×
Ad

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ಗೆ ಮತ್ತೊಂದು ಪತ್ರ ಬರೆದ ಎಚ್‍ಡಿಕೆ: ‘ಜೂ.27ರಂದು ಭೈರಮಂಗಲಕ್ಕೆ ಬರಲಿ’

Update: 2026-06-25 20:52 IST

ಬೆಂಗಳೂರು : ಬಿಡದಿ ಟೌನ್‍ಶಿಪ್ ಯೋಜನೆ ಸಂಬಂಧ ಚರ್ಚೆಗೆ ಆಹ್ವಾನ ವಿಚಾರವಾಗಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಗೆ ಮತ್ತೊಂದು ಪತ್ರ ಬರೆದಿದ್ದು, ಜೂ.27ರಂದು ನಾನು ಭೈರಮಂಗಲ ಗ್ರಾಮಕ್ಕೆ ಭೇಟಿ ನೀಡಲಿದ್ದು, ತಾವೂ ಬರಬೇಕು ಎಂದು ಸಿಎಂಗೆ ಆಹ್ವಾನಿಸಿದ್ದಾರೆ.

ಬಿಡದಿಯಲ್ಲಿ ರಚಿಸಲಿರುವ ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ ಯೋಜನೆಯಿಂದ ಬಾಧಿತರಾಗುವ ರೈತರು, ಕೃಷಿ ಕಾರ್ಮಿಕರು, ಹೈನುಗಾರಿಕೆಯಲ್ಲಿ ತೊಡಗಿರುವ ರೈತ ಮಹಿಳೆಯರು, ಸಣ್ಣ ಉದ್ಯಮಿಗಳು ಹಾಗೂ ಗ್ರಾಮಸ್ಥರ ಅಹವಾಲನ್ನು ಮತ್ತು ಕುಂದು-ಕೊರತೆಗಳನ್ನು ಕೇಳಲು ಜೂ.27 ನಾನು ಭೈರಮಂಗಲ ಗ್ರಾಮಕ್ಕೆ ಭೇಟಿ ನೀಡಲಿದ್ದೇನೆ. ತಾವು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಈ ಭೈರಮಂಗಲ ಗ್ರಾಮಕ್ಕೆ ಜೂ.27ರಂದು ಭೇಟಿ ನೀಡಿದರೆ, ನಾವಿಬ್ಬರು ಖುದ್ದಾಗಿ ಬಾಧಿತ ವರ್ಗದ ಜನರ ಸಂಕಷ್ಟಗಳನ್ನು ಆಲಿಸಿ, ಸ್ಥಳದಲ್ಲಿಯೇ ಪರ್ಯಾಯ ಮಾರ್ಗಗಳನ್ನು ಯೋಚಿಸಲು ಸಾಧ್ಯವಾಗುತ್ತದೆ ಎಂದು ಹೇಳಿದ್ದಾರೆ.

ಡಿ.ಕೆ.ಶಿವಕುಮಾರ್ ಜೂ. 22ರಂದು ಕುಮಾರಸ್ವಾಮಿಗೆ ಪತ್ರ ಬರೆದು ಬಿಡದಿ ಟೌನ್‍ಶಿಪ್ ಸಂಬಂಧ ಚರ್ಚಿಸಲು ವಿಧಾನಸೌಧದ ತನ್ನ ಕಚೇರಿಗೆ ಆಗಮಿಸುವಂತೆ ಕೋರಿದ್ದರು. ತಮ್ಮ ಜೊತೆ ನಾನು ಚರ್ಚಿಸಲು ಉತ್ಸುಕನಾಗಿದ್ದು, ಜೂ.26 ರಂದು ಬೆಳಗ್ಗೆ 11 ಗಂಟೆಗೆ ವಿಧಾನಸೌಧಕ್ಕೆ ತಾವು ಮತ್ತು ತಮ್ಮ ತಂಡದ ಐದು ಪ್ರತಿನಿಧಿಗಳೊಂದಿಗೆ ನನ್ನ ಕಚೇರಿಗೆ ಆಗಮಿಸುವಂತೆ ತಮ್ಮನ್ನು ಕೋರುತ್ತೇನೆ ಎಂದು ಮನವಿ ಮಾಡಿದ್ದರು. ಇದಕ್ಕೆ ಪ್ರತಿಯಾಗಿ ಕೇಂದ್ರ ಸಚಿವ ಹೆಚ್. ಡಿ. ಕುಮಾರಸ್ವಾಮಿ ಅವರು ಅಂದೇ (ಜೂ.22) ಸಿಎಂ ಡಿ.ಕೆ. ಶಿವಕುಮಾರ್‌ ಗೆ ಪತ್ರ ಬರೆದು, ತಾವು ಪ್ರಸ್ತಾಪಿಸಿರುವ ಸಭೆಯನ್ನು ರಾಮನಗರ ಜಿಲ್ಲೆಯ ಬಿಡದಿ ಅಥವಾ ಬಾಧಿತ ಪ್ರದೇಶವಾದ ಭೈರಮಂಗಲದ ಯಾವುದಾದರು ಸೂಕ್ತ ಸಾರ್ವಜನಿಕ ಸ್ಥಳದಲ್ಲಿ ಸಭೆ ಕರೆಯುವುದು ಸಮಂಜಸವೆನಿಸುತ್ತದೆ.

ಈ ಮೇಲೆ ಸೂಚಿಸಿದ ಸ್ಥಳಗಳಲ್ಲಿ ಬಿಡದಿ ಸಮಗ್ರ ಉಪನಗರ ಯೋಜನೆಯಿಂದ ಬಾಧಿತರಾಗಿರುವ ರೈತರು, ಗ್ರಾಮಸ್ಥರು, ಕೃಷಿ ಕಾರ್ಮಿಕರು, ಹೈನುಗಾರಿಕೆ ಉದ್ಯಮದಲ್ಲಿರುವ ರೈತ ಮಹಿಳೆಯರು, ಸಣ್ಣ ವ್ಯಾಪಾರಸ್ಥರು, ಉದ್ಯಮಿಗಳು ಹಾಗೂ ಬಾಧಿತ ಇತರೆ ಪಾಲುದಾರರಿಗೆ ಭಾಗವಹಿಸಲು ಅವಕಾಶ ನೀಡಿದಲ್ಲಿ ಈ ಸಭೆಯಲ್ಲಿ ಮುಕ್ತ ಮನಸ್ಸಿನ ಚರ್ಚೆ ನಡೆಸಿ, ಬಾಧಿತ ವರ್ಗದ ಜನರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಅವಕಾಶವಾಗುತ್ತದೆ ಎನ್ನುವುದು ನನ್ನ ಸ್ಪಷ್ಟ ಅಭಿಪ್ರಾಯ ಮತ್ತು ನಿಲುವು ಎಂದು ತಿಳಿಸಿದ್ದರು.

ತಾವು ನಿಗದಿಪಡಿಸಿದ ಜೂ.26ರಂದು ನನಗೆ ಪೂರ್ವ ನಿಯೋಜಿತ ಕಾರ್ಯಕ್ರಮಗಳು ಇರುವುದರಿಂದ, ಈ ಉದ್ದೇಶಿತ ಸಭೆಯನ್ನು ಜೂ.27ರಂದು ಬಿಡದಿ ಅಥವಾ ಭೈರಮಂಗಲದ ಸೂಕ್ತ ಸ್ಥಳದಲ್ಲಿ ಆಯೋಜಿಸಿ ಮೇಲೆ ಕಾಣಿಸಿದ ಬಾಧಿತ ವರ್ಗದ ಜನರನ್ನು ಆಹ್ವಾನಿಸಿ, ಸಭೆ ನಡೆಸಬೇಕೆಂದು ಈ ಮೂಲಕ ಕೋರುತ್ತೇನೆ ಎಂದು ಮನವಿ ಮಾಡಿದ್ದರು. ಇದೀಗ ಮತ್ತೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಸಿಎಂಗೆ ಪತ್ರ ಬರೆದಿರುವುದು ಚರ್ಚೆಗೆ ಗ್ರಾಸವಾಗಿದೆ.

 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News