ಎನ್‍ಇಪಿ-2020ನ್ನು ಜಾರಿಗೊಳಿಸುವ ಹುನ್ನಾರ: ಎನ್‍ಸಿಇಆರ್‌ಟಿ ಕೃಷ್ಣ ಪಠ್ಯ ಪುಸ್ತಕಕ್ಕೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಆಕ್ಷೇಪ
ಸಾಂದರ್ಭಿಕ ಚಿತ್ರ | Photo Credit : NCERT
ಬೆಂಗಳೂರು : ಎನ್‍ಸಿಇಆರ್‌ಟಿ ಸಿಬಿಎಸ್‍ಇ ಶಾಲೆಗಳಿಗೆ ಕನ್ನಡವನ್ನು ತೃತೀಯ ಭಾಷೆಯಾಗಿ ಕಲಿಸಲು ಪ್ರಕಟಿಸಿರುವ ಕನ್ನಡ ಪುಸ್ತಕಕ್ಕೆ ‘ಕೃಷ್ಣ’ ಎಂದು ಹೆಸರಿಟ್ಟಿರುವುದು ರಾಷ್ಟ್ರೀಯ ಶಿಕ್ಷಣ ನೀತಿ 2020ನ್ನು ಹಿಂಬಾಗಿಲಿನಿಂದ ಜಾರಿಗೊಳಿಸುವ ದೊಡ್ಡ ಕುತಂತ್ರ, ಹುನ್ನಾರವಾಗಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಆಕ್ಷೇಪ ವ್ಯಕ್ತಪಡಿಸಿದೆ.
ಈ ಕುರಿತು ಪ್ರಕಟನೆ ನೀಡಿರುವ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ. ಪುರುಷೋತ್ತಮ ಬಿಳಿಮಲೆ, ಸದಸ್ಯರಾದ ಪ್ರೊ.ಎ.ಬಿ. ರಾಮಚಂದ್ರಪ್ಪ, ಡಾ.ನಿರಂಜನಾರಾಧ್ಯ ವಿ.ಪಿ., ಟಿ.ಗುರುರಾಜ್, ಡಾ. ರವಿಕುಮಾರ್ ನೀಹ, ದಾಕ್ಷಾಯಿಣಿ ಹುಡೇದ, ಯಾಕೂಬ್ ಖಾದರ್, ವಿರುಪಾಕ್ಷಪ್ಪ ಕಲ್ಲೂರು, ಟಿ.ತಿಮ್ಮೇಶ್, ಕೃಷ್ಣ ನಮ್ಮ ಕರ್ನಾಟಕದ ಅಸ್ಮಿತೆಯೇನಲ್ಲ. ಕೂಡಲೇ ಈ ಪಠ್ಯವನ್ನು ಹಿಂಪಡೆದು ಕನ್ನಡದ ಅಸ್ಮಿತೆಯನ್ನು ಉಳಿಸಬಹುದಾದ ಪಠ್ಯವನ್ನು ಮರು ಜಾರಿ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಕೃಷ್ಣ ಪಠ್ಯದೊಳಗೆ ಇರುವ ವಿಷಯಗಳು ಕರ್ನಾಟಕದ ಅಸ್ಮಿತೆಯಿಂದ ಹೊರಗಿವೆ. ಋಷಿ ಪರಂಪರೆ, ಪುರುಷ ನೆಲೆ, ಆಧ್ಯಾತ್ಮದ ಹೆಸರಿನಲ್ಲಿ ಏಕ ಧರ್ಮದ ಆರಾಧನೆ, ತಳ ಸಮುದಾಯಗಳ ಪರಂಪರೆ ಆಚರಣೆಯ ಬಗೆಗೆ ವ್ಯಂಗ್ಯವಿದ್ದು, ಈ ಪಠ್ಯ ಕನ್ನಡ ಜನ ಸಮುದಾಯದ ವಿರೋಧಿಯಾಗಿದೆ ಎಂದು ತಿಳಿಸಿದ್ದಾರೆ.
ಈಗಾಗಲೇ ಕರ್ನಾಟಕದ ಸಾಂಸ್ಕೃ ತಿಕ ಚಾರಿತ್ರಿಕ ಐತಿಹಾಸಿಕ ಮಹತ್ವವನ್ನು ಅರಿತಿರುವ ಸಂಪನ್ಮೂಲ ವ್ಯಕ್ತಿಗಳು 1ರಿಂದ 10ನೇ ತರಗತಿವರೆಗೆ ಕನ್ನಡದ ಪಠ್ಯನ್ನು ಪ್ರಥಮ, ದ್ವಿತೀಯ, ತೃತೀಯ ಭಾಷೆಯಾಗಿ ಕಲಿಸಲು ಸಿದ್ಧಪಡಿಸಿದ್ದಾರೆ. ಕನ್ನಡದ ನೆಲಕ್ಕೆ ಅನುಗುಣವಾಗಿ ರಚಿತವಾಗಿದೆ ಎಂದು ತಿಳಿಸಿದ್ದಾರೆ.
ಕನ್ನಡದ ಜನಜೀವನವನ್ನು, ಸಂಸ್ಕೃ ತಿಯನ್ನು, ಆಹಾರದ ನೆಲೆಗಳನ್ನು, ಆಚರಣೆಗಳನ್ನು, ಸ್ಥಳೀಯ ವೀರರನ್ನು, ಕರ್ನಾಟಕದ ವಿವಿಧ ಭಾಗಗಳ ಮೂಲಕ ಅಸ್ಮಿತೆಯನ್ನು ಗುರುತಿಸಿ ‘ಸಿರಿಗನ್ನಡ’ ಪಠ್ಯಗಳನ್ನಾಗಿಸಿದ್ದಾರೆ. ಆಹಾರ, ಉಡುಪು, ಆಚರಣೆ, ಬದುಕಿನ ಕ್ರಮಗಳನ್ನು ತಾರತಮ್ಯಗಳಿಲ್ಲದೇ ಬೋಧಿಸಲು ಈ ಪಠ್ಯಗಳು ನೆರವಾಗಿವೆ. ಕರ್ನಾಟಕತ್ವವನ್ನು ಒಳಗೊಂಡಿವೆ. ಈ ಪಠ್ಯಗಳನ್ನು ಮುಂದುವರಿಸಿ ಕನ್ನಡದ ಅಸ್ಮಿತೆಯನ್ನು ಉಳಿಸಬೇಕಾಗಿರುವುದು ನಮ್ಮೆಲ್ಲರ ಕರ್ತವ್ಯವಾಗಬೇಕಾಗಿದೆ ಎಂದು ತಿಳಿಸಿದ್ದಾರೆ.
ಎನ್‍ಸಿಇಆರ್‌ಟಿಯ ಹಾರಿಕೆ ಉತ್ತರಕ್ಕೆ ಖಂಡನೆ: ಕರ್ನಾಟಕ ಎಂದ ತಕ್ಷಣ ನಮಗೆ ನೆನಪಾಗುವುದು ಕಾವೇರಿ. ಈ ಎನ್‍ಸಿಇಆರ್ ಟಿ ನಮಗೆ ನಮ್ಮ ನದಿಗಳ ಬಗ್ಗೆ ಏನನ್ನು ಹೇಳಲು ಹೊರಟಿದೆ? ಇದು ಕಿವಿಗೆ ಹೂವು ಇಡುವ ಕೆಲಸ. ಜೊತೆಗೆ ನಮ್ಮ ನಮ್ಮ ಆಹಾರ ಸಂಸ್ಕೃತಿಗೆ ಅನುಗುಣವಾಗಿ ಸಮತೋಲನ ಆಹಾರವೆಂದರೆ ಮಾಂಸಹಾರವನ್ನು ಒಳಗೊಂಡಿರುತ್ತದೆ. ಆದರೆ ಇದನ್ನು ಸ್ಪಷ್ಟವಾಗಿ ಎಲ್ಲೂ ಉಲ್ಲೇಖಿಸಿಯೂ ಇಲ್ಲ. ಹೇಳಿಯೂ ಇಲ್ಲ. ಅವರು ಉಲ್ಲೇಖಿಸಿರುವ ಪುಟ 63ರ ಚಿತ್ರದಲ್ಲಿ ಮುದ್ದೆ, ಸಾರು, ಇಡ್ಲಿ ಚಟ್ನಿ, ತರಕಾರಿ, ಹಾಲು, ಮೊಟ್ಟೆ ಮತ್ತು ಪಕ್ಕದಲ್ಲಿ ಹಣ್ಣು ಹಂಪಲು ಬಿಟ್ಟರೆ ಮೀನು, ಮಾಂಸ ಇತರೆ ಮಾಂಸಹಾರ ಪ್ರತಿನಿಧಿಸುವ ಚಿತ್ರ ಎಲ್ಲಿಯೂ ಇಲ್ಲ. ಈ ಮಟ್ಟಕ್ಕೆ ಎನ್‍ಸಿಇಆರ್‍ಟಿ ಸುಳ್ಳು ಸ್ಪಷ್ಟನೆ ನೀಡುತ್ತದೆ ಎಂದು ನಿರೀಕ್ಷಿಸಿರಲಿಲ್ಲ. ಎನ್‍ಸಿಇಆರ್‍ಟಿ ನಮ್ಮ ರಾಜ್ಯದ ಶೈಕ್ಷಣಿಕ ಪ್ರಾಧಿಕಾರವಾದ ಡಿಎಸ್‍ಇಆರ್‍ಟಿಯನ್ನು ಏಕೆ ಒಳಗೊಳ್ಳಲಿಲ್ಲ ಎಂದು ಹೇಳಬೇಕಿತ್ತು. ನಮ್ಮ ತಿಳಿ ಕನ್ನಡ, ನಲಿ ಕನ್ನಡ, ಸಿರಿ ಕನ್ನಡ ಪುಸ್ತಕಗಳನ್ನು ಏಕೆ ಬಳಸುವುದಿಲ್ಲ ಎಂದು ಹೇಳಬೇಕಿತ್ತು. ಅದಾವುದನ್ನು ಹೇಳದೇ ಹಾರಿಕೆ ಉತ್ತರ ನೀಡಿರುವುದು ಖಂಡನೀಯ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು, ಸದಸ್ಯರು ತಿಳಿಸಿದ್ದಾರೆ.