×
Ad

ಪ್ರಾಣಿಗಳಿಗೂ ಹಿಂಸೆ ಇಲ್ಲದೆ ಬದುಕುವ ಹಕ್ಕಿದೆ; ಮಾಲೀಕನ ದೌರ್ಜನ್ಯಕ್ಕೊಳಗಾಗಿದ್ದ ಸಾಕು ನಾಯಿಗಳನ್ನು ಪೆಟಾ ವಶಕ್ಕೆ ನೀಡಿದ ಹೈಕೋರ್ಟ್

Update: 2026-06-25 00:26 IST


ಬೆಂಗಳೂರು : ಪ್ರಾಣಿಗಳಿಗೆ ಮಾತು ಬಾರದಿದ್ದರೂ ನೋವು ಅನುಭವಿಸುತ್ತವೆ, ಅವುಗಳಾದರೂ ಎಷ್ಟು ದಿನ ಹಿಂಸೆ ಅನುಭವಿಸಲು ಸಾಧ್ಯ? ಪ್ರಾಣಿಗಳಿಗೂ ಹಿಂಸೆಯಿಲ್ಲದೇ ಬದುಕುವ ಹಕ್ಕಿದೆ ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್‌, ಮಾಲೀಕನಿಂದ ಹಿಂಸೆ ಅನುಭವಿಸಿದ್ದ 9 ನಾಯಿಗಳನ್ನು ಪ್ರಾಣಿ ದಯಾ ಸಂಘಟನೆಯಾದ ಪೆಟಾ ವಶದಲ್ಲಿರಿಸಲು ಆದೇಶಿಸಿದೆ.

ನಾಯಿಗಳನ್ನು ಮಾಲೀಕನಿಗೆ ನೀಡುವಂತೆ ನಗರದ 31ನೇ ಎಸಿಜೆಎಂ ನ್ಯಾಯಾಲಯ ಏಪ್ರಿಲ್ 25ರಂದು ನೀಡಿದ್ದ ಆದೇಶ ರದ್ದು ಕೋರಿ ಪೀಪಲ್ಸ್‌ ಫಾರ್‌ ದಿ ಟ್ರೀಟ್‌ಮೆಂಟ್‌ ಆಫ್‌ ಅನಿಮಲ್ಸ್‌ (ಪೆಟಾ) ಸಲ್ಲಿಸಿದ್ದ ಅರ್ಜಿಯನ್ನು ಬುಧವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಮಧ್ಯಂತರ ಆದೇಶ ಮಾಡಿದೆ.

ವಿಡಿಯೊಗಳಲ್ಲಿ ನಾಯಿಗಳಿಗೆ ಕ್ರೂರವಾಗಿ ಹೊಡೆಯುವ ದೃಶ್ಯಗಳಿವೆ. ಕ್ರೌರ್ಯ ಮೆರೆದವನ ವಶಕ್ಕೆ ನಾಯಿಗಳನ್ನು ನೀಡಿರುವ ಮ್ಯಾಜಿಸ್ಟೇಟ್‌ ಆದೇಶ ಸರಿಯಲ್ಲ. ಪ್ರಾಣಿಗಳಿಗೂ ಹಿಂಸೆಯಿಂದ ರಕ್ಷಣೆ ಪಡೆದುಕೊಳ್ಳುವ ಹಕ್ಕಿದೆ. ನ್ಯಾಯಾಲಯದ ಕದ ತಟ್ಟಲಾಗದವರಿಗೂ ನ್ಯಾಯದಾನ ಸಿಗಬೇಕು. ಮೂಕ ಪ್ರಾಣಿಗಳೆಂದು ನಾವು ಅವುಗಳ ಹಕ್ಕುಗಳನ್ನು ಕಸಿದುಕೊಳ್ಳಲಾಗದು ಎಂದ ನ್ಯಾಯಪೀಠ, ನಾಯಿಗಳ ಮೇಲೆ ಅವುಗಳ ಮಾಲೀಕ ದೌರ್ಜನ್ಯವೆಸಗಿರುವುದು ದೃಢಪಟ್ಟಿದ್ದರೂ ಅಂಥ ಮಾಲೀಕನಿಗೆ ನಾಯಿಗಳನ್ನು ನೀಡುವಂತೆ ಮ್ಯಾಜಿಸ್ಟ್ರೇಟ್ ಹೇಗೆ ಆದೇಶ ನೀಡಿದರು ಎಂದು ನ್ಯಾಯಪೀಠ ಆಘಾತ ವ್ಯಕ್ತಪಡಿಸಿತು.

ಪೆಟಾ ಸಂಸ್ಥೆಯ ಪರ ವಕೀಲರು, ಮಾಲೀಕರಿಂದ ದೌರ್ಜನ್ಯ ಅನುಭವಿಸುತ್ತಿದ್ದ ನಾಯಿಗಳನ್ನು ರಕ್ಷಿಸಲಾಗಿದೆ. ಆದರೆ, ಮ್ಯಾಜಿಸ್ಟೇಟ್‌ ನ್ಯಾಯಾಲಯ ಅವುಗಳನ್ನು ಮತ್ತೆ ಮಾಲೀಕರಿಗೆ ಹಸ್ತಾಂತರ ಮಾಡಲು ಆದೇಶಿಸಿರುವುದರಿಂದ ನಾಯಿಗಳ ಪ್ರಾಣಕ್ಕೆ ಮತ್ತೆ ಆಪತ್ತು ಎದುರಾಗಿದೆ. ಆದ್ದರಿಂದ, ನಾಯಿಗಳ ರಕ್ಷಿಸುವ ಉದ್ದೇಶದಿಂದ ಅವುಗಳನ್ನು ಪೆಟಾ ಸಂಸ್ಥೆಯ ವಶಕ್ಕೆ ನೀಡಬೇಕು ಎಂದು ಮನವಿ ಮಾಡಿದರು.

ಪ್ರಕರಣವೇನು?

ನಗರದ ನಾಗಸಂದ್ರದ ನಿವಾಸಿ ಕೆ.ಇ. ರಮೇಶ್‌ ಎಂಬುವರ ಬಳಿ ಬೇರೆ ಬೇರೆ ತಳಿಯ 9 ನಾಯಿಗಳಿದ್ದವು. ಆತ ನಾಯಿಗಳ ಮೇಲೆ ಪದೇಪದೆ ವೈರ್‌ ಹಾಗೂ ಪೈಪ್‌ಗಳಿಂದ ಹಲ್ಲೆನಡೆಸುವುದು, ಲೈಂಗಿಕ ದುರ್ಬಳಕೆ ಮಾಡಿಕೊಳ್ಳುತ್ತಿರುವುದು ಕಂಡು ಬಂದಿತ್ತು. ಆತ ನಾಯಿಗಳಿಗೆ ಹಿಂಸೆ ನೀಡುತ್ತಿರುವ ಕೆಲ ವಿಡಿಯೊಗಳೊಂದಿಗೆ ನೆರೆಹೊರೆಯವರು ಪೆಟಾ ಸಂಸ್ಥೆಗೆ ದೂರು ನೀಡಿದ್ದರು. ಆ ದೂರಿನ ಮೇರೆಗೆ ಪೆಟಾ 9 ನಾಯಿಗಳನ್ನು ರಕ್ಷಿಸಿ ತನ್ನ ಸುಪರ್ದಿಯಲ್ಲಿ ಇಟ್ಟುಕೊಂಡಿತ್ತು.

ಪೆಟಾ ನೀಡಿದ್ದ ದೂರು ಆಧರಿಸಿ ಪೀಣ್ಯ ಠಾಣೆ ಪೊಲೀಸರು ಮಾಲೀಕನ ವಿರುದ್ಧ ಬಿಎನ್‌ಎಸ್‌ ಸೆಕ್ಷನ್‌ 325 ಮತ್ತು 62, ಪ್ರಾಣಿಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆಯ ಸೆಕ್ಷನ್‌11(1) ರಡಿ ಎಫ್‌ಐಆರ್‌ ದಾಖಲಾಗಿತ್ತು. ಆದರೆ, ಮಾಲೀಕ ರಮೇಶ್‌ ನ್ಯಾಯಾಲಯದ ಮೊರೆ ಹೋಗಿದ್ದರು. ಮ್ಯಾಜಿಸ್ಪ್ರೇಟ್‌ ಅವರು ನಾಯಿಗಳನ್ನು ಮಾಲೀಕನ ವಶಕ್ಕೆ ಒಪ್ಪಿಸಲು ಆದೇಶಿಸಿತ್ತು. ಈ ಆದೇಶ ಪ್ರಶ್ನಿಸಿ ಪೆಟಾ ಸಂಸ್ಥೆ ಹೈಕೋರ್ಟ್‌ ಮೊರೆ ಹೋಗಿತ್ತು. ಮೇ 21ರಂದು ವಿಚಾರಣೆ ನಡೆಸಿದ್ದ ರಜಾಕಾಲದ ನ್ಯಾಯಪೀಠ, ಮ್ಯಾಜಿಸ್ಪ್ರೇಟ್‌ ನ್ಯಾಯಾಲಯದ ಆದೇಶಕ್ಕೆ ತಡೆ ನೀಡಿ ವಿಚಾರಣೆ ಮುಂದೂಡಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News