ಬೆಂಗಳೂರು | ದರೋಡೆ ಪ್ರಕರಣದಲ್ಲಿ ನಾಲ್ವರ ಬಂಧನ; 9 ಮೊಬೈಲ್, ಮೂರು ದ್ವಿಚಕ್ರ ವಾಹನಗಳು ವಶ
ಸಾಂದರ್ಭಿಕ ಚಿತ್ರ | PC : freepik
ಬೆಂಗಳೂರು : ಡೆಲಿವರಿ ಬಾಯ್‍ಗಳ ಮೊಬೈಲ್‍ಗಳನ್ನೇ ಗುರಿಯಾಗಿಸಿಕೊಂಡು ದರೋಡೆ ಮಾಡುತ್ತಿದ್ದ ಪ್ರಕರಣದಡಿ ನಾಲ್ವರು ಆರೋಪಿಗಳನ್ನು ಬಂಧಿಸಿರುವ ಬೆಳ್ಳಂದೂರು ಠಾಣೆಯ ಪೊಲೀಸರು, ಅವರಿಂದ 9 ಮೊಬೈಲ್‍ಗಳು ಹಾಗೂ ಮೂರು ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆದುಕೊಂಡಿರುವುದಾಗಿ ತಿಳಿಸಿದ್ದಾರೆ.
ದರೋಡೆಗೊಳಗಾದ ಸುರೇಶ್(22) ಎಂಬುವರು ನೀಡಿದ ದೂರಿನನ್ವಯ ನೇಪಾಳ ಮೂಲದ ಪಾರಸ್‍ಸಿಂಗ್(25), ಮುಕೇಶ್ ಸಾಯಿ(19), ಬಿಪಿನ್ ಕರ್ಕಿ(20), ಸಮೀರ್ ಲೋಹಾರ್ ಎಂಬುವರನ್ನು ಬಂಧಿಸಲಾಗಿದೆ. ಆರೋಪಿಗಳು ಜೀವನಕ್ಕಾಗಿ ನಗರದ ಖಾಸಗಿ ಕಂಪೆನಿಗಳಲ್ಲಿ ಭದ್ರತಾ ಸಿಬ್ಬಂದಿ ಹಾಗೂ ಮನೆಗೆಲಸದ ವೃತ್ತಿಗಳಲ್ಲಿ ತೊಡಗಿದ್ದರು. ಸದ್ಯ ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಸುಲಭವಾಗಿ ಹಣ ಸಂಪಾದನೆ ಮಾಡಲು ಸಂಚು ರೂಪಿಸಿದ ಆರೋಪಿಗಳು, ಪ್ರತಿದಿನ ರಾತ್ರಿ ವೇಳೆ ಫುಡ್ ಡೆಲಿವರಿ ಬಾಯ್‍ಗಳ ದ್ವಿಚಕ್ರ ವಾಹನ ಅಡ್ಡಗಟ್ಟಿ ಹಲ್ಲೆ ಮಾಡಿ, ಮೊಬೈಲ್ ದೋಚಿ ಪರಾರಿಯಾಗುತ್ತಿದ್ದರು. ಬೆಳ್ಳಂದೂರು ಮಾತ್ರವಲ್ಲದೇ, ಹೆಬ್ಬಗೋಡಿ, ಪರಪ್ಪನ ಅಗ್ರಹಾರ, ಬಂಡೆಪಾಳ್ಯ, ಎಚ್‍ಎಸ್‍ಆರ್ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ 9 ಮೊಬೈಲ್‍ಗಳನ್ನು ದೋಚಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.