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳಿಗೆ ದೊರೆಯುತ್ತಿರುವ ವಿಐಪಿ ಸೌಲಭ್ಯಗಳು ಮತ್ತು ಮೊಬೈಲ್ ಫೋನ್‍ಗಳು ದೇಶದ ಭದ್ರತೆಗೆ ಗಂಭೀರ ಸವಾಲೊಡ್ಡಿದೆ. ಕೊಲೆ ಪ್ರಕರಣದ ಅಪರಾಧಿ ಉಮೇಶ್ ರೆಡ್ಡಿ, ಚಿನ್ನ ಕಳ್ಳಸಾಗಾಣಿಕೆ ಪ್ರಕರಣದ ಆರೋಪಿ ತರಣ್ ರಾಜ್‍ ಸೆಲ್‍ನಲ್ಲಿ ಮೊಬೈಲ್ ಬಳಸುತ್ತಾ, ಟಿವಿ ನೋಡುತ್ತಾ ಇರುವ ವಿಡಿಯೋಗಳು ಬೆಳಕಿಗೆ ಬಂದಿದ್ದು, ಇದನ್ನು ಸರಕಾರ, ಇಲಾಖೆ ಗಂಭೀರವಾಗಿ ಪರಿಗಣಿಸಬೇಕಿದೆ ಎಂದರು.

ಹಿಂದೆ ಕೂಡ ಜೈಲುಗಳಲ್ಲಿ ಇಂತಹ ಅಕ್ರಮಗಳು ನಡೆಯುತ್ತಿದ್ದವು. ಆದರೆ, ಜೈಲಿನೊಳಗೆ ಮೊಬೈಲ್ ಬಳಕೆ ಮತ್ತು ಇತರ ವಿಐಪಿ ಸೌಲಭ್ಯಗಳು ದೇಶದ ದೃಷ್ಟಿಯಿಂದ ಅಭದ್ರತೆಯನ್ನು ಸೃಷ್ಟಿಸುತ್ತವೆ. ಈ ಸಮಸ್ಯೆ ಪರಿಹಾರಕ್ಕೆ ಯಾವುದೇ ಕೆಲಸ ಆಗುತ್ತಿಲ್ಲ ಎಂದು ಎಸ್.ಕೆ.ಉಮೇಶ್ ಬೇಸರ ವ್ಯಕ್ತಪಡಿಸಿದ್ದಾರೆ.

ಮಾಹಿತಿ ಪಡೆದು ಮಾತನಾಡುತ್ತೇನೆ..! : ಸಿಎಂ

ಕೈದಿಗಳಿಗೆ ವಿಶೇಷ ಆತಿಥ್ಯ ದೊರೆಯುತ್ತಿರುವ ಬಗ್ಗೆ ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಅದರ ಬಗ್ಗೆ ನನಗೆ ಖಚಿತವಾಗಿ ಗೊತ್ತಿಲ್ಲ, ಸಂಬಂಧಪಟ್ಟವರಲ್ಲಿ ಮಾಹಿತಿ ಪಡೆದುಕೊಂಡು ಮಾತನಾಡುತ್ತೇನೆ ಎಂದು ತಿಳಿಸಿದರು.

‘ಗೃಹ ಇಲಾಖೆ ಸತ್ತು ಹೋಗಿದೆ...’

ಪರಪ್ಪನ ಅಗ್ರಹಾರ ಜೈಲು ಅಪರಾಧಿಗಳ ಪಾಲಿನ ಸ್ವರ್ಗ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಉಮೇಶ್ ರೆಡ್ಡಿ ಮತ್ತು ಲಷ್ಕರ್ ಉಗ್ರ ಮೊಬೈಲ್ ಬಳಸುತ್ತಿರುವ ವಿಡಿಯೋಗಳು ಬೆಳಕಿಗೆ ಬಂದಿವೆ. ರಾಜ್ಯದಲ್ಲಿ ಗೃಹ ಇಲಾಖೆ ಸತ್ತು ಹೋಗಿದೆ. ಭಯೋತ್ಪಾದಕರಿಗೆ ಕರ್ನಾಟಕ ಸ್ವರ್ಗವಾಗಿದೆ.

-ಆರ್.ಅಶೋಕ್, ವಿಧಾನಸಭೆ ವಿರೋಧ ಪಕ್ಷದ ನಾಯಕ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News