ಬೆಂಗಳೂರು | ರಾಜೇಶ್ ಎಕ್ಸ್‌ಪೋರ್ಟ್ಸ್‌ನ ಒಂಭತ್ತು ಸ್ಥಳಗಳ ಮೇಲೆ ಈಡಿ ದಾಳಿ
ಸಾಂದರ್ಭಿಕ ಚಿತ್ರ
ಬೆಂಗಳೂರು : ಚಿನ್ನ ಸಂಸ್ಕರಣೆ ಮತ್ತು ಆಭರಣ ತಯಾರಿಕಾ ಕಂಪೆನಿಯಾದ ರಾಜೇಶ್ ಎಕ್ಸ್‌ಪೋರ್ಟ್ಸ್ ನ ಪ್ರಧಾನ ಕಚೇರಿ ಸೇರಿದಂತೆ ಒಂಬತ್ತು ಸ್ಥಳಗಳಲ್ಲಿ ಜಾರಿ ನಿರ್ದೇಶನಾಲಯದ ಆಧಿಕಾರಿಗಳು ದಾಳಿ ನಡೆಸಿದ್ದಾರೆ.
ಈಗಾಗಲೇ ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಯ (ಸೆಬಿ) ವಿಚಾರಣೆ ಎದುರಿಸುತ್ತಿದ್ದ ರಾಜೇಶ್ ಎಕ್ಸ್‌ಪೋರ್ಟ್ಸ್ ಬೆಂಗಳೂರಿನಲ್ಲಿ ಪ್ರಧಾನ ಕಚೇರಿಯನ್ನು ಮುಂಬೈನಲ್ಲಿ ಪ್ರಾದೇಶಿಕ ಕಚೇರಿಗಳನ್ನು ಹೊಂದಿದೆ. ಕಂಪೆನಿಯ ಆರ್ಥಿಕ ವಂಚನೆ ಎಸಗಿದ ಆರೋಪ ಕೇಳಿ ಬಂದಿದ್ದು, ವಿದೇಶಿ ವಿನಿಮಯ ನಿರ್ವಹಣೆ ಕಾಯ್ದೆಯ(ಎಫ್‍ಇಎಂಎ) ನಿಬಂಧನೆಗಳಡಿ, ಈಡಿ ಅಧಿಕಾರಿಗಳು ಕಂಪೆನಿಯ ಒಂಬತ್ತು ಸ್ಥಳಗಳಲ್ಲಿ ದಾಳಿ ನಡೆಸಿ ತನಿಖೆ ಮಾಡಿದ್ದಾರೆ.
ಕಂಪೆನಿಯು ಆಫ್ರಿಕನ್ ಗಣಿಗಳಲ್ಲಿ 1,035 ಕೋಟಿ ಕಂಪೆನಿಯು ಹೂಡಿಕೆ ಮಾಡಿದ್ದು, ಇದುವರೆಗೆ ಯಾವುದೇ ದಾಖಲೆಗಳನ್ನು ಕಂಪೆನಿಯು ಒದಗಿಸಿಲ್ಲ. ಹೀಗಾಗಿ ಕೆಂಪನಿಯ ಆಮದು-ರಫ್ತು, ಸಾಗರೋತ್ತರ ಹೂಡಿಕೆಗಳು ಮತ್ತು ವಿದೇಶಿ ವ್ಯಾಪಾರ ಕರಾರುಗಳು ಮತ್ತು ಪಾವತಿಗಳ ಇತ್ಯರ್ಥವನ್ನು ಒಳಗೊಂಡಂತೆ ಅದರ ವಿದೇಶಿ ವಹಿವಾಟುಗಳಿಗೆ ಸಂಬಂಧಿಸಿದಂತೆ ದಾಖಲಾತಿಗಳ ನೈಜತೆಯನ್ನು ಪರಿಶೀಲಿಸುವುದು ಅಸಾಧ್ಯವಾಗಿದೆ ಎಂದು ಈಡಿ ಅಧಿಕಾರಿಗಳು ಹೇಳಿದ್ದಾರೆ.
ಕಂಪೆನಿಯು ಯುಎಇ ಮತ್ತು ಇತರ ದೇಶಗಳ ಅನುಮಾನಾಸ್ಪದ ವ್ಯಕ್ತಿಗಳಿಂದ 3 ಸಾವಿರ ಕೋಟಿ ರೂ.ಗೂ ಅಧಿಕ ಮೊತ್ತದ ವ್ಯಾಪಾರ ಸ್ವೀಕೃತಿಗಳನ್ನು ಹೊಂದಿದೆ. ಅಲ್ಲದೆ ಕಂಪೆನಿಯಲ್ಲಿ ದಾಖಲಾದ ಸ್ಟಾಕ್ ಮತ್ತು ಭೌತಿಕ ಪರಿಶೀಲನೆಯಲ್ಲಿ ದೊರೆತ ಸ್ಟಾಕ್ ನಡುವೆ ಸರಿಸುಮಾರು ಶೇ.40ರಷ್ಟು ವ್ಯತ್ಯಾಸ ಕಂಡು ಬಂದಿದೆ.
ಕಂಪೆನಿಯ ಮುಖ್ಯ ಹಣಕಾಸು ಅಧಿಕಾರಿಗೆ 2020 ರಿಂದ ಯಾವುದೇ ಸಂಬಳ ಪಾವತಿಯಾಗಿಲ್ಲ. ಕಂಪೆನಿಯ ವ್ಯವಸ್ಥಾಪಕ ನಿರ್ದೇಶಕರಿಗೆ ತಿಂಗಳಿಗೆ ಕೇವಲ 17 ಸಾವಿರ ರೂ. ಮಾತ್ರ ಪಾವತಿಯಾಗಿದೆ. ಆದರೆ ಕಂಪೆನಿಯು ಸರಿಸುಮಾರು 7.7 ಲಕ್ಷ ಕೋಟಿ ರೂ.ಗಳ ಆದಾಯವನ್ನು ಹೊಂದಿರುವುದಾಗಿ ಎಂದು ವರದಿ ಬಿಡುಗಡೆ ಮಾಡಿದೆ. ಇನ್ನು ಎನ್‍ಆರ್ ಐ ಬೇನಾಮಿದಾರರನ್ನು ಬಳಸಿಕೊಂಡು ಶೇರ್-ಮ್ಯಾನಿಪ್ಯುಲೇಷನ್ ಮೂಲಕ 600ಕೋಟಿ ರೂ.ಗಳನ್ನು ಭಾರತದಿಂದ ಹೊರಗೆ ಕಳುಹಿಸಲಾಗಿದೆ ಎಂದು ಈಡಿ ಅಧಿಕಾರಿಗಳು ಪತ್ತೆ ಮಾಡಿದ್ದಾರೆ.