ಬಿಡದಿ ಟೌನ್‍ಶಿಪ್ ವಿಚಾರ; ವಿಧಾನಸೌಧದಲ್ಲಿ ಚರ್ಚಿಸಿ ಇತ್ಯರ್ಥಪಡಿಸಬೇಕು : ಎಸ್.ಟಿ.ಸೋಮಶೇಖರ್
"ಅಡ್ಡ ಮತದಾನವಾಗಲು ವಿಜಯೇಂದ್ರ, ಆರ್.ಅಶೋಕ್ ಅವರ ನಡುವಿನ ಒಳಜಗಳವೇ ಕಾರಣ"
ಬೆಂಗಳೂರು : ಬೆಂಗಳೂರು ದಕ್ಷಿಣ ಜಿಲ್ಲೆ ರಾಮನಗರ ತಾಲೂಕಿನ ಬಿಡದಿ ಟೌನ್‍ಶಿಪ್ ವಿಚಾರವಾಗಿ ವಿಧಾನಸೌಧದಲ್ಲೇ ಸಭೆ ನಡೆಸಿ ಇತ್ಯರ್ಥಪಡಿಸುವುದು ಸೂಕ್ತ ಎಂದು ಯಶವಂತಪುರ ಕ್ಷೇತ್ರದ ಬಿಜೆಪಿ ಉಚ್ಛಾಟಿತ ಶಾಸಕ ಎಸ್.ಟಿ.ಸೋಮಶೇಖರ್ ತಿಳಿಸಿದ್ದಾರೆ.
ಗುರುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈವರೆಗೂ ಯಾವುದೇ ವಿವಾದಗಳು ಪ್ರತಿಭಟನೆ, ಧರಣಿಯ ಸ್ಥಳದಲ್ಲಿ ಇತ್ಯರ್ಥವಾಗಿಲ್ಲ. ಈ ಹಿಂದೆ ಕಾವೇರಿ ನೀರಿನ ವಿಚಾರದ ಸಂದರ್ಭದಲ್ಲಿ ವಿಧಾನಸೌಧದಲ್ಲೇ ಸರ್ವಪಕ್ಷ ಸಭೆ ಮಾಡಲಾಗಿದೆ. ಅದೇ ರೀತಿಯಲ್ಲಿ ಕೆಂಪೇಗೌಡ ಬಡಾವಣೆಯ ವಿವಾದದ ಸಂದರ್ಭದಲ್ಲೂ ವಿಧಾನಸೌಧದಲ್ಲಿ ಸಭೆಯಾಗಿತ್ತು ಎಂದು ಹೇಳಿದರು.
ಬಿಡದಿಯ ಉಪನಗರ ವಿವಾದದ ವಿಚಾರವಾಗಿಯೂ ವಿಧಾನಸೌಧದಲ್ಲೇ ಚರ್ಚೆಯಾಗಬೇಕು. ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ 5 ಮಂದಿ ತಮ್ಮ ಪ್ರತಿನಿಧಿಗಳ ಜೊತೆ ವಿಧಾನಸೌಧದ ಸಭೆಗೆ ಆಗಮಿಸುವುದು ಒಳ್ಳೆಯದು. ಎಲ್ಲ ರೈತರ ಸಮ್ಮುಖದಲ್ಲಿ ಬಗೆ ಹರಿಯಬೇಕೆಂಬುದು ಸೂಕ್ತವಲ್ಲ ಎಂದುಅವರು ತಿಳಿಸಿದರು.
ಒಳ ಜಗಳವೇ ಕಾರಣ: ವಿಧಾನಸಭೆಯಿಂದ ವಿಧಾನ ಪರಿಷತ್ತಿನ ಏಳು ಸದಸ್ಯರ ಆಯ್ಕೆ ಚುನಾವಣೆಯಲ್ಲಿ ಅಡ್ಡ ಮತದಾನವಾಗಲು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರ ನಡುವಿನ ಒಳ ಜಗಳವೇ ಕಾರಣ. ಇಬ್ಬರಿಗೂ ಪರಸ್ಪರ ಬೆಂಬಲಿತ ಅಭ್ಯರ್ಥಿಗಳನ್ನು ಸೋಲಿಸಬೇಕೆಂಬ ಪೈಪೋಟಿ ಇದೆ ಎಂದು ಅವರು ದೂರಿದರು.
ಹೀಗಾಗಿ ವಿಜಯೇಂದ್ರ ಮತ್ತು ಅಶೋಕ್ ಇಬ್ಬರೇ ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಹೋಗಿ ಆಣೆ-ಪ್ರಮಾಣ ಮಾಡಿದರೆ ಸಾಕು. ಬಿಜೆಪಿಯ 63 ಮಂದಿ ಶಾಸಕರೂ ಹೋಗಿ ಪ್ರಮಾಣ ಮಾಡುವ ಅಗತ್ಯ ಇಲ್ಲ. ಅಡ್ಡ ಮತದಾನದ ಕಾರಣಕ್ಕೆ ಬೇರೆ ಯಾರನ್ನು ಅಮಾನತು ಮಾಡಿ ಗೂಬೆ ಕೂರಿಸುವ ಪ್ರಯತ್ನ ಸರಿಯಲ್ಲ ಎಂದು ಸೋಮಶೇಖರ್ ಆಕ್ಷೇಪಿಸಿದರು.
ಬಿಜೆಪಿಯ ಶಾಸಕರನ್ನು ಮೊದಲೇ ಸಭೆ ಕರೆದು, ಚರ್ಚಿಸಿ ಬಿಗಿ ಮಾಡಬೇಕಿತ್ತು. ಕಾಂಗ್ರೆಸ್ ಪಕ್ಷವು ಮೊದಲೇ ಎಚ್ಚೆತ್ತುಕೊಂಡು 135 ಮಂದಿ ಶಾಸಕರನ್ನು ಒಂದು ಕಡೆ ಸೇರಿಸಿ, ಚುನಾವಣೆಗೆ ಸೂಕ್ತ ತರಬೇತಿ ನೀಡಿದ್ದರು. ಅಡ್ದ ಮತದಾನ ಅಥವಾ ಮತ ಅಸಿಂಧುವಾದರೆ ಏನೆಲ್ಲಾ ಸಮಸ್ಯೆಗಳಾಗುತ್ತದೆ ಎಂದು ಜಾಗೃತಿ ಮೂಡಿಸಿದ್ದರು. ಬಿಜೆಪಿ ಇಂತಹ ಯಾವುದೇ ಕ್ರಮವನ್ನು ಕೈಗೊಂಡಿರಲಿಲ್ಲ ಎಂದು ಅವರು ಆರೋಪಿಸಿದರು.